ಪ್ರಭಾಕರ ಭಟ್ ಯಾತ್ರೆಗೆ ಅನುಮತಿ ನೀಡಿದ ಮಂಡ್ಯ ಜಿಲ್ಲಾಡಳಿತದ ವಿರುದ್ಧ ಕ್ರಮ ಜರುಗಿಸಬೇಕು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯ

Update: 2023-12-25 16:00 GMT

ಮೈಸೂರು: ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ನಡೆಸಿದ ಯಾತ್ರೆಗೆ  ಅನುಮತಿ ನೀಡಿದ ಮಂಡ್ಯ ಜಿಲ್ಲಾಡಳಿತದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮ ಜಯಂತಿ ಹೆಸರಿನಲ್ಲಿ ಶ್ರೀರಂಗಪಟ್ಟಣದ ಜಾಮೀಯ ಮಸೀದಿಯ ಬಳಿ ಯಾತ್ರೆ ನಡೆಸಲು ಅನುಮತಿ ಕೊಟ್ಟವರು ಯಾರು?. ಈಗಲೂ ಕೆಲ ಅಧಿಕಾರಿಗಳು, ಪೊಲೀಸರು ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಯಾತ್ರೆ ಹೆಸರಿನಲ್ಲಿ ಮಸೀದಿ ಒಳ ನುಗ್ಗುವ ಮತ್ತು ಗಲಭೆ ಸೃಷ್ಟಿಸುವ ಪ್ರಯತ್ನಗಳು ನಡೆದಿವೆ. ಇದಕ್ಕೆ ಅವಕಾಶ ಕೊಟ್ಟವರು ಯಾರು?. ಸಾವಿರಾರು ಪೊಲೀಸರು ಇದ್ದರೂ ಇಂತಹ ಘಟನೆಗಳು ನಡೆಯಲು ಹೇಗೆ ಸಾಧ್ಯ?. ಘಟನೆ ನಡೆದು ಇಷ್ಟು ಕಾಲವಾದರೂ ಮಂಡ್ಯ ಪೊಲೀಸರು ಯಾಕೆ ಇನ್ನೂ ಆತನನ್ನು ಬಂಧಿಸಿಲ್ಲ?. ಈ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಯಿಂದ ಸರ್ಕಾರ ಸ್ಪಷ್ಟನೆ ಪಡೆದು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕವಲಂದೆ ಪೊಲೀಸ್ ಠಾಣೆ ಉದ್ಘಾಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ವ್ಯಕ್ತಿಯೊಬ್ಬರು ಕೇಳಿದ ಮಾತಿಗೆ ಹಿಜಾಬ್ ನಿಷೇಧ ವಾಪಸ್ ಬಗ್ಗೆ ಚಿಂತನೆ ನಡೆಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕಳೆದ ಕೆಲ ತಿಂಗಳಿಂದ ಬಿಲ ಸೇರಿದ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಬಾಯಿ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ. ಹಿಜಾಬ್ ನಿಷೇದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ಇದು ಇತ್ಯರ್ಥವಾದರೆ ನೂರಕ್ಕೆ ನೂರಷ್ಟು ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂದರು.

ಇನ್ನೂ ಪ್ರಹ್ಲಾದ್ ಜೋಶಿಗೆ ರಾಜ್ಯದ ಬಗ್ಗೆ ಏನಾದರೂ ಕಾಳಜಿಯಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಮಸ್ಯೆ ತಿಳಿಸುತ್ತಿದ್ದರು. 9 ವರ್ಷ ಕಳೆದರೂ ಬರ ಪರಿಹಾರದ ವಿಚಾರ, ಕೃಷ್ಣ ನದಿ, ಮೇಕೆದಾಟು ಬಗ್ಗೆ ಮಾತನಾಡಿಲ್ಲ. ನರೇಗಾ 8 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಬಗ್ಗೆ ನಾಚಿಕೆಯಾಗಬೇಕು. ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲನ್ನು ಕೇಳಿಲ್ಲ. ಈಗ ಸಿದ್ದರಾಮಯ್ಯ ಅವರನ್ನು ಮುಠ್ಠಾಳ ಎಂದು ನಿಂದಿಸಿದ್ದಾರೆ. ಪ್ರಹ್ಲಾದ್ ಜೋಶಿ ಅವರನ್ನು ಈ ಬಾರಿ  2 ಲಕ್ಷ ಮತಗಳ ಅಂತರದಲ್ಲಿ ಜಗದೀಶ ಶೆಟ್ಟರ್ ಸೋಲಿಸಲಿದ್ದಾರೆ. ಅವರೇ ಅಭ್ಯರ್ಥಿ ಆಗಲಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಮೀಸಲಾತಿ ವಿಷಯದಲ್ಲಿ ಯಾವುದೇ ವರದಿಯಿಲ್ಲದೆ ಊಹಾಪೋಹದ ಮೂಲಕ ಜನತೆ ದಿಕ್ಕು ತಪ್ಪಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬೆಳಗಾವಿ ಆದಿವೇಶನದಲ್ಲಿ ವಿರೋಧ ಪಕ್ಷದ ನಾಯಕ ವೈಫಲ್ಯವೆಂದು ಬಿಜೆಪಿ ಶಾಸಕರೇ ಹೇಳಿದ್ದಾರೆ. ಈ ಬಗ್ಗೆ ಚಿಂತಿಸಿ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಮ್ ಸಿಂಹ ಬೇಲೂರು ತಾಲ್ಲೂಕು ಅರೆಹಳ್ಳಿ ಹೋಬಳಿಯಲ್ಲಿ 3 ಎಕರೆ 10 ಗುಂಟೆ ಸುಂಟಿ ಬೆಳೆಯಲು 3 ವರ್ಷಕ್ಕೆ ಬೋಗ್ಯಕ್ಕೆ ತೆಗೆದುಕೊಂಡು ಅಲ್ಲಿದ್ದ ಹಾಗೂ ಪಕ್ಕದ ಕಾಡಿನಲ್ಲಿದ್ದ 250 ಮರಗಳನ್ನು ಕತ್ತರಿಸಿ ಹಾಕಿದ್ದಾರೆ. ಆದರೆ, ಪ್ರಕರಣ ಮಾತ್ರ ಜಮೀನು ಬೋಗ್ಯಕ್ಕೆ ಕೊಟ್ಟ 83 ವರ್ಷದ ಜಯಮ್ಮ ಅವರ ಮೇಲೆ ಆಗಿದೆ. ಪ್ರತಾಪ ಸಿಂಹ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಜನ ಅರಿಯಬೇಕು.

- ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News