ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಮೃತ್ಯು: ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ
ಮೈಸೂರು: ನಗರದ ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಕುಟುಂಬದವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಂತ್ವನ ಹೇಳಿದರು.
ನಗರದ ಯರಗನಹಳ್ಳಿಯ ಮೃತರ ಮನೆಗೆ ಗುರುವಾರ ಭೇಟಿ ನೀಡಿದ ಸಿಎಂ, ಮೃತಪಟ್ಟ ಮನೆಯ ಯಜಮಾನ ಕುಮಾರಸ್ವಾಮಿ ಅವರ ತಂದೆ, ತಾಯಿ, ಅತ್ತೆ, ಮಾವ ಅವರಿಗೆ ಧೈರ್ಯ ಹೇಳಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮಡಿವಾಳ ಸಮುದಾಯಕ್ಕೆ ಸೇರಿದ್ದು, ಅವರು ಬಟ್ಟೆ ಹೊಗೆದು ಇಸ್ತ್ರಿ ಮಾಡಿ ಜೀವನ ನಡೆಸುತ್ತಿದ್ದರು. ಅನಿಲ ಸೋರಿಕೆಯಿಂದ ಕುಮಾರಸ್ವಾಮಿ, ಅವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಸಾವಿಗೀಡಾಗಿರುವುದು ಅತೀವ ನೋವು ತಂದಿದೆ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದರು.
ಕುಮಾರಸ್ವಾಮಿ ಕಳೆದ ಇಪ್ಪತ್ತು ವರ್ಷಗಳಿಂದ ಮೈಸೂರಿನಲ್ಲಿ ವಾಸವಿದ್ದು ಸಣ್ಣ ಸ್ವಂತ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರ ಇಬ್ಬರು ಹೆಣ್ಣು ಮಕ್ಕಳು ಬಹಳ ಚೆನ್ನಾಗಿ ಓದುತ್ತಿದ್ದರು ಎಂದು ತಿಳಿಯಿತು. ಅವರ ಸಾವು ದುಃಖವನ್ನು ಉಂಟು ಮಾಡಿದೆ. ಮೃತರಿಗೆ ತಲಾ 3 ಲಕ್ಷ ರೂ.ನಂತೆ ಕುಟುಂಬಕ್ಕೆ 12 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ @siddaramaiah ಅವರು ಮೈಸೂರಿನ ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಅನಾಹುತದಲ್ಲಿ ಇಡೀ ಕುಟುಂಬ ಮೃತಪಟ್ಟ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿ, ಮೃತರ ಕುಟುಂಬಕ್ಕೆ ₹ 12 ಲಕ್ಷ ಪರಿಹಾರ ಘೋಷಿಸಿದರು. pic.twitter.com/EasLaSppvG
— Karnataka Congress (@INCKarnataka) May 23, 2024