ಮೈಸೂರು | ʼಗೋ ಬ್ಯಾಕ್ ಅಮಿತ್ ಶಾʼ: ಕಾಂಗ್ರೆಸ್ ಮುಖಂಡರಿಂದ ಪೋಸ್ಟರ್‌ ಅಂಟಿಸಿ ಪ್ರತಿಭಟನೆ

Update: 2024-02-11 13:42 GMT

ಮೈಸೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನು ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರ ಅಮಿತ್ ಶಾ ಅವರೇ? ಗೋ ಬ್ಯಾಕ್ ಅಮಿತ್ ಶಾ ಎಂಬ ಘೋಷಣೆಗಳನ್ನು ಕೂಗಿ ಗೋಡೆಗಳಿಗೆ ಬಿತ್ತಿ ಪತ್ರವನ್ನು ಅಂಟಿಸುವ ಮೂಲಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಮೆಟ್ರೋಪೋಲ್ ವೃತ್ತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಮುಖಂಡರುಗಳು ಮತ್ತು ಕಾರ್ಯರ್ತರು ರವಿವಾರ ಪ್ರತಿಭಟನೆಗೆ ಮುಂದಾಗಿ ಗೋಡೆಗಳಿಗೆ ಬಿತ್ತಿ ಪತ್ರವನ್ನು ಅಂಟಿಸಲು ಮುಂದಾದರು. ಈ ವೇಳೆ ಪೊಲೀಸರು ಇದಕ್ಕೆ ಅವಕಾಶಕೊಡದೆ ಸರ್ಕಾರಿ ಕಟ್ಟಡಗಳ ಮೇಲೆ ಪೋಸ್ಟರ್ ಅಂಟಿಸಲು ಬಿಡುವುದಿಲ್ಲ ಎಂದು ಪೋಸ್ಟರ್ ಗಳನ್ನು ಜೀಪಿಗೆ ತುಂಬಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಪೋಸ್ಟರ್ ಗಳನ್ನು ಹಿಂಪಡೆದರು.

ನಂತರ ವಿನೋಬಾ ರಸ್ತೆಯಲ್ಲಿರುವ ಮಹರಾಣಿ ವಿಜ್ಞಾನ ಮಹಿಳಾ ಕಾಲೇಜಿನ ಗೋಡೆಗೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಮಖಂಡರು ʼನಮ್ಮ ತೆರಿಗೆ ನಮ್ಮ ಹಕ್ಕುʼ ಮಿಸ್ಟರ್ ಅಮಿತ್ ಶಾ ಅವರೆ, ಕೇಂದ್ರ ಸರ್ಕಾರವು ಕರ್ನಾಟಕದಿಂದ ಹೆಚ್ಚು ತೆರಿಗೆ ಸಂಗ್ರಹಿಸಿದರೂ ಕನ್ನಡಿಗರಿಗೆ ನ್ಯಾಯಯುತ ತೆರಿಗೆ ಹಂಚಿಕೆ ಮಾಡುತ್ತಿಲ್ಲ ಯಾಕೆ?. ಜಗತ್ತಿನ ಎದುರು ಭಾರತದ ಮಾನ ಹರಾಜು ಹಾಕಿದ ಸಂಸತ್ ಭದ್ರತಾ ಲೋಪದ ರೂವಾರಿ ಸಂಸದನನ್ನು ಇನ್ನೂ ನಿಮ್ಮ ಪಕ್ಷದಿಂದ ಉಚ್ಛಾಟಿಸಿಲ್ಲ ಯಾಕೆ?. ವಿಲೀನ ಹೆಸರಿನಲ್ಲಿ ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕ್‍ಗಳನ್ನು ನಿರ್ನಾಮ ಮಾಡಿದ್ದು ಯಾಕೆ?. ಎಂದು  ಹಲವು ಪೋಸ್ಟರ್ ಗಳನ್ನು ಅಂಟಿಸಿ ಧಿಕ್ಕಾರ ಕೂಗಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಇದೆ. ರಾಜ್ಯದಿಂದ ಸಂಗ್ರಹವಾಗುತ್ತಿರುವ ತೆರಿಗೆಯಲ್ಲಿ ಶೇ.20ರಷ್ಟು ಪಾಲನ್ನೂ ಕೊಡುತ್ತಿಲ್ಲ. ರಾಜ್ಯ ಜನರು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಪರಿಹಾರ ಬಿಡುಗಡೆ ಮಾಡಿಲ್ಲ. ಮೇಕೆದಾಟು, ಭದ್ರಾ ಮೇಲ್ದಂಡೆ ಸೇರಿದಂತೆ ಹಲವು ಯೋಜನೆಗಳಿಗೆ ಸಹಕಾರ ಕೊಡುತ್ತಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಭಾಸ್ಕರ್ ಎಲ್.ಗೌಡ, ಮಾಜಿ ಮೇಯರ್ ಗಳಾದ ಮೋದಾಮಣಿ, ಬಿ.ಕೆ.ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ಮಾಧ್ಯಮ ವಕ್ತಾರ ಮಹೇಶ್, ಎಂ.ಕೆ.ಅಶೋಕ, ಶ್ರೀಧರ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News