146 ಗ್ರಂಥಪಾಲಕ ಹುದ್ದೆ ಖಾಲಿಯಿದ್ದರೂ ಪ್ರಸ್ತಾವ ಸಲ್ಲಿಸದ ‘ಕಾಲೇಜು ಶಿಕ್ಷಣ ಇಲಾಖೆ’

Update: 2023-11-05 06:16 GMT

ರಾಜ್ಯದಲ್ಲಿ ರುವ ನಾಲ್ಕು ವಿವಿಗಳಿಂದ ಪ್ರತೀ ವರ್ಷ 100ಕ್ಕೂ ಅಧಿಕ ಮಂದಿ ಲೈಬ್ರರಿ ಸೈನ್ಸ್ನಲ್ಲಿ ಎಂಎಸ್ಸಿ ಪದವಿಯನ್ನು ಪಡೆದುಕೊಂಡು ಹೊರಬರುತ್ತಿದ್ದಾರೆ. ಈ ಕೋರ್ಸ್ ಮುಗಿಸಿದವರಿಗೆ ಸರಕಾರಿ ಕಾಲೇಜುಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದ್ದರೂ, ಹತ್ತು ವರ್ಷಗಳಿಂದ ಯಾವುದೇ ಸರಕಾರ ಸಕಾಲದಲ್ಲಿ ಹುದ್ದೆ ಭರ್ತಿ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಸರಕಾರಿ ಕಾಲೇಜುಗಳ ಗ್ರಂಥಾಲಯ ಸಮರ್ಪಕವಾಗಿ ನಿರ್ವಹಣೆಯಾಗದೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಮತ್ತೊಂದಡೆ ಲೈಬ್ರರಿ ಸೈನ್ಸ್ ಪದವಿ ಪಡೆದವರು ಖಾಸಗಿ ಕಾಲೇಜುಗಳನ್ನೇ ಅನುಸರಿಸುವ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ.

ನವೀನ್, ಲೈಬ್ರರಿ ಸೈನ್ಸ್ ಪದವೀಧರ

ಬೆಂಗಳೂರು: ರಾಜ್ಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು 146 ಗ್ರಂಥಪಾಲಕ ಹುದ್ದೆಗಳು ಖಾಲಿ ಇದ್ದು, ಸರಕಾರ ಈ ಹುದ್ದೆ ತುಂಬುವ ಬದಲಾಗಿ, ಕಾಲೇಜುಗಳಲ್ಲಿರುವ ಪ್ರಾಧ್ಯಾಪಕರಿಗೆ ಗ್ರಂಥಾಲಯಗಳನ್ನು ನಿರ್ವಹಣೆ ಮಾಡಲು ಸೂಚಿಸಿದೆ. ಈ ಪ್ರಭಾರ ಹುದ್ದೆಯನ್ನು ವಹಿಸಿಕೊಳ್ಳಲು ಪ್ರಾಧ್ಯಾಪಕರು ಮುಂದೆ ಬಾರದ ಕಾರಣ ಕಾಲೇಜುಗಳ ಗ್ರಂಥಾಲಯ ನಿರ್ವಹಣೆಗೆ ತೊಂದರೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಒಟ್ಟು 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಈ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಲು ಒಟ್ಟು 390 ಗ್ರಂಥಪಾಲಕ ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆ. ಇದರಲ್ಲಿ 244 ಹುದ್ದೆಗಳನ್ನು ತುಂಬಲಾಗಿದ್ದು, 146 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ತುಂಬಲು ರಾಜ್ಯ ಸರಕಾರ ಇದುವರೆಗೂ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

2020ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಕಾಲೇಜುಗಳಲ್ಲಿ ಗ್ರಂಥಪಾಲಕ ಹುದ್ದೆಗಳು ಖಾಲಿ ಇದ್ದರೆ, ಆ ಹುದ್ದೆಗಳನ್ನು ಸಹ ಪ್ರಾಧ್ಯಾಪಕರೇ ಹೆಚ್ಚಿನ ಪ್ರಭಾರವಾಗಿ ನಿರ್ವಹಣೆ ಮಾಡಬೇಕು ಎಂದು ಕಾಲೇಜು ಪ್ರಾಂಶುಪಾಲರಿಗೆ ಆದೇಶ ಮಾಡಿತ್ತು. ಈಗ ಕಾಂಗ್ರೆಸ್ ಸರಕಾರವು ಇದೇ ಆದೇಶವನ್ನೇ ಮುಂದುವರಿಸಿದೆ ವಿನಾ ಹುದ್ದೆಗಳನ್ನು ತುಂಬಿಕೊಳ್ಳಲು ಹೊಸ ಪ್ರಸ್ತಾವನೆಯನ್ನು ಸಲ್ಲಿಸದೆ ಇರುವುದು ಬಹಿರಂಗವಾಗಿದೆ.

ಗ್ರಂಥಾಲಯಗಳ ನಿರ್ವಹಣೆಗಾಗಿ ಗ್ರಂಥ ಪಾಲಕರ ಕೊರತೆ ಇರುವ ಕಾಲೇಜುಗಳಲ್ಲಿ ಗ್ರಂಥಾಲಯದ ಪ್ರಭಾರ ವಹಿಸಿಕೊಳ್ಳುವ ಬಗ್ಗೆ ಇಲಾಖೆಯಿಂದ ಸುತ್ತೋಲೆಗಳನ್ನು ಹೊರ ಡಿಸಿದ್ದರೂ ಕಾಲೇಜುಗಳಲ್ಲಿ ಪ್ರಭಾರವನ್ನು ವಹಿಸಿಕೊಳ್ಳಲು ಪ್ರಾಧ್ಯಾಪಕರು ಮುಂದೆ ಬರುತ್ತಿಲ್ಲ. ಇದರಿಂದ ಗ್ರಂಥಾಲಯ ನಿರ್ವ ಹಣೆಯಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಗೆ ದೂರುಗಳು ಬರುತ್ತಿವೆ.

ಗ್ರಂಥಪಾಲಕರ ಕೊರತೆ ಇರುವ ಕಾಲೇಜುಗಳಲ್ಲಿ ಗ್ರಂಥಾಲಯದ ಪೂರ್ಣ ಪ್ರಭಾರವನ್ನು ಕಾರ್ಯ ಭಾರ ಕೊರತೆ ಇರುವ ಬೋಧಕರಿಗೆ ಪ್ರಭಾರವಹಿಸಬೇಕು. ಒಂದು ವೇಳೆ ಎಲ್ಲ ಖಾಯಂ ಬೋಧ ಕರಿಗೆ ಪೂರ್ಣ ಪ್ರಮಾಣದ ಕಾರ್ಯಭಾರವಿದ್ದಲ್ಲಿ, ಸೇವಾ ಜೇಷ್ಠತೆಯಲ್ಲಿ ಕಿರಿಯರಾದ ಖಾಯಂ ಬೋಧಕರಿಗೆ ಪ್ರಭಾರವನ್ನು ಕಡ್ಡಾಯವಾಗಿ ವಹಿಸಿಕೊಡುವಂತೆ ಪ್ರಾಂಶುಪಾಲರಿಗೆ ಇಲಾಖೆಯು ಸೂಚಿಸಿದೆ, ಹೊರತಾಗಿ ಹುದ್ದೆ ನೇಮಕಾತಿಗೆ ಮುಂದಾಗುತ್ತಿಲ್ಲ.

ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾಗುವಂತೆ ಗ್ರಂಥಾಲಯವನ್ನು ನಿರಂತರವಾಗಿ ನಿರ್ವಹಿಸಬೇಕು. ಗ್ರಂಥಾಲಯದ ಪ್ರಭಾರವನ್ನು ವಹಿಸಿಕೊಳ್ಳಲು ನಿರಾಕರಿಸಿದ ಪಕ್ಷದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯು ಆದೇಶಿಸಿರುವುದು ಪ್ರಾಧ್ಯಾಪಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಹತ್ತು ವರ್ಷಗಳ ಹಿಂದೆ ಪದವಿ ಓದುತ್ತಿರುವಾಗ ಲೈಬ್ರರಿ ಸೈನ್ ಕೋರ್ಸ್ ಮುಗಿಸುವವರಿಗೆ ಬೇಗ ಕೆಲಸ ಸಿಗುತ್ತದೆ ಎಂದು ಬೋಧಕರು ಹೇಳುತ್ತಿದ್ದರು. ಹಾಗಾಗಿ ಲೈಬ್ರರಿ ಸೈನ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದೆ. ಖಾಸಗಿ ಕಾಲೇಜುಗಳು ನ್ಯಾಕ್ ಸಮಿತಿಯು ಪರಿಶೀಲನೆಗೆ ಬರುವ ಸಂದರ್ಭದಲ್ಲಿ ಗ್ರಂಥಪಾಲಕರನ್ನು ನೇಮಿಸಿಕೊಳ್ಳುತ್ತವೆ. ನಂತರ ಅವರನ್ನು ಕೆಲಸದಿಂದ ತೆಗೆದು ಗ್ರಂಥಾಲಯಗಳಿಗೆ ಎಸೆಸೆಲ್ಸಿ ಪಾಸಾದರನ್ನು ನೇಮಕ ಮಾಡಿಕೊಳ್ಳುತ್ತವೆ. ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಕೆಲಸ ಸಿಗುತ್ತಿಲ್ಲ. ಇತ್ತ ಸರಕಾರವು ಖಾಲಿಯಿರುವ ಗ್ರಂಥಪಾಲಕರ ಹುದ್ದೆಗಳನ್ನು ತುಂಬುತ್ತಿಲ್ಲ.

ಶಶಿ ಕುಮಾರ್, ಲೈಬ್ರರಿ ಸೈನ್ಸ್ ಪದವೀಧರ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - -ಅನಿಲ್ ಕುಮಾರ್ ಎಂ.

contributor

Similar News