ಮೈಸೂರು| ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

Update: 2023-12-23 12:15 GMT

ಮೈಸೂರು: ಕೈಗಾರಿಕೆಗಳಿಗೆ ಸರ್ಕಾರ ಸರ್ಕಾರಿ ಜಮೀನು, ಖಾಸಗಿ ಭೂಮಿ, ನೀರು, ವಿದ್ಯುತ್ ಎಲ್ಲವನ್ನೂ ನೀಡಿದೆ ಹಾಗೂ ಪರವಾನಗಿ ನೀಡುವಾಗ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಷರತ್ತನ್ನೂ ವಿಧಿಸಿರುತ್ತದೆ. ಹಾಗಾಗಿ ಎಲ್ಲಾ ಕೈಗಾರಿಕೆಗಳು, ಉದ್ದಿಮೆದಾರರು ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ನಡೆದ ಉದ್ದಿಮೆದಾರರ ಸಭೆಯಲ್ಲಿ ಮಾತನಾಡಿದ ಅವರು, ʼಸ್ಥಳೀಯರಿಗೆ ಉದ್ಯೋಗ ನೀಡುವುದು ನಿಮ್ಮ ಕರ್ತವ್ಯ, ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡಿರುವವರಿಗೆ ಶಾಶ್ವತ ಉದ್ಯೋಗ ನೀಡಬೇಕು, ಅವರಿಗೆ ಯಾವುದೇ ಕಾರಣಕ್ಕೂ ಬಾಹ್ಯ ಗುತ್ತಿಗೆ ಅಥವ ತಾತ್ಕಾಲಿಕ ಉದ್ಯೋಗ ನೀಡಬಾರದು ಈ ಮೂಲಕ ಸರ್ಕಾರದ ಉದ್ದೇಶ ಈಡೇರಬೇಕುʼ ಎಂದರು.

ಕೆಲ ಕಂಪನಿಗಳಲ್ಲಿ ಉದ್ಯೋಗ ನೀಡಿಲ್ಲ ಎಂದು ಸ್ಥಳೀಯರು ಮನವಿ ಸಲ್ಲಿಸುತಿದ್ದಾರೆ, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಲವರು ಉದ್ಯೋಗ ನೀಡಲು ಒಪ್ಪಿಗೆ ನೀಡಿದ್ದರಿ, ಯಾರು ಉದ್ಯೋಗ ನೀಡಿಲ್ಲವೋ ಅವರು ಈ ತಿಂಗಳೊಳಗಾಗಿ ಉದ್ಯೋಗ ನೀಡಿ ಎಂದರು.

ನಂಜನಗೂಡು, ಚಾಮುಂಡೇಶ್ವರಿ, ವರುಣ ಹಾಗೂ ಹಿಮ್ಮಾವು ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ ಎಂಬ ದೂರುಗಳಿವೆ ಹಾಗಾಗಿ ಸಂಬಂಧಿಸಿದವರು ತಕ್ಷಣ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕೆಂದರು.

ತಾಂತ್ರಿಕ ನೈಪುಣ್ಯತೆಯುಳ್ಳ ಕಾರ್ಮಿಕರು ಸ್ಥಳೀಯವಾಗಿ ಲಭ್ಯವಿಲ್ಲದಿದ್ದರೆ ಮಾತ್ರ ಹೊರಗಿನವರನ್ನು ತೆಗೆದುಕೊಳ್ಳಿ ಹಾಗೂ ಸ್ಥಳೀಯರಿಗೆ ತರಬೇತಿ ನೀಡುವ ಮೂಲಕ ತಾಂತ್ರಿಕ ಪರಿಣತರನ್ನಾಗಿಸಿ ಎಂದು ಹೇಳಿದರು.

ನಮ್ಮಲ್ಲಿ ಮಾನವ ಸಂಪನ್ಮೂಲಕ್ಕೆ ಕೊರತೆಯಿಲ್ಲ, ಐಟಿಐ ಡಿಪ್ಲೊಮಾ, ಪದವಿ ಪಡೆದಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದು ಸರ್ಕಾರದಿಂದ ಕೌಶಲ ತರಬೇತಿ ನೀಡಿ ಪರಿಣಿತರನ್ನಾಗಿಸುತ್ತಿದೆ, ಇದರೊಂದಿಗೆ ತಾವು ತಮ್ಮ ಕಂಪನಿಗಳಲ್ಲಿರುವವರಿಗೆ ತರಬೇತಿ ನೀಡಿ ಕುಶಲಕರ್ಮಿಗಳನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಆ ಮೂಲಕ ನಿರುದ್ಯೋಗಿಗಳಿಗೆ ಎರಡು ವರ್ಷಗಳ ಕಾಲ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದ್ದು 2024 ರ ಜನವರಿ 12 ರಂದು ಚಾಲನೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ ನಮ್ಮ ಸರ್ಕಾರ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News