ಹಿಂದುಳಿದ ವರ್ಗದ ನಾನು 2ನೇ ಬಾರಿಗೆ ಸಿಎಂ ಆಗಿರುವುದನ್ನು ಸಹಿಸದ ಬಿಜೆಪಿಯಿಂದ ಮುಡಾ ವಿವಾದ: ಸಿದ್ದರಾಮಯ್ಯ
ಮೈಸೂರು,ಜು.11: ಹಿಂದುಳಿದ ವರ್ಗಗಳ ಸಮುದಾಯದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆದನಲ್ಲ ಎಂಬುದನ್ನು ಸಹಿಸಿಕೊಳ್ಳಲು ಆಗದೆ ಹೊಟ್ಟೆ ಉರಿಯಿಂದ ಮುಡಾ ವಿಚಾರವನ್ನು ಬಿಜೆಪಿಯವರು ವಿವಾದ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳಲಾಗದೆ ಬಿಜೆಪಿಯವರು ಕಾನೂನು ಪ್ರಕಾರ ನನ್ನ ಪತ್ನಿ ಮುಡಾದಿಂದ ನಿವೇಶ ಪಡೆದಿದ್ದರೂ ವಿವಾದ ಉಂಟು ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆಲ್ಲ ಹೆದರುವ ವ್ಯಕ್ತಿ ನಾನಲ್ಲ ಎಂದು ಗುಡುಗಿದರು.
2005ರಲ್ಲಿ ನನ್ನ ಬಾಮೈದ ಮಲ್ಲಿಕಾರ್ಜುನ ಕೃಷಿ ಜಮೀನನ್ನು ಖರೀದಿ ಮಾಡಿದ್ದಾನೆ. ಅವರ ಅಕ್ಕನಿಗೆ 2010ರಲ್ಲಿ ದಾನ ನೀಡಿದ್ದಾನೆ. ಆಗಲೂ ಅದು ಕೃಷಿ ಭೂಮಿಯೇ ಆಗಿತ್ತು. 2014ರಲ್ಲಿ ಮುಡಾದವರು ಡೆವಲಪ್ ಮಾಡಿ ಸೈಟ್ ಹಂಚಿಕೆ ಮಾಡಿದ್ದಾರೆ. ನಮ್ಮ ಜಮೀನನ್ನು ಕಳೆದುಕೊಂಡ ಮೇಲೆ ನಾವು ಹಾಗೆ ಬಿಟ್ಟು ಬಿಡಬೇಕಿತ್ತ? ಹಾಗಾಗಿ ನಮಗೆ ಬೇರೆ ಜಮೀನು ನೀಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದ್ದೆವು. ಅವರು ನಮ್ಮಿಂದ ತಪ್ಪಾಗಿದೆ ಎಂದು ಮುಡಾ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಕೊಂಡು ವಿಜಯ ನಗರದಲ್ಲಿ ನಿವೇಶನ ಕೊಟ್ಟಿದ್ದಾರೆ. ನಾವು ಇಂತಹ ಕಡೆನೇ ಕೊಡಿ ಎಂದು ಕೇಳಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ 2021 ರಲ್ಲಿ 50:50 ಅನುಪಾತದಂತೆ ನಿವೇಶನ ನೀಡಿದ್ದಾರೆ. ಇದರಲ್ಲಿ ನಮ್ಮದೇನು ತಪ್ಪಿದೆ. ಮುಡಾ ಪ್ರಾಧಿಕಾರದ ಸಭೆಯಲ್ಲಿ ಎಲ್ಲಾ ಪಕ್ಷದವರು ಸದಸ್ಯರಿರುತ್ತಾರೆ. ಆಗ ಯಾಕೆ ಈ ವಿಚಾರ ಪ್ರಸ್ರಾಪ ಮಾಡಲಿಲ್ಲ ಎಂದು ಸಿಎಂ ಪ್ರಶ್ನಿಸಿದರು.