ಜಿ.ಕೆಟಗರಿ ಸೈಟ್ ಪಡೆದಿದ್ದ ಶಾಸಕ ಶ್ರೀವತ್ಸ : ಎಂ.ಲಕ್ಷ್ಮಣ್ ಆರೋಪ
ಮೈಸೂರು: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಶಾಸಕ ಟಿ.ಎಸ್.ಶ್ರೀವತ್ಸ ಜಿ-ಕೆಟಗರಿ ಸೈಟ್ ಪಡೆಡಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಜಿ - ಕೆಟಗರಿ ಸೈಟ್ ಪಡೆಯಬೇಕಾದರೆ ಸಾಂವಿಧಾನಿಕ ಹುದ್ದೆಯಲ್ಲಿರಬೇಕು. ಆದರೆ ಯಡಿಯೂರಪ್ಪಸಿಎಂ ಆಗಿದ್ದಾಗ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಜಿ-ಕೆಟಗರಿ ಸೈಟ್ ಪಡೆಡಿದ್ದಾರೆ. ಒಬ್ಬ ಬಿಜೆಪಿ ಕಾರ್ಯಕರ್ತ ಹೇಗೆ ಸೈಟ್ ಪಡೆಯಲು ಸಾಧ್ಯಎಂದು ಸ್ಪಷ್ಟನೆ ನೀಡಲಿ. ಯಡಿಯೂರಪ್ಪ ಎರಡನೇ ಬಾರಿ ಸಿಎಂ ಆಗಿದ್ದಾಗ ಶ್ರೀವತ್ಸ ಮುಡಾ ಸೈಟ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರೇ ನಮಗೆ ಮಾಹಿತಿ ನೀಡಿದ್ದಾರೆ ಎಂದು ವಿವರಿಸಿದರು.
ಶ್ರೀವತ್ಸ ನನಗೆ ಲೀಗಲ್ ನೋಟಿಸ್ ಕೊಟ್ಟಿದ್ದಾರೆ. ನಾನು ಅದಕ್ಕೆ ಹೆದರುವುದಿಲ್ಲ. ಕಾಂಗ್ರೆಸ್ನ ವಕ್ತಾರನಾಗಿರುವ ಹಿನ್ನೆಲೆಯಲ್ಲಿ ಆರೋಪಗಳಿಗೆ ಉತ್ತರ ನೀಡುವುದು ನನ್ನ ಜವಾಬ್ದಾರಿ. ನೋಟಿಸ್ಗಳ ಮೂಲಕ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಲಕ್ಷ್ಮಣ್ ಹೇಳಿದರು.