ಕೋವಿಡ್ ವರದಿ | ಕುಂಬಳಕಾಯಿ ಕಳ್ಳ ಎಂದರೆ ಸಂಸದ ಸುಧಾಕರ್‌ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

Update: 2024-09-03 06:37 GMT

ಮೈಸೂರು : ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರದ ಕುರಿತ ವರದಿ ಸರಕಾರದ ಕೈ ಸೇರಿದೆ. ಆದರೆ ವರದಿಯಲ್ಲಿ ಏನಿದೆ ಎಂಬುದನ್ನು ಇನ್ನೂ ನಾನೇ ನೋಡಿಲ್ಲ, ಹೀಗಿರುವಾಗ ಸಂಸದ ಸುಧಾಕರ್ ಅವರಿಗೆ ವರದಿ ರಾಜಕೀಯ ಪ್ರೇರಿತ ಎನಿಸಲು ಹೇಗೆ ಸಾಧ್ಯ? ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದ ಎದುರು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೋವಿಡ್ ಸಂದರ್ಭದಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖಾ ವರದಿ ನ್ಯಾ.ಮೈಕೆಲ್ ಕುನ್ಹಾ ನೇತೃತ್ವದಲ್ಲಿ ನಡೆಸಲಾಗಿತ್ತು. ಅವರು ವರದಿ ಕೊಟ್ಟಿದ್ದಾರೆ.‌ ಗುರುವಾರ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಅದನ್ನು ಇಟ್ಟು ಯಾವ ಕ್ರಮ ಜರುಗಿಸಬೇಕು ಎಂಬುದನ್ನು ನೋಡುತ್ತೇವೆ ಎಂದು ಹೇಳಿದರು.

ಸಂಸದ ಸುಧಾಕರ್‌ ತಪ್ಪು ಮಾಡಿದ್ದಾರೆ.‌ ಅದಕ್ಕಾಗಿಯೇ ವರದಿ ಬಹಿರಂಗಗೊಳ್ಳುವ ಮುನ್ನ ಸುಳ್ಳು ವರದಿ ಎಂದು ಆಪಾದನೆ ಮಾಡುತ್ತಿದ್ದಾರೆ. ಅವರ ಮನಸ್ಥಿತಿಯಲ್ಲಿ ತಪ್ಪು ಮಾಡಿರುವುದು ಕಾಡುತ್ತಿದೆ. ಇದನ್ನೆಲ್ಲಾ ನೋಡಿದರೆ ಅವರ ಮಾನಸಿಕ ಮನಸ್ಥಿತಿ ಗೊತ್ತಾಗುತ್ತಿದೆ ಎಂದು ಹೇಳಿದರು.

ತಪ್ಪು ಮಾಡಿರುವವರ ಮೇಲೆ ಕ್ರಮ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ನಾನು ಅಮಾನತು ಮಾಡಿಲ್ಲ, ನಗರಾಭಿವೃದ್ಧಿ ಇಲಾಖೆಯವರು ಅಮಾನತತು ಮಾಡಿರುವುದು. ಅಮಾನತು ಮಾಡಿರುವುದು ಗೊತ್ತಿದೆ. ಯಾವ ಅಂಶಗಳನ್ನು ಪರಿಗಣಿಸಲಾಗಿದೆ ಗೊತ್ತಿಲ್ಲ. ಮುಡಾ ಭ್ರಷ್ಟಾಚಾರದ ವರದಿ ನೀಡುವಂತೆ ಆಯೋಗ ರಚಿಸಲಾಗಿದೆ. ವರದಿ ಬಂದ ನಂತರ ತಪ್ಪು ಮಾಡಿರುವವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಮೊದಲ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಾಗುತ್ತಿದೆ. ಚಾಮುಂಡಿ ಬೆಟ್ಟಕ್ಕೆ ಹೋದ ಮೇಲೆ ಚಾಮುಂಡಿ ತಾಯಿ ದರ್ಶನ ಮಾಡಬೇಕಲ್ಲವೇ? ಹಾಗಾಗಿ ದೇವರ ದರ್ಶನ ಪಡೆಯುತ್ತಿದ್ದೇನೆ. ಮುಡಾ ಪ್ರಕರಣ ಸಂಬಂಧ ನನಗೆ ಭಯ ಇಲ್ಲ.‌ನಾನು ಎಂದಿನಂತೆ ಇದ್ದೇನೆ. ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡಿದ್ದೇವಲ್ಲ, ಅದು ರುಜುವಾತು ಆದರೆ ಎಂಬ ಭಯ ಅವರಿಗೆ ಕಾಡುತ್ತಿದೆ ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News