ಮೋದಿ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಕ್ಕೆ ಕೊಟ್ಟಿರುವುದು ಚೊಂಬು : ಎಂ.ಲಕ್ಷ್ಮಣ್ ವಾಗ್ದಾಳಿ

Update: 2024-07-24 09:20 GMT

ಮೈಸೂರು : ಕರ್ನಾಟಕದಿಂದ 19 ಸಂಸದರನ್ನು ಕೊಟ್ಟರೂ ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ‌ ಕರ್ನಾಟಕಕ್ಕೆ ಕೊಟ್ಟಿರುವುದು ಚೊಂಬು, ನಾಮ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೇಂದ್ರ ನರೇಂದ್ರ ಮೋದಿ ಸರ್ಕಾರ ಮಂಡಿಸಿರುವ ಬಜೆಟ್ ತನ್ನ ಕುರ್ಚಿ ಬಚಾವೊ ಬಜೆಟ್ ಆಗಿದೆ. ಮೋದಿ ಪ್ರಧಾನಿ ಸ್ಥಾನ ಭದ್ರಪಡಿಸಿಕೊಳ್ಳಲು ಆಂದ್ರ, ಬಿಹಾರ ಮುಖ್ಯಮಂತ್ರಿಗಳನ್ನು ಓಲೈಸಿಕೊಳ್ಳಲು ಅವರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಅವರ ಮೂಗಿಗೆ ತುಪ್ಪ ಸವರಿರುವುದು ಬಿಟ್ಟರೆ ಅವರಿಗೆ ಯಾವ ಹಣವೂ ಕಾರ್ಯರೂಪಕ್ಕೆ ಬರುವುದಿಲ್ಲ. ಇದು ಆ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ವರ್ಷ ಬಳಿಕ ಗೊತ್ತಾಗಲಿದೆ" ಎಂದು ಹೇಳಿದರು.

ರಾಜ್ಯದಿಂದ 17 ಬಿಜೆಪಿ ಸಂಸದರು, ಇಬ್ಬರು ಜೆಡಿಎಸ್ ಸಂಸದರು ಸೇರಿ 19 ಸಂಸದರನ್ನು ಮೋದಿ ಸರಕಾರಕ್ಕೆ ರಾಜ್ಯದ ಜನತೆ ಕೊಟ್ಟಿದ್ದಾರೆ. ಪ್ರತಿವರ್ಷ ರಾಜ್ಯದಿಂದ 4.5 ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ ಸಂಗ್ರಹ ಮಾಡಿಕೊಡುತ್ತಿದ್ದೇವೆ. ಆದರೆ ಅವರು ರಾಜ್ಯಕ್ಕೆ ಕೊಟ್ಟಿರುವುದು ಚೊಂಬು ಮತ್ತು ನಾಮ. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಈಡಿ, ಐಟಿ, ಸಿಬಿಐ ಮೂಲಕ ಸರಕಾರವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ 183 ಲಕ್ಷ ಕೋಟಿ ರೂ. ಸಾಲ ಮಾಡಿರುವುದೇ ಇವರ ಸಾಧನೆಯಾಗಿದೆ. ಸ್ವತಂತ್ರ ಬಂದಾಗಿನಿಂದ 2014 ರವರೆಗೆ ದೇಶದ ಸಾಲ 53 ಲಕ್ಷ ಕೋಟಿ ರೂ. ಇತ್ತು. ಮನಮೋಹನ್ ಸಿಂಗ್ ಅಧಿಕಾರವಧಿಯಲ್ಲಿ ಉತ್ತಮವಾಗಿತ್ತು. ಮೋದಿ ಬಂದ ನಂತರ ದೇಶದ ಸಾಲ ಹೆಚ್ಚಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಸರಕಾರ ಮನಕಟ್ಟಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರಕಾರದಿಂದ 72 ಸಾವಿರ ಮಾತ್ರ ಹಣ ಬಿಡುಗಡೆ ಮಾಡುವುದು. ರಾಜ್ಯ ಸರಕಾರ 1.30 ಲಕ್ಷ ಹಣ ನೀಡುತ್ತದೆ. ಶೇ.32 ಜಿ.ಎಸ್.ಟಿ ಕಟ್ಟಬೇಕು. ಇದರಲ್ಲಿ 38 ಸಾವಿರ ಕೇಂದ್ರ ಸರಕಾರಕ್ಕೆ ಹೋಗುತ್ತದೆ. ಹಾಗಿದ್ದ ಮೇಲೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮೇಯರ್ ಗಳಾದ ಮೋದಾಮಣಿ, ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮಾಜಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಜಿ.ಪಂ ಅಧ್ಯಕ್ಷೆ ಲತಾ ಸಿದ್ಧಶೆಟ್ಟಿ, ಕಾಂಗ್ರೆಸ್ ಮುಖಂಡರುಗಳಾದ ವಾಸು, ಬಿ.ಎಂ.ರಾಮು, ಸೋಮಶೇಖರ್, ಕೆ.ವಿ.ಮಲ್ಲೇಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News