ಶಾಸಕರಿಗೆ ಸಂವಿಧಾನದ ಪಾಠ ಹೇಳಿಸಿ

Update: 2023-06-23 19:00 GMT

ಮಾನ್ಯರೇ,

ನೂತನ ಶಾಸಕರಿಗೆ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಆಹ್ವಾನಿಸಿದವರಲ್ಲಿ ಕೆಲವು ವಿವಾದಾತ್ಮಕ ಹಾಗೂ ಬಲಪಂಥೀಯ ನಿಲುವಿನ ವ್ಯಕ್ತಿಗಳೂ ಇರುವುದು ರಾಜ್ಯದ ಎಲ್ಲ ಪ್ರಜ್ಞಾವಂತರಿಗೆ ತೀವ್ರ ನಿರಾಶೆ ತಂದಿದೆ. ಈ ಹಿಂದಿನ ಬಿಜೆಪಿ ಸರಕಾರದ ಜನವಿರೋಧಿ, ಸಂವಿಧಾನ ವಿರೋಧಿ ನಡೆಗಳಿಂದ ಬೇಸತ್ತ ರಾಜ್ಯದ ಜನರು ಬಹಳಷ್ಟು ನಿರೀಕ್ಷೆ ಗಳೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಹೀಗಿರುವಾಗ ನೂತನ ವಿಧಾನ ಸಭಾ ಸದಸ್ಯರಿಗೆ ಕಟ್ಟಾ ಸಂಘ ಪರಿವಾರದ ಬೆಂಬಲಿಗರು ಹಾಗೂ ವಿವಾದಾತ್ಮಕ ಹಿನ್ನೆಲೆಯ ವ್ಯಕ್ತಿಗಳಿಂದ ಬೋಧನೆ ಮಾಡಿಸಲು ಹೊರಟಿರುವ ಸ್ಪೀಕರ್ ಯು.ಟಿ. ಖಾದರ್ ಅವರ ನಡೆ ಅತ್ಯಂತ ಖಂಡನೀಯ.

ರಾಜ್ಯಾದ್ಯಂತ ಜನರು ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದನ್ನು ಸ್ವತಃ ಮುಖ್ಯಮಂತ್ರಿಗಳೂ ಗಮನಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಯಾವ ಸಮರ್ಥನೆಯೂ ಇಲ್ಲದ ಈ ನಡೆಯನ್ನು ಶುಕ್ರವಾರ ಸ್ಪೀಕರ್ ಯು. ಟಿ. ಖಾದರ್ ಮತ್ತೆ ಸಮರ್ಥಿಸಿಕೊಂಡಿದ್ದು ನೋಡಿ ನನಗೆ ಆಘಾತವಾಯಿತು. ತರಬೇತಿ ಶಿಬಿರ ಆದ ಮೇಲೆ ಅಭಿಪ್ರಾಯ ಹೇಳಲಿ, ಪೂರ್ವಗ್ರಹ ಪೀಡಿತ ಚರ್ಚೆ ಸರಿಯಲ್ಲ ಎಂದಿದ್ದಾರೆ ಮಾನ್ಯ ಸ್ಪೀಕರ್ ಸಾಹೇಬರು. ಗುರುರಾಜ ಕರಜಗಿ ಬಂದು ಏನು ಹೇಳುತ್ತಾರೆ ಎಂದು ಅವರೇ ವಾರದ ಹಿಂದಷ್ಟೇ ಬರೆದ ಲೇಖನದಲ್ಲಿ ಇಡೀ ನಾಡಿಗೆ ಗೊತ್ತಾಗಿದೆ. ರವಿಶಂಕರ್ ಸರಕಾರಿ ಶಾಲೆಗಳು ಮಕ್ಕಳನ್ನು ನಕ್ಸಲರಾಗಿಸುತ್ತವೆ ಎಂಬ ಸಮಾಜ ಘಾತುಕ ಹೇಳಿಕೆ ಕೊಟ್ಟ ವ್ಯಕ್ತಿ. ಇಂತಹವರು ನೂತನ ಶಾಸಕರಿಗೆ ಬಂದು ಏನು ಹೇಳಿಕೊಡುತ್ತಾರೆ ಎಂದು ಅಂದಾಜಾಗದಷ್ಟು ದಡ್ಡರೇ ಕನ್ನಡಿಗರು?

ಬಿಜೆಪಿ ಆಡಳಿತವಿರುವಾಗ ಇಂತಹ ಜನವಿರೋಧಿಗಳೇ ಎಲ್ಲ ಕಡೆ ಮೆರೆದರು. ಈಗ ನೋಡಿದರೆ ಕಾಂಗ್ರೆಸ್ ಸರಕಾರವೂ ಅವರನ್ನೇ ತಲೆ ಮೇಲೆ ಹೊತ್ತುಕೊಂಡಿದೆ. ಬಿಜೆಪಿ ಸರಕಾರವೂ ಶಾಸಕರಿಗೆ ಬೋಧನೆ ಮಾಡಲು ಆಧ್ಯಾತ್ಮಿಕ ಗುರುಗಳನ್ನು ಕರೆದಿರಲಿಲ್ಲ. ಈಗ ಸ್ಪೀಕರ್ ಖಾದರ್ ಒಂದು ಹೊಸ ಸಂವಿಧಾನ ವಿರೋಧಿ ಸಂಪ್ರದಾಯವನ್ನು ಶುರು ಮಾಡಿದ್ದಾರೆ. ಇದೆಂತಹ ನಾಚಿಕೆಗೇಡು?

ಶಾಸಕರಿಗೆ ಸಂವಿಧಾನದ ಪಾಠ ಹೇಳಿಸಿಒತ್ತಡ ರಹಿತವಾಗಿ ಕೆಲಸ ಮಾಡಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಕರೆದಿದ್ದೇವೆ ಎಂದು ಸ್ಪೀಕರ್ ಖಾದರ್ ಅವರು ಹೇಳಿದ್ದಾರೆ. ಸ್ವತಃ ಖಾದರ್ ಅವರೂ ಸೇರಿದಂತೆ ಈ ನಾಡಿನ ಅಷ್ಟೂ ಶಾಸಕರು, ಸಂಸದರು, ಪೊಲೀಸರು ಪ್ರತಿದಿನ ಎದುರಿಸುವಷ್ಟು ಒತ್ತಡವನ್ನು ಈ ಆಧ್ಯಾತ್ಮಿಕ ಗುರುಗಳು ಎದುರಿಸುತ್ತಾರಾ? ಒತ್ತಡ ಎದುರಿಸಿ ಹೇಗೆ ಕೆಲಸ ಮಾಡಬೇಕು ಎಂದು ಶಾಸಕರಿಗೆ ಹೇಳಬೇಕಾದವರು ಖಾದರ್ ಸಹಿತ ಇತರ ಹಿರಿಯ ಶಾಸಕರು. ಆಧ್ಯಾತ್ಮಿಕ ಗುರುಗಳಲ್ಲ. ಕರ್ನಾಟಕ ಸರಕಾರ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಸಂವಿಧಾನದ ಪೀಠಿಕೆ ಓದಿಸುವುದನ್ನು ಕಡ್ಡಾಯ ಮಾಡಿದೆ. ಆದರೆ ರಾಜ್ಯದ ಸ್ಪೀಕರ್ ಅವರು ರವಿಶಂಕರ್ ಹಾಗೂ ಕರಜಗಿ ಅವರನ್ನು ಶಾಸಕರಿಗೆ ಪಾಠ ಮಾಡಲು ಕರೆದಿರುವುದು ವಿಪರ್ಯಾಸ. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಿರುವ ಈ ಕಾಲದಲ್ಲಿ ಸ್ಪೀಕರ್ ಖಾದರ್ ಅವರಿಂದ ಇಂತಹ ನಡೆ ತೀರಾ ನಿರಾಶಾದಾಯಕ ಬೆಳವಣಿಗೆಯಾಗಿದೆ. ತನಗೆ, ತನ್ನ ಪಕ್ಷಕ್ಕೆ ಮತ ಹಾಕಿ ಚುನಾಯಿಸಿದ ಮತದಾರರ ಮನದಾಶಯವನ್ನು ಮಾನ್ಯ ಸ್ಪೀಕರ್ ಅವರು ಗೌರವಿಸಲಿ, ಕೂಡಲೇ ಈ ವಿವಾದಾತ್ಮಕ ವ್ಯಕ್ತಿಗಳಿಗೆ ನೀಡಿದ ಆಹ್ವಾನ ವಾಪಸ್ ಪಡೆಯಲಿ.

-ಅಶೋಕ್ ಜೀವನಹಳ್ಳಿ 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News