ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಪತ್ನಿ ಹೆಸರಿನಲ್ಲಿ ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ: ದಾಖಲೆ ಬಿಡುಗಡೆ ಮಾಡಿದ ಕೆ.ಎಸ್. ಶಿವರಾಮು

Update: 2024-09-16 17:47 GMT

ಮೈಸೂರು: ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅಕ್ರಮವಾಗಿ 7 ಕೋಟಿ ರೂ. ಮೌಲ್ಯದ ಹೆಚ್ಚುವರಿ ನಿವೇಶನವನ್ನು 5,36,200 ರೂ.ಗಳಿಗೆ ಪಡೆದಿದ್ದಾರೆ. ಇದರಿಂದ ಮುಡಾಗೆ ಕೋಟ್ಯಾಂತರ ರೂ ನಷ್ಟ ಆಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ‌ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ದಾಖಲೆ ಬಿಡುಗಡೆ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ನಿಮ್ಮ ಬಿಜೆಪಿ ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅಕ್ರಮವಾಗಿ ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ನಿವೇಶನ‌ ಖರೀದಿ ಮಾಡಿದ್ದಾರೆ. ನೀವು ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತೀರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪ್ರಶ್ನಿಸಿದರು.

ಈರನಗೆರೆಯಲ್ಲಿ ಸೈಯದ್ ಹಬೀಬ್ ಉರ್ ರೆಹಮನ್, ಸೈಯದ್ ನಸೃತ್, ಬಿಬಿ ಆಯೇಷ ಸೇರಿ 11 ಜನರ ಹೆಸರಿಲ್ಲಿದ್ದ ಜಂಟಿ ಜಾಗ. ಈರನಗೆರೆ ಸರ್ವೆ ನಂ 85/2 ರಲ್ಲಿ 1 ಎಕರೆ 3 ಗುಂಟೆ ಜಾಗ ವಶಕ್ಕೆ ಪಡೆದಿತ್ತು. ಇದೇ ಜಾಗಕ್ಕೆ 7-7-2021ರಂದು ಬದಲಿ ನಿವೇಶನಕ್ಕೆ ಪ್ರಾಧಿಕಾರಕ್ಕೆ ಅರ್ಜಿ. ಅರ್ಜಿ ಸಲ್ಲಿಸಿದ ಬಳಿಕ‌ 13-7-2021 ರಂದು 50:50 ಅನುಪಾತದಲ್ಲಿ 12057 ಅಡಿ ವಿಸ್ತೀರ್ಣದ ಜಾಗ ಮಂಜೂರಾತಿ‌‌ ಮಾಡಲಾಗಿದೆ.

50 ವರ್ಷಗಳ ನಂತರ ಮುಡಾಗೆ ಮೂಲ ಮಾಲೀಕರ ಕಡೆಯಿಂದ ಬದಲಿ ನಿವೇಶನಕ್ಕೆ ಅರ್ಜಿ ಹಾಕಿಸಿ. ಅಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್, ಇಂದಿನ ಬಿಜೆಪಿ ಜಿಲ್ಲಾಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿಕೊಂಡು ಅಕ್ರಮ ಎಸಗಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪ್ತ ವಲಯದಲ್ಲಿ ಮಹಾದೇವಸ್ವಾಮಿ ಗುರುತಿಸಿಕೊಂಡಿದ್ದು, ಎಲ್.ಆರ್. ಮಹದೇವಸ್ವಾಮಿ ಅವರ ಪತ್ನಿ ಹೆಸರಲ್ಲಿ ಬಿ.ವೈ. ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಶಿವರಾಮು ಆರೋಪಿಸಿದರು.

ಬಳಿಕ ಹೆಚ್ಚುವರಿಯಾಗಿ ಸರಸ್ವತಿಪುರಂನಲ್ಲಿ 50x80 ಹೆಚ್ಚುವರಿ ನಿವೇಶನವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅದೇ ಬಡಾವಣೆ ಬಿಟ್ಟು ಕೋಟಿ ಕೋಟಿ ಬೆಲೆ ಬಾಳುವ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಳಿಕ ಇದೇ ನಿವೇಶನ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಪತ್ನಿ ಸೌಮ್ಯ ಎಂ ಸ್ವಾಮಿ ಹೆಸರಲ್ಲಿ ನಿವೇಶನ ಖರೀದಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸರಸ್ವತಿ ಪುರಂನಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ. ಕೂಡಲೇ ಈ ನಿವೇಶನವನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ಮುಡಾ ಭ್ರಷ್ಟಾಚಾರದ ಪಿತಾಮಹ ಬಿ.ವೈ. ವಿಜಯೇಂದ್ರ. 2021 ರಲ್ಲಿ ವಿಜಯೇಂದ್ರ ಪಟಾಲಮ್ ಮೂಲಕ ಭ್ರಷ್ಟಾಚಾರ ಮಾಡಿದ್ದರು. ಡಿ.ಬಿ. ನಟೇಶ್ ಮುಡಾ ಮಾಜಿ ಆಯುಕ್ತ, ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ದೇವಸ್ಥಾನಗಳಿಗೆ ಹೆಲಿಕಾಪ್ಟರ್ ನಲ್ಲಿ ಹೊಗುತ್ತಾ ಇದ್ದರು ಎಂದು ಕೆ.ಎಸ್.ಶಿವರಾಮು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News