ಸನಾತನಿಗಳ ಸಂಚು: ಬೋಸ್ ರ ಹೋರಾಟದ ಕಿರೀಟ ಸಾವರ್ಕರ್ ತಲೆಗೆ?
ಇಂದು ಜಾಲತಾಣದಲ್ಲಿ ಎಲ್ಲಾ ಪುಸ್ತಕಗಳೂ ಓದಲು ದೊರಕುತ್ತವೆ. ಸನಾತನಿಗಳ ಸುಳ್ಳುಗಳನ್ನು ಹಿಡಿದು ಹಾಕುವುದು ಈಗ ಸುಲಭವಾಗಿದೆ. ಆದರೂ ಇವರು ಇಷ್ಟೊಂದು ಸುಳ್ಳುಗಳನ್ನು ಇಂದಿಗೂ ಹರಡುತ್ತಿದ್ದಾರೆ. ಸ್ವಲ್ಪ ಯೋಚನೆ ಮಾಡಿ, ಜಾಲತಾಣ ಇಲ್ಲದೆ ಇವರ ಪುಸ್ತಕಗಳು, ಗ್ರಂಥಗಳು ಅಲಭ್ಯವಾಗಿದ್ದಾಗ, ಇವರ ಗ್ರಂಥಗಳ ಭಾಷೆ ಜನಸಾಮಾನ್ಯರಿಗೆ ತಿಳಿಯದೇ ಇದ್ದಾಗ, ಇವರು ಏನೆಲ್ಲ ಅನಾಹುತಗಳನ್ನು ಮಾಡಿರಬಹುದು?
ಸನಾತನಿಗಳು (ಬಿಜೆಪಿ, ಆರೆಸ್ಸೆಸ್, ಹಿಂದೂ ಮಹಾಸಭಾ ಬಜರಂಗ ದಳ ಇತ್ಯಾದಿ) ಸುಳ್ಳುಗಳನ್ನು, ಅರ್ಧಸತ್ಯಗಳನ್ನು ಹೇಳುವುದರಲ್ಲಿ, ಹರಡುವುದರಲ್ಲಿ ಎತ್ತಿದ ಕೈ. ಸುಭಾಷ್‌ಚಂದ್ರ ಬೋಸ್ ಅವರ ಬಗ್ಗೆಯೂ ಅವರು ಸುಳ್ಳುಗಳನ್ನು ಹರಡುತ್ತಿದ್ದಾರೆ. 1941ರ ಜೂನ್ 22ರಂದು ಬೋಸ್ ಅವರು ಸಾವರ್ಕರ್ ಅವರನ್ನು ಭೇಟಿಯಾಗಿದ್ದರೆಂದೂ ಆ ಭೇಟಿಯಲ್ಲಿಯೇ ಸಾವರ್ಕರ್ ಅವರು ಬೋಸ್ ಅವರಿಗೆ ಜರ್ಮನಿಗೆ ಹೋಗಲು ಪ್ರೇರೇಪಿಸಿದರೆಂದೂ ಹೇಳುತ್ತಾರೆ. ಆದರೆ ಬೋಸ್ ಅವರು ಅಂದು ಸಾವರ್ಕರ್ ಅವರನ್ನು ಭೇಟಿಯಾದುದು ಎಲ್ಲಿ ದಾಖಲಾಗಿದೆ? ಬರಿ ಸಾವರ್ಕರ್ ಅವರ ವೆಬ್‌ಸೈಟಿನಲ್ಲಿ. ಅದನ್ನೇ ಇತರರೂ ಅನುಸರಿಸಿ ಈ ಭೇಟಿಯ ಬಗ್ಗೆ ಹೇಳುತ್ತಾರೆ. ಸಾವರ್ಕರ್ ಅವರು ಬರೆದ ಯಾವ ಲೇಖನದಲ್ಲಿಯೂ ಇದರ ಉಲ್ಲೇಖವಿಲ್ಲ. ವಿನಾಯಕ ಸಾವರ್ಕರ್ ಅವರ ಅಣ್ಣ ಗಣೇಶ (ಇವರನ್ನು ಬಾಬಾಸಾಹೇಬ ಎಂದೂ ಕರೆಯುತ್ತಿದ್ದರು) ಸಾವರ್ಕರ್ ಅವರು ಬರೆದ ತಮ್ಮ ಆತ್ಮಚರಿತ್ರೆಯಲ್ಲಿಯೂ ಇದರ ಬಗ್ಗೆ ಪ್ರಸ್ತಾಪವೇ ಇಲ್ಲ. 1937ರಿಂದ 7 ವರ್ಷ ಸಾವರ್ಕರ್ ಅಖಿಲ ಭಾರತ ಹಿಂದೂ ಮಹಾಸಭೆಯ ಅಧ್ಯಕ್ಷರಾಗಿದ್ದರೂ ಹಿಂದೂ ಮಹಾಸಭೆ ಪ್ರಕಟಿಸಿದ ಅದರ ಇತಿಹಾಸದಲ್ಲಿಯೂ ಈ ಭೇಟಿಯ ಉಲ್ಲೇಖವಿಲ್ಲ. ಬೋಸ್ ಎಡಪಂಥೀಯರಾಗಿದ್ದರು ಹಾಗೂ ಸಾವರ್ಕರ್ ಬಲಪಂಥೀಯರಾಗಿದ್ದರು. ಹಾಗಿರುವಾಗ ಖಚಿತ ದಾಖಲೆಗಳ ಅಭಾವದಲ್ಲಿ ಬೋಸ್ ಅವರು ಸಾವರ್ಕರ್ ಅವರನ್ನು ಭೇಟಿಯಾಗಿದ್ದರೇ, ಅವರಿಂದ ಪ್ರಭಾವಿತರಾಗಿದ್ದರೇ ಎನ್ನುವುದು ಸಂದೇಹಾಸ್ಪದವಾಗುತ್ತದೆ.
ತಮ್ಮ ಅಭಿಪ್ರಾಯಗಳಿಗೆ ಬೆಂಬಲವನ್ನು ಅರಸಿ ಬೋಸ್ ಭಾರತದಾದ್ಯಂತ ಪ್ರವಾಸ ಮಾಡಿದ್ದರೆಂದೂ, ಅದರ ಅಂಗವಾಗಿ ಅವರು ಮುಸ್ಲಿಮ್ ಲೀಗಿನ ಮುಖಂಡ ಜಿನ್ನಾ ಅವರನ್ನು ಭೇಟಿಯಾಗಿದ್ದರೆಂದೂ, ಬೋಸ್ ಅವರು ಸಾವರ್ಕರ್ ಅವರನ್ನೂ ಭೇಟಿಯಾಗಿ ಅವರ ಅಭಿಪ್ರಾಯವನ್ನೂ ಪಡೆಯಬೇಕೆಂದು ಜಿನ್ನಾ ಅವರು ಮಾಡಿದ ಸಲಹೆಯಂತೆ ಬೋಸ್ ಅವರು ಸಾವರ್ಕರ್ ಅವರನ್ನು ಭೇಟಿ ಮಾಡಿದ್ದರೆಂದೂ, ಈ ಭೇಟಿಯಲ್ಲಿಯೇ ಸಾವರ್ಕರ್ ಅವರು ಬೋಸ್ ಅವರಿಗೆ ಜರ್ಮನಿಗೆ ಹೋಗಲು ಹೇಳಿದ್ದಾಗಿಯೂ ಸಾವರ್ಕರ್ ಅವರ ಜೀವನ ಚರಿತ್ರೆ ಬರೆದ ವಿಕ್ರಮ ಸಂಪತ್ ಹೇಳುತ್ತಾರೆ.
‘‘ಈ ಭೇಟಿಯಲ್ಲಿ ಬೋಸ್ ಅವರು ಹಿಂದೂ-ಮುಸ್ಲಿಮ್ ಐಕ್ಯತೆಯ ಮರೀಚಿಕೆಯ ಹಿಂದೆ ಓಡದೆ ಯುದ್ಧದಲ್ಲಿ ಬ್ರಿಟನ್‌ನ ಶತ್ರುಗಳಾದ ಜಪಾನ್, ಇಟಲಿ ಮತ್ತು ಜರ್ಮನಿಯಂತಹ ದೇಶಗಳ ಸಹಾಯವನ್ನು ಕೇಳಬೇಕೆಂದು ಸಾವರ್ಕರ್ ಬೋಸ್ ಅವರಿಗೆ ಬಲವಾಗಿ ಸಲಹೆ ನೀಡಿದರು. ಬೋಸ್ ಅವರು ಭಾರತದಿಂದ ಪಲಾಯನ ಮಾಡಬೇಕೆಂದೂ ಜರ್ಮನಿ ಅಥವಾ ಜಪಾನಿಗೆ ತೆರಳಿ ಅಲ್ಲಿ ಸೆರೆಹಿಡಿಯಲಾಗಿದ್ದ ಭಾರತದ ಸೈನಿಕರನ್ನು ಬಿಡಿಸಿಕೊಂಡು ಒಂದು ಸೈನ್ಯವನ್ನು ಕಟ್ಟಬೇಕೆಂದೂ ಬಂಗಾಳ ಕೊಲ್ಲಿಯ ಮೂಲಕ ಬ್ರಿಟಿಷ್ ಭಾರತದ ಮೇಲೆ ದಾಳಿ ಮಾಡಬೇಕೆಂದೂ ಅವರು ಬೋಸ್ ಅವರಿಗೆ ಸಲಹೆ ನೀಡಿದರು. ಇದೇ ಬ್ರಿಟಿಷರನ್ನು ದೇಶದಿಂದ ಹೊರಹಾಕುವ ಏಕೈಕ ಮಾರ್ಗವಾಗಿದೆಯೇ ಹೊರತು ಸಾಮೂಹಿಕ ಪ್ರತಿಭಟನೆಗಳು ಅಥವಾ ಪ್ರದರ್ಶನಗಳಲ್ಲ ಎನ್ನುವುದು ಅವರ ಖಚಿತ ಅಭಿಪ್ರಾಯವಾಗಿತ್ತು’’ ಎಂದು ಸಾವರ್ಕರ್ ಅವರ ಕಾರ್ಯದರ್ಶಿಯಾಗಿದ್ದ ಬಾಲಾರಾವ್ ಸಾವರ್ಕರ್ ಅವರು ನಿರೂಪಿಸುತ್ತಾರೆ ಎಂದು ವಿಕ್ರಮ ಸಂಪತ್ ಬರೆಯುತ್ತಾರೆ. ಈ ನಿರೂಪಣೆಗೆ ಸಾವರ್ಕರ್ ಅವರ ಕಾರ್ಯದರ್ಶಿ ಬಾಲಾರಾವ್ ಅವರ ಪತ್ರಿಕಾ ತುಣುಕುಗಳ ಸಂಕಲನವಾದ ‘ಹಿಂದೂ ಮಹಾಸಭಾ ಪರ್ವ’ದ ಪುಟ 348ನ್ನು ಉಲ್ಲೇಖಿಸಿಸುತ್ತಾರೆ.
ಸಾವರ್ಕರ್ ಅವರ ಕಾರ್ಯದರ್ಶಿ ಬಾಲಾರಾವ್ ಅವರು ಕಲಕತ್ತೆಯ ಕೆ.ಸಿ.ದಾಸ ಎನ್ನುವವರಿಗೆ 2 ಜೂನ್ 1954ರಲ್ಲಿ ಬರೆದ ಒಂದು ಪತ್ರವನ್ನು ತಮ್ಮ ಪುಸ್ತಕ ‘ದ ಟು ಗ್ರೇಟ್ ಇಂಡಿಯನ್ಸ್ ಇನ್ ಜಪಾನ್: ರಾಶಬಿಹಾರಿ ಬೋಸ್ ಆ್ಯಂಡ್ ಸುಭಾಷ್‌ಚಂದ್ರ ಬೋಸ್’ದ ಪುಟ 95ರಲ್ಲಿ ಜಾರ್ಜಸ್ ಒಹ್‌ಸಾವಾ (ಇವರ ಇನ್ನೊಂದು ಹೆಸರು ಯುಕಿಕಾಝು ಸಕುರಾಸವಾ ಆಗಿತ್ತು) ದಾಖಲಿಸಿದ್ದಾರೆ. ಇದನ್ನೇ ವಿಕ್ರಮ ಸಂಪತ್ ತಮ್ಮ ಪುಸ್ತಕ ‘ಸಾವರ್ಕರ್: ಎ ಕಂಟೆಸ್ಟೆದ್ ಲಿಗಸಿ 1924-1966’ನ ಪುಟ 265ರಲ್ಲಿ ಪುನರಾವರ್ತಿಸುತ್ತಾರೆ.
ಆ ಪತ್ರದಲ್ಲಿ ಮುಂಬೈಯಲ್ಲಿರುವ ಸಾವರ್ಕರ್ ಸದನದಲ್ಲಿ ನೇತಾಜಿ ಸುಭಾಷ್ ಬಾಬು ಮತ್ತು ಸಾವರ್ಕರ್ ನಡುವೆ ಖಾಸಗಿ ಮತ್ತು ವೈಯಕ್ತಿಕ ಭೇಟಿ ನಡೆಯಿತು ಎಂದು ಇಲ್ಲಿ ಹೇಳಬಯಸುತ್ತೇನೆ. ಬೋಸ್ ಅವರು ಭಾರತವನ್ನು ತೊರೆಯಬೇಕು ಹಾಗೂ ಜರ್ಮನಿಗೆ ಹೋಗಿ ಅಲ್ಲಿ ಜರ್ಮನರ ಕೈವಶವಾಗಿರುವ ಭಾರತದ ಸೈನಿಕರನ್ನು ಸಂಘಟಿಸಲು ಪ್ರಯತ್ನಿಸಬೇಕು ಹಾಗೂ ನಂತರ ಜರ್ಮನಿಯ ಸಹಾಯದಿಂದ ಜಪಾನಿಗೆ ಹೋಗಿ ಅಲ್ಲಿ ರಾಶಬಿಹಾರಿ ಬೋಸ್ ಅವರೊಂದಿಗೆ ಕೈಜೋಡಿಸುವ ಪ್ರಯತ್ನ ಮಾಡುವ ಅಪಾಯವನ್ನು ಕೈಗೊಳ್ಳಬೇಕು ಎಂದು ಸಾವರ್ಕರ್ ಅವರು ಈ ಭೇಟಿಯಲ್ಲಿ ಖಚಿತವಾದ ಸಲಹೆ ನೀಡಿದರು. ಈ ಸಲಹೆ ಬೋಸ್ ಅವರ ಮೇಲೆ ಪರಿಣಾಮ ಬೀರುವಂತೆ ಮಾಡಲು ಸಾವರ್ಕರ್ ಅವರು ಬೋಸ್ ಅವರಿಗೆ ರಾಶಬಿಹಾರಿ ಬೋಸ್ ಅವರು ಜಪಾನ್ ಯುದ್ಧವನ್ನು ಘೋಷಿಸುವ ಮುನ್ನಾದಿನದಂದು ಬರೆದ ಪತ್ರವೊಂದನ್ನು ತೋರಿಸಿದರು ಎಂದು ಬಾಲಾರಾವ್ ಬರೆಯುತ್ತಾರೆ.
ಈ ನಿರೂಪಣೆ ಹಲವಾರು ಪ್ರಶ್ನೆಗಳನ್ನೆತ್ತುತ್ತದೆ. ಮೊದಲನೆಯದಾಗಿ ಇದು ಮೂರನೆಯ ಹಂತದ ಆಧಾರ. ಯಾಕೆಂದರೆ ಇಂತಹ ಸಲಹೆಯನ್ನು ತಾವು ನೀಡಿದುದಾಗಿ ಸಾವರ್ಕರ್ ಅವರು ಎಲ್ಲಿಯೂ ಹೇಳುವುದಿಲ್ಲ ಹಾಗೂ ಬೋಸ್ ಅವರೂ ಅಂತಹ ಸಲಹೆ ಸಾವರ್ಕರ್ ಅವರಿಂದ ಬಂದುದಾಗಿ ಎಲ್ಲಿಯೂ ಹೇಳುವುದಿಲ್ಲ. ಬದಲಾಗಿ ಬೋಸ್ ಅವರಂತೂ ಈ ಭೇಟಿಯ ಬಗ್ಗೆ ಬರೆಯುತ್ತ ಸಾವರ್ಕರ್ ಅವರು ಅಂತರ್‌ರಾಷ್ಟ್ರೀಯ ಪರಿಸ್ಥಿತಿಯ ಬಗ್ಗೆ ಗಮನ ಕೊಡದೇ ಬರಿ ಭಾರತದಲ್ಲಿ ಬ್ರಿಟನ್‌ನ ಸೈನ್ಯಕ್ಕೆ ಪ್ರವೇಶಿಸುವ ಮೂಲಕ ಹಿಂದೂಗಳು ಮಿಲಿಟರಿ ತರಬೇತಿಯನ್ನು ಹೇಗೆ ಪಡೆದುಕೊಳ್ಳಬಹುದೆಂಬುದರ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಈ ಸಂದರ್ಶನಗಳಿಂದ ಬರಹಗಾರ (ಬೋಸ್) ಮುಸ್ಲಿಮ್ ಲೀಗ್ ಅಥವಾ ಹಿಂದೂ ಮಹಾಸಭೆಯಿಂದ ಏನನ್ನೂ ನಿರೀಕ್ಷಿಸಲಾಗದು ಎಂಬ ತೀರ್ಮಾನಕ್ಕೆ ಬರಬೇಕಾಯಿತು ಎಂದು ತಮ್ಮ ಆತ್ಮಚರಿತ್ರೆ ‘ದ ಇಂಡಿಯನ್ ಸ್ಟ್ರಗಲ್’ನ ಪುಟ 34ರಲ್ಲಿ ಬರೆಯುತ್ತಾರೆ ಎಂದು ವಿಕ್ರಮ ಸಂಪತ್ ‘ಸಾವರ್ಕರ್: ಎ ಕಂಟೆಸ್ಟೆದ್ ಲಿಗಸಿ 1924-1966’ರ ಪುಟ 265ರಲ್ಲಿ ಬರೆಯುತ್ತಾರೆ. ತಮಾಷೆ ಎಂದರೆ ಬೋಸ್ ಬರೆದ ಆತ್ಮಚರಿತ್ರೆಯ ಹೆಸರು ‘ದ ಇಂಡಿಯನ್ ಪಿಲ್‌ಗ್ರಿಮ್’ ಎಂದಾಗಿತ್ತು. ‘ದ ಇಂಡಿಯನ್ ಸ್ಟ್ರಗಲ್’ ಎಂಬ ಪುಸ್ತಕವನ್ನು ಬೋಸ್ ಅವರು ಯುರೋಪಿನಲ್ಲಿದ್ದಾಗ ಬರೆದಿದ್ದರು ಹಾಗೂ ಅದರಲ್ಲಿ ನಿರೂಪಣೆ 1934ರಲ್ಲಿ ಕೊನೆಗೊಳ್ಳುತ್ತದೆ. ಬೋಸ್ ಅವರು ಸಾವರ್ಕರ್ ಅವರನ್ನು ಭೇಟಿಯಾಗಿದ್ದು 1941ರಲ್ಲಿ ಎನ್ನಲಾಗಿದೆ. ವೈರುಧ್ಯ ಹಾಗೂ ಸುಳ್ಳುಗಳು ಸ್ಪಷ್ಟವಾಗಿವೆ.
ಎರಡನೆಯದಾಗಿ ಬಾಲಾರಾವ್ ಅವರೇ ಬರೆದಿರುವಂತೆ ಇದು ‘ಖಾಸಗಿ ಮತ್ತು ವೈಯಕ್ತಿಕ ಭೇಟಿ’ಯಾಗಿತ್ತು. ಆ ಭೇಟಿಯ ಸಮಯದಲ್ಲಿ ತಾವೂ ಉಪಸ್ಥಿತರಿದ್ದುದಾಗಿ ಬಾಲಾರಾವ್ ಬರೆಯುವುದಿಲ್ಲ. ಹಾಗಾದರೆ ಆ ಖಾಸಗಿ ಮತ್ತು ವೈಯಕ್ತಿಕ ಭೇಟಿ ಸಮಯ ನಡೆದ ಚರ್ಚೆಯ ಬಗ್ಗೆ ಬಾಲಾರಾವ್ ಅವರಿಗೆ ಹೇಗೆ ಗೊತ್ತಾಯಿತು? ಬೋಸ್ ಅವರಂತೂ ಬಾಲಾರಾವ್ ಅವರಿಗೆ ಇದನ್ನೆಲ್ಲ ಹೇಳಿರಲಾರರು. ಹಾಗಾದರೆ ಇದನ್ನು ವಿನಾಯಕ ಸಾವರ್ಕರ್ ಅವರೇ ಹೇಳಿರಬೇಕಲ್ಲವೇ? ತಮ್ಮ ಬಗ್ಗೆ ಸುಳ್ಳುಸುಳ್ಳೇ ಹೊಗಳಿಕೊಳ್ಳುವುದು ಸಾವರ್ಕರ್ ಅವರ ಅಭ್ಯಾಸವಾಗಿತ್ತಲ್ಲವೇ? ಉದಾಹರಣೆಗೆ ತಮಗೆ ಬ್ಯಾರಿಸ್ಟರ್ ‘ಪದವಿ’ಯನ್ನು ಇಂಗ್ಲೆಂಡಿನ ವಿದ್ಯಾಸಂಸ್ಥೆ ನೀಡಿರದಿದ್ದರೂ ತಮ್ಮನ್ನು ಬ್ಯಾರಿಸ್ಟರ್ ಎಂದು ಕರೆದುಕೊಳ್ಳುವುದಷ್ಟೇ ಅಲ್ಲ, ‘ದ್ ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್’ ಎಂಬ ಪುಸ್ತಕವನ್ನೂ ಬರೆದಿದ್ದರು. ಲೋಕಮಾನ್ಯ ಪತ್ರಿಕೆಗೆ ‘ಹುತಾತ್ಮಾ’ ಎಂಬ ಗುಪ್ತ ಹೆಸರಿನಲ್ಲಿ ಲೇಖನಗಳನ್ನು ಬರೆದಿದ್ದನ್ನು ನೋಡಿದರೆ ಅವರು ತಮ್ಮನ್ನು ಹುತಾತ್ಮಾ ಎಂದು ಪರಿಗಣಿಸುತ್ತಿದ್ದರು ಎನ್ನುವುದು ಅರ್ಥವಾಗುತ್ತದೆ.
ಮೂರನೆಯದಾಗಿ ಘಟನೆ ನಡೆದ 14 ವರ್ಷಗಳ ನಂತರ ಬಾಲಾರಾವ್ ಇದನ್ನು ದಾಖಲಿಸುತ್ತಾರೆ. ಈ ಕಾರಣದಿಂದಲೂ ಇದರ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ನಾಲ್ಕನೆಯದಾಗಿ ಸಾವರ್ಕರ್ ನೀಡಿದರೆನ್ನಲಾಗುವ ಈ ಸಲಹೆಗಳು ನಂತರ ನಡೆದ ಘಟನಾಕ್ರಮದೊಂದಿಗೆ ಎಷ್ಟೊಂದು ಹೊಂದಿಕೊಳ್ಳುತ್ತವೆ ಎಂದರೆ ಇದು ವಿನಾಯಕ ಸಾವರ್ಕರ್ ಅಥವಾ ಅವರ ಕಾರ್ಯದರ್ಶಿ ಬಾಲಾರಾವ್ ಅವರ ಘಟನೆಯ ನಂತರದ ಕಲ್ಪನೆ ಅಥವಾ ಯೋಚನೆ (Post facto after thought) ಎಂಬ ಬಗ್ಗೆ ಯಾವ ಸಂದೇಹವೂ ಉಳಿಯುವುದಿಲ್ಲ.
ಗೌತಮ ನಾಯಕ್ ಎಂಬವರು 2022ನಲ್ಲಿ ಒಂದು ಲೇಖನ ಬರೆದು ಅದರಲ್ಲಿ ಆಝಾದ್ ಹಿಂದ್ ರೇಡಿಯೊದಲ್ಲಿ ದಿನಾಂಕ 25, ಜೂನ್ 1944ರಂದು ಬೋಸ್ ಅವರು ಮಾಡಿದ ಭಾಷಣದಲ್ಲಿ ‘‘ದಾರಿ ತಪ್ಪಿದ ರಾಜಕೀಯ ಹುಚ್ಚಾಟಿಕೆಗಳಿಂದಾಗಿ ಮತ್ತು ದೂರದೃಷ್ಟಿಯ ಕೊರತೆಯಿಂದಾಗಿ, ಕಾಂಗ್ರೆಸ್ ಪಕ್ಷದ ಬಹುತೇಕ ಎಲ್ಲ ನಾಯಕರು ಭಾರತೀಯ ಸೈನ್ಯದ ಸೈನಿಕರನ್ನು ಕೂಲಿ ಸೈನಿಕರು ಎಂದು ಹೇಳುತ್ತಿದ್ದಾರೆ. ವೀರ ಸಾವರ್ಕರ್ ಅವರು ಮಾತ್ರ ಭಾರತದ ಯುವಕರನ್ನು ನಿರ್ಭಯವಾಗಿ ಬ್ರಿಟಿಷರ ಸೈನ್ಯವನ್ನು ಸೇರಲು ಪ್ರಚೋದಿಸುತ್ತಿದ್ದಾರೆ ಎನ್ನುವುದು ಹೃದಯಸ್ಪರ್ಶಿಯಾಗಿದೆ. ಈ ಸೇರ್ಪಡೆಗೊಂಡ ಯುವಕರು ಸ್ವತಃ ನಮ್ಮ ಐಎನ್‌ಎಗಾಗಿ ತರಬೇತಿ ಪಡೆದ ಪುರುಷರಾಗುತ್ತಾರೆ ಮತ್ತು ನಮಗೆ ಸೈನಿಕರನ್ನು ಒದಗಿಸುತ್ತಾರೆ’’ ಎಂದು ಹೇಳಿದುದಾಗಿ ದಾಖಲಿಸುತ್ತಾರೆ.
ಆದರೆ ಜೂನ್ 25, 1944ರಂದು ಬೋಸ್ ಅವರು ಯಾವ ಭಾಷಣವನ್ನೂ ಮಾಡಿದ ದಾಖಲೆ ಇಲ್ಲ. ಬದಲಿಗೆ ಬೋಸ್ ಅವರ ಆಯ್ದ ಭಾಷಣಗಳನ್ನು ಭಾರತ ಸರಕಾರ ಪ್ರಕಟಿಸಿದ ಪುಸ್ತಕಕ್ಕೆ ಮುನ್ನುಡಿ ಬರೆದ ಎಸ್.ಎ. ಅಯ್ಯರ್ ಅವರು ಬೋಸರ ಸೈನ್ಯ ಇಂಫಾಲಿನ ಮೇಲೆ ದಾಳಿ ಮಾಡುವ ಯೋಚನೆಯಲ್ಲಿದ್ದಾಗ ‘‘ವಿಧಿ ಬೇರೆಯೇ ಬಯಸಿತ್ತು. ಬೋಸ್ ಅವರ ವಿಮೋಚನಾ ಪಡೆಗಳು ಇಂಫಾಲ್‌ನಿಂದ ಬರಿ 3 ಮೈಲಿಗಳ ದೂರ ಇದ್ದವು. ಆಗ ಬರ್ಮಾದಲ್ಲಿ ಪ್ರಾರಂಭವಾದ ಧಾರಾಕಾರ ಮಳೆಯು ಸೈನ್ಯದ ಪೂರೈಕೆಯ ಮಾರ್ಗಗಳನ್ನು ಮುಳುಗಿಸಿ ಬಿಟ್ಟಿತು. ಸೈನ್ಯವನ್ನು ಹಿಂದೆಗೆದುಕೊಳ್ಳಲು ಆದೇಶಿಸಲಾಯಿತು. ಈ ಸೋಲು ಜೂನ್-ಜುಲೈ 1944ರಲ್ಲಿ ಸಂಭವಿಸಿತು. ಗಾಯಗೊಂಡ, ಸಾಯುತ್ತಿರುವ ಅನೇಕ ವೀರರು ಮತ್ತು ತೀವ್ರ ಮಲೇರಿಯಾ ಮತ್ತು ಭೇದಿಗಳಿಂದ ಬಳಲುತ್ತಿರುವ ಸೈನಿಕರು ರಂಗೂನ್‌ಗೆ ಮರಳಲು ಪ್ರಾರಂಭಿಸಿದರು’’ ಎಂದು ಬರೆಯುತ್ತಾರೆ. ಇಂತಹ ಹಿನ್ನೆಲೆಯಲ್ಲಿ ಬೋಸ್ ಅವರು ರೇಡಿಯೊದಲ್ಲಿ ಭಾಷಣ ಮಾಡಿ ಸಾವರ್ಕರ್ ಅವರನ್ನು ಹೊಗಳಿರಬಹುದೇ? ಇದು ಗೌತಮ ನಾಯಕ್ ಅವರು ಬರೆದಿರುವುದು ಅಧಾರರಹಿತ ಹಾಗೂ ಅನುಕೂಲಕರ ಸುಳ್ಳು ಎಂಬ ಸಂದೇಹಕ್ಕೆ ಎಡೆ ಮಾಡುತ್ತದೆ.
ಬೋಸ್ ಅವರು ಸಾವರ್ಕರ್ ಅವರನ್ನು ಹೊಗಳಿದ್ದರು ಎಂದು ಹೇಳಿದ ವಿಕ್ರಮ ಸಂಪತ್ ಅವರ ನಿರೂಪಣೆಯ ಸತ್ಯಾಸತ್ಯತೆಯನ್ನು ಪತ್ರಕರ್ತ ಆಯುಷ್ ತಿವಾರಿ ಪರೀಕ್ಷೆಗೆ ಒಳಪಡಿಸಿದರು. ಈ ಮಾತನ್ನು ಸಾವರ್ಕರ್ ಅವರ ಜೀವನ ಚರಿತ್ರೆ ಬರೆದ ಇನ್ನೊಬ್ಬರಾದ ಧನಂಜಯ ಕೀರ್ ಅವರು ದಾಖಲಿಸಿದ್ದರು. ಆದರೆ ಅವರು ಕೂಡ ಈ ಹೇಳಿಕೆಗೆ ಮೂಲ ಯಾವುದು ಎನ್ನುವುದನ್ನು ಹೇಳುವುದಿಲ್ಲ. ‘‘ನಿಜವಾಗಿ ನೋಡಿದರೆ ಈ ಹೇಳಿಕೆಗೆ ಮೂಲ ಎನ್ನಬಹುದಾದ ಯಾವುದೇ ಪ್ರಾಥಮಿಕ ಮೂಲ ಇಲ್ಲವೇ ಇಲ್ಲ’’ ಎನ್ನುತ್ತಾರೆ ತಿವಾರಿ. ಈ ಬಗ್ಗೆ ಸಂಪತ್ ಕೂಡ ಕೀರ್ ಹೇಳಿದುದನ್ನು ಕಣ್ಣು ಮುಚ್ಚಿಕೊಂಡು ಪುನರಾವರ್ತಿಸುತ್ತಾರೆಯೇ ಹೊರತು ತಾವು ಕೂಡ ಮೂಲವನ್ನು ಹುಡುಕಿ ಹೇಳಲು ಪ್ರಯತ್ನಿಸುವುದಿಲ್ಲ. ‘‘ಬೋಸರ ಹೋರಾಟದ ಕಿರೀಟವನ್ನು ಸಾವರ್ಕರ್ ತಲೆಗೆ ಕಟ್ಟುವುದು ಒಂದು ಹಳೆಯ ಪ್ರವೃತ್ತಿ. ಈ ಪ್ರವೃತ್ತಿಯನ್ನು ಹಾಗೆ ನೋಡಿದರೆ ಸಾವರ್ಕರ್ ಅವರೇ ಸ್ವಾತಂತ್ರ್ಯಾನಂತರ ಪ್ರಕಟಿಸಿದ ತಮ್ಮ ‘ತೇಜಸ್ವೀ ತಾರೆ’ ಎಂಬ ಪುಸ್ತಕದಿಂದ ಪ್ರಾರಂಭಿಸಿದರು’’ ಎನ್ನುತ್ತಾರೆ ತಿವಾರಿ.
ಬೋಸ್ ಅವರು ಜರ್ಮನಿಗೆ ಹಾಗೂ ಜಪಾನ್‌ಗಳಿಗೆ ತೆರಳಿ ಅಲ್ಲಿ ಭಾರತದ ಸೈನಿಕರನ್ನು ಒಟ್ಟುಗೂಡಿಸಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಬೇಕೆಂದು ಸಾವರ್ಕರ್ ಹೇಳಿದ್ದರು ಎಂದು ಈ ಸನಾತನಿಗಳು ಬೀಗುತ್ತಾರೆ. ಆದರೆ ಸಾವರ್ಕರ್ ಸ್ವತಃ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ಪರ ನಿಂತಿದ್ದರು ಎನ್ನುವುದನ್ನು ಸಾವರ್ಕರ್ ಅವರೇ ಸ್ವತಃ ಹೇಳಿಕೊಳ್ಳುತ್ತಾರಷ್ಟೇ ಅಲ್ಲ, ಬೋಸ್ ಅವರನ್ನು ‘ಆಕ್ರಮಣಕಾರ’ ಎಂದೂ ನಿಂದಿಸುತ್ತಾರೆ.
ಎರಡನೆಯ ಮಹಾಯುದ್ಧದಲ್ಲಿ 1942ರ ಫೆಬ್ರವರಿ 8ರಂದು ಸಿಂಗಾಪುರ ಪತನವಾಗಿ ಜಪಾನೀಯರ ಕೈಸೇರಿದಾಗ ಸಾವರ್ಕರ್ ಅವರು ಬೋಸ್ ಅವರನ್ನು ‘ಆಕ್ರಮಣಕಾರ’ ಎಂದು ಕರೆದಿದ್ದರಲ್ಲದೇ ಅವರ ವಿರುದ್ಧ ಬ್ರಿಟಿಷರ ಜೊತೆಗೂಡಿ ಕೆಲಸ ಮಾಡಲು ಭಾರತೀಯರಿಗೆ ಕರೆ ನೀಡಿದ್ದರು. ಈ ಬಗ್ಗೆ ಅವರು ನೀಡಿದ ಒಂದು ಹೇಳಿಕೆಯಲ್ಲಿ ‘‘ಬ್ರಿಟಿಷ್ ಸರಕಾರವನ್ನು ತಡೆಗಟ್ಟುವಲ್ಲಿ ಜಪಾನ್ ಯಶಸ್ವಿಯಾದರೆ ಹಾಗೂ ಅದರ ಆಕ್ರಮಣಕಾರಿ ಸೈನ್ಯ ಭಾರತದ ಗಡಿಯನ್ನು ತಲುಪಿದರೆ ಹಾಗೂ ತಲುಪಿದಾಗ ಅದರ ತಕ್ಷಣದ ಉದ್ದೇಶ ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವುದು ಹಾಗೂ ಆ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು ಎಂದು ಘೋಷಿಸುವಲ್ಲಿ ಅದು ಯಶಸ್ವಿಯಾದರೆ ಅಂತಹ ಘೋಷಣೆ ಭಾರತದ ಜನತೆಯ ಜನಪ್ರಿಯ ಕಲ್ಪನೆಯನ್ನು ಚಂಡಮಾರುತದಂತೆ ಆವರಿಸಲಿದೆ ಹಾಗೂ ಅದು ಲೆಕ್ಕಿಸಲಾಗದ ರಾಜಕೀಯ ತೊಡಕುಗಳಿಗೆ ಕಾರಣವಾಗಲಿದೆ ಎಂಬ ಮೊಂಡು ಸತ್ಯವನ್ನು ಬ್ರಿಟಿಷ್ ಸರಕಾರ ಕಡೆಗಣಿಸಬಾರದು ಎಂದು ನಾನು ಒತ್ತಾಯಪಡಿಸುತ್ತೇನೆ. ಬ್ರಿಟಿಷರ ಜೊತೆಗೂಡಿ ಯುದ್ಧ ಮಾಡುವುದು ಭಾರತದ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತೆ ಎಂದು ನಂಬಿಸಲು ಬ್ರಿಟಿಷರು ಎಷ್ಟು ಬೇಗ ಆಕ್ರಮಣಕಾರರನ್ನು ತಡೆಗಟ್ಟುವರೋ ಅಷ್ಟು ನಮಗೆಲ್ಲರಿಗೆ ಒಳ್ಳೆಯದು’’ ಎಂದು ಹೇಳಿದ್ದರು. (ಹಿಸ್ಟಾರಿಕ್ ಸ್ಟೇಟ್‌ಮೆಂಟ್ಸ್, ಪುಟ. 5).
13 ಮಾರ್ಚ್ 1942ರಂದು ಜರ್ಮನಿಯಿಂದ ‘ಆಝಾದ್ ಹಿಂದ್’ ರೇಡಿಯೊದಲ್ಲಿ ಮಾತನಾಡುತ್ತ ಬೋಸ್ ಅವರು ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಕರೆದು ಅವರಿಗೆ ಛೀಮಾರಿಯನ್ನೂ ಹಾಕಿದ್ದರು. ‘‘ಬ್ರಿಟಿಷ್ ಕೈಗಳನ್ನು ಬಲಪಡಿಸಲು ಕೆಲಸ ಮಾಡುವ ಪ್ರತಿಯೊಬ್ಬ ಭಾರತೀಯನು ತನ್ನ ತಾಯಿನಾಡಿನ ದ್ರೋಹಿಯಾಗುತ್ತಾನೆ. ಅಂತಹ ವ್ಯಕ್ತಿ ಭಾರತಕ್ಕೆ ದೇಶದ್ರೋಹಿ. ಭಾರತದ ದೇಶಪ್ರೇಮಿಗಳನ್ನು ವಿರೋಧಿಸುವವರು ಹಾಗೂ ಬ್ರಿಟಿಷರ ಪಕ್ಷ ವಹಿಸುವವರು ಮಿರ್ ಜಾಫರ್ ಅಥವಾ ಪ್ರಸ್ತುತ ಪೀಳಿಗೆಯ ಉಮಿ ಚಂದ್ ಅವರಿಗಿಂತ ಉತ್ತಮರೇನಲ್ಲ’’ ಎಂದಿದ್ದರು. ಇದು ಭಾರತ ಸರಕಾರ ಪ್ರಕಟಿಸಿದ ‘ಸೆಲೆಕ್ಟೆಡ್ ಸ್ಪೀಚಸ್ ಆಫ್ ಸುಭಾಷ್ ಚಂದ್ರ ಬೋಸ್’ ಪುಸ್ತಕದ ಪುಟ 129ರಲ್ಲಿ ದಾಖಲಾಗಿದೆ.
ನಂತರ ಜಿನ್ನಾ ಹಾಗೂ ಸಾವರ್ಕರ್ ಅವರನ್ನು ಒಂದೇ ಆವರಣದಲ್ಲಿ ಸೇರಿಸಿ ‘ಭಾರತ ಬಿಟ್ಟು ತೊಲಗಿ’ ಆಂದೋಲನದ ಬಗ್ಗೆ 31, ಆಗಸ್ಟ್ 1942ರಂದು ಜರ್ಮನಿಯಿಂದ ಆಝಾದ್ ಹಿಂದ್ ರೇಡಿಯೋದಲ್ಲಿ ಮಾತನಾಡುತ್ತ ಬೋಸ್ ಅವರು ‘‘ಜಿನ್ನಾ ಮತ್ತು ಸಾವರ್ಕರ್ ಮತ್ತು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಯೋಚಿಸುತ್ತಿರುವ ಎಲ್ಲ ನಾಯಕರು ನಾಳೆಯ ಜಗತ್ತಿನಲ್ಲಿ ಯಾವುದೇ ಬ್ರಿಟಿಷ್ ಸಾಮ್ರಾಜ್ಯ ಇರುವುದಿಲ್ಲ ಎಂದು ಒಮ್ಮೆ ಅರಿತುಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಈಗ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಭಾಗವಹಿಸುವ ಎಲ್ಲ ವ್ಯಕ್ತಿಗಳು, ಗುಂಪುಗಳು ಮತ್ತು ಪಕ್ಷಗಳು ನಾಳಿನ ಭಾರತದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿರುತ್ತವೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬೆಂಬಲಿಗರು ಸ್ವಾಭಾವಿಕವಾಗಿ ಮುಕ್ತ ಭಾರತದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾರೆ. ಇದನ್ನು ಪರಿಗಣಿಸಲು ಮತ್ತು ರಾಷ್ಟ್ರೀಯತೆ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ವಿಷಯದಲ್ಲಿ ಯೋಚಿಸಲು ಮತ್ತು ಮುಂದೆ ಬಂದು ಈಗ ನಡೆಯುತ್ತಿರುವ ಮಹಾನ್ ಹೋರಾಟದಲ್ಲಿ (1942ರ ಭಾರತ ಬಿಟ್ಟು ತೊಲಗಿ ಹೋರಾಟ) ಸೇರಿಕೊಳ್ಳಲು ನಾನು ಎಲ್ಲಾ ಪಕ್ಷಗಳು ಮತ್ತು ಗುಂಪುಗಳಿಗೆ ಶ್ರದ್ಧೆಯಿಂದ ಮನವಿ ಮಾಡುತ್ತೇನೆ’’ ಎಂದು ಎಚ್ಚರಿಸಿದ್ದರು. ಅವರ ಈ ಮಾತುಗಳು ಭಾರತ ಸರಕಾರ ಪ್ರಕಟಿಸಿದ ‘ಸೆಲೆಕ್ಟೆಡ್ ಸ್ಪೀಚಸ್ ಆಫ್ ಸುಭಾಷ್ ಚಂದ್ರ ಬೋಸ್’ ಪುಸ್ತಕದ ಪುಟ 150ರಲ್ಲಿ ದಾಖಲಾಗಿದೆ.
ಸಾವರ್ಕರ್ 1857ರ ಮಹಾದಂಗೆಯ ಬಗ್ಗೆ ಬರೆದ ಪುಸ್ತಕದ ಬಗ್ಗೆಯೂ ಬೋಸ್ ಕುರಿತಂತೆಯೂ ಈ ಭಕ್ತರು ಸುಳ್ಳು ಹರಡುತ್ತಾರೆ. ಕೊನೆಗೆ ಈ ಪುಸ್ತಕವನ್ನು 1909ರಲ್ಲಿ ಹಾಲೆಂಡಿನಲ್ಲಿ ‘ದ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಲಾಯಿತು. ಇದರ ಎರಡನೆಯ ಆವೃತ್ತಿಯನ್ನು ತಮ್ಮ ಗದರ ಪಾರ್ಟಿಯ ಪರವಾಗಿ ಲಾಲಾ ಹರದಯಾಲ ಅವರು ಅಮೆರಿಕದಲ್ಲಿ ಪ್ರಕಟಿಸಿದರು ಹಾಗೂ ಮೂರನೆಯ ಆವೃತ್ತಿಯನ್ನು ಸರ್ದಾರ್ ಭಗತ್‌ಸಿಂಗ್ ಪ್ರಕಟಿಸಿದರಲ್ಲದೆ ನಾಲ್ಕನೆಯ ಆವೃತ್ತಿಯನ್ನು ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ದೂರ ಪೂರ್ವದಲ್ಲಿ ಪ್ರಕಟಿಸಿದರು. ಈ ಪುಸ್ತಕವನ್ನು ಉರ್ದು, ಹಿಂದಿ, ಪಂಜಾಬಿ ಹಾಗೂ ತಮಿಳು ಭಾಷೆಗಳಲ್ಲಿ ಪ್ರಕಟಿಸಲಾಗಿದೆ ಎನ್ನುತ್ತದೆ ಸಾವರ್ಕರ್ ಅವರ ಜಾಲತಾಣ. ‘‘ಒಂದು ದಶಕದ ನಂತರ, 1940ರಲ್ಲಿ, ಇತರ ರಾಷ್ಟ್ರೀಯ ನಾಯಕರಾದ ರಾಶಬಿಹಾರಿ ಬೋಸ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ‘1857ರ ಭಾರತದ ಸ್ವಾತಂತ್ರ್ಯ ಯುದ್ಧ’ದ ಒಂದು ಆವೃತ್ತಿಯನ್ನು ಜಪಾನಿನಲ್ಲಿ ಪ್ರಕಟಿಸಿದರು’’ ಎನ್ನುತ್ತಾರೆ ವಿಕ್ರಮ ಸಂಪತ್ ತಮ್ಮ ಪುಸ್ತಕ ‘ಸಾವರ್ಕರ್ - ಎಕೋಸ್ ಫ್ರಂ ಎ ಫಾರ್ಗಟನ್ ಪಾಸ್ಟ್’ದ ಪುಟ 131ರಲ್ಲಿ.
ಬೋಸ್ ಅವರು ಭಾರತದಿಂದ ತಪ್ಪಿಸಿಕೊಂಡು ಜರ್ಮನಿಗೆ ಹೋಗಿದ್ದು ಜನವರಿ 1941ರಲ್ಲಿ. ಅದೇ ವರ್ಷ ನವೆಂಬರ್‌ನಲ್ಲಿ ಅವರು ಜರ್ಮನಿಯಿಂದ ತಮ್ಮ ರೇಡಿಯೊ ಭಾಷಣಗಳನ್ನು ಪ್ರಾಂಭಿಸಿದರು. ಜರ್ಮನಿಯಿಂದ ಜೂನ್ 1943ರಲ್ಲಿ ಬೋಸ್ ಅವರು ಜಪಾನ್ ತಲುಪಿದರು. ಹಾಗಾದರೆ 1940ರಲ್ಲಿ ಅವರು ಜಪಾನಿನಲ್ಲಿ ಸಾವರ್ಕರ್ ಅವರ ಪುಸ್ತಕವನ್ನು ಪ್ರಕಟಿಸುವುದು ಹೇಗೆ ಸಾಧ್ಯ?
ಇಂದು ಜಾಲತಾಣದಲ್ಲಿ ಎಲ್ಲಾ ಪುಸ್ತಕಗಳೂ ಓದಲು ದೊರಕುತ್ತವೆ. ಸನಾತನಿಗಳ ಸುಳ್ಳುಗಳನ್ನು ಹಿಡಿದು ಹಾಕುವುದು ಈಗ ಸುಲಭವಾಗಿದೆ. ಆದರೂ ಇವರು ಇಷ್ಟೊಂದು ಸುಳ್ಳುಗಳನ್ನು ಇಂದಿಗೂ ಹರಡುತ್ತಿದ್ದಾರೆ. ಸ್ವಲ್ಪ ಯೋಚನೆ ಮಾಡಿ, ಜಾಲತಾಣ ಇಲ್ಲದೆ ಇವರ ಪುಸ್ತಕಗಳು, ಗ್ರಂಥಗಳು ಅಲಭ್ಯವಾಗಿದ್ದಾಗ, ಇವರ ಗ್ರಂಥಗಳ ಭಾಷೆ ಜನಸಾಮಾನ್ಯರಿಗೆ ತಿಳಿಯದೇ ಇದ್ದಾಗ, ಇವರು ಏನೆಲ್ಲ ಅನಾಹುತಗಳನ್ನು ಮಾಡಿರಬಹುದು?