ಮೈಸೂರು| ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ಅನಾವರಣಗೊಳಿಸದಂತೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ: ಸರ್ವಜನಾಂಗ ಹೋರಾಟ ಸಮಿತಿ ಮಾಹಿತಿ

Update: 2024-01-12 15:17 GMT

ಮೈಸೂರು: ನಗರದ ಗನ್ ಹೌಸ್ ವೃತ್ತದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ಅನಾವರಣಗೊಳಿಸದಂತೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು ಸರ್ವಜನಾಂಗ ಹೋರಾಟ ಸಮಿತಿ ಸದಸ್ಯರು ತಿಳಿಸಿದರು.

ನಗರದ ಅರಸು ಮಂಡಳಿಯಲ್ಲಿ ಶುಕ್ರವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡಸಿ ಸಮಿತಿ ಅಧ್ಯಕ್ಷ ಎಚ್‍ಎಂಟಿ ಲಿಂಗರಾಜೇ ಅರಸ್ ಮಾತನಾಡಿ, ನಗರದ ಗನ್ ಹೌಸ್ ವೃತ್ತದಲ್ಲಿ ಡಿ. 8 ರಂದು ರಾತ್ರೋರಾತ್ರಿ ಅಕ್ರಮವಾಗಿ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಸಂಬಂಧ ಕಳೆದ ಹತ್ತು ದಿನಗಳ ಹಿಂದೆ ಮೈಸೂರಿನ ವಕೀಲ ರಾಜೇಂದ್ರ ಎಂಬುವವರು ಈ ಸಂಬಂಧ ಹೈಕೋರ್ಟ್‍ನಲ್ಲಿ ಪಿಐಎಲ್ ದಾಖಲಿಸಿದ್ದರು. ಹೈಕೋರ್ಟ್ ನ್ಯಾಯಪೀಠ ಇದರ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೇರಿದಂತೆ ಸಮಿತಿಯ 8 ಮಂದಿಗೆ ನೋಟಿಸ್ ನೀಡಿದೆ. ಇದಕ್ಕೆ ಅವರು ಉತ್ತರಿಸಿದ್ದಾರೊ ಇಲ್ಲವೊ ಗೊತ್ತಿಲ್ಲ.

ಆದರೂ ಗನ್ ಹೌಸ್ ವೃತ್ತದಲ್ಲಿ ಕಾಮಗಾರಿ ಮುಂದುವರೆಸುತ್ತಿದ್ದು, ಇದನ್ನು ಪ್ರಶ್ನಿಸಿ ವಕೀಲ ರಾಜೇಂದ್ರ ಅವರು ಸುಪ್ರೀಂ ಕೋರ್ಟ್‍ಗೆ ವಿಶೇಷ ಪಿಐಎಲ್ ಸಲ್ಲಿಸಿದ್ದರು. ಅದನ್ನು ಇಂದು ಕೈಗೆತ್ತಿಕೊಂಡ ನ್ಯಾಯಪೀಠ ಎಸ್‍ಪಿಎಲ್  ಗನ್ ಹೌಸ್ ವೃತ್ತದಲ್ಲಿ ಪ್ರತಿಮೆ ಅನಾವರಣ ಮಾಡಬಾರದು ಎಂದು ತಾತ್ಕಾಲಿಕ ಆದೇಶ ಹೊರಡಿಸಿದ್ದಾರೆ. ಇದರ ಸಂಪೂರ್ಣ ವರದಿ ಬುಧವಾರ ನಮ್ಮ ಕೈ ಸೇರಲಿದೆ ಎಂದು ಹೇಳಿದರು.

ಸದ್ಯ ಸುಪ್ರೀಂ ಕೋರ್ಟ್ ಆದೇಶವನ್ನು ವಾಟ್ಸ್ ಅಪ್ ಮೂಲಕ ವಕೀಲರು ನಮಗೆ ಕಳುಹಿಸಿದ್ದು, ಅದನ್ನು ಈ ತಕ್ಷಣ ಮೈಸೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ. ಈ ಕೂಡಲೇ ಗನ್ ಹೌಸ್ ವೃತ್ತದಲ್ಲಿ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ನಗರದ ಪಡುವಾರಹಳ್ಳಿ ವೃತ್ತದಲ್ಲಿ ಈ ಹಿಂದೆ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿದ ವೇಳೆ ಇದೇ ಜಿಲ್ಲಾಡಳಿತ ಸುಪ್ರೀಂ ಕೋರ್ಟ್ ಆದೇಶವಿದ್ದು ರಸ್ತೆ ಮಧ್ಯೆ ಯಾವುದೇ ಪ್ರತಿಮೆ ಹಾಕುವಂತಿಲ್ಲ ಎಂದು ಹೇಳಿ ತೆರವುಗೊಳಿಸಿದ್ದರು. ಸುಪ್ರೀಂ ಕೋರ್ಟ್ ಆದೇಶ ಗನ್ ಹೌಸ್ ವೃತ್ತಕ್ಕೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

ಸುತ್ತೂರು ಸ್ವಾಮೀಜಿ ಅವರ ಬಗ್ಗೆ ಎಲ್ಲರಿಗೂ ಗೌರವವಿದೆ. ರಾಜೇಂದ್ರ ಸ್ವಾಮೀಜಿಗಳು ಅಕ್ಷರ, ಅನ್ನ ನೀಡಿ ಸಾಕಷ್ಟು ಮಂದಿಗೆ ಬುದುಕು ಕಟ್ಟಿಕೊಟ್ಟಿದ್ದಾರೆ. ಅವರ ಪ್ರತಿಮೆಯನ್ನು ಬಟ್ಟೆ ಹಾಕಿ ಮುಚ್ಚಿ ಈ ರೀತಿ ಅಪಮಾನ ಮಾಡಬಾರದು. ಕಾನೂನು ಪಾಲನೆಯನ್ನು ಇವರೇ ಪಾಲಿಸದಿದ್ದರೆ ಹೇಗೆ, ದುರ್ಬಲರಿಗೊಂದು ಕಾನೂನು ಬಲಾಢ್ಯರಿಗೆ ಒಂದು ಕಾನೂನು ಇದಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾನೂನು ಸಲಹೆಗಾರ ವೈ.ಎನ್.ಕಿರಣ್, ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹದೇವಯ್ಯ, ಒಕ್ಕಲಿಗ ವೇದಿಕೆ ಅಧ್ಯಕ್ಷೆ ಯಮುನಾ, ಕಡುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News