ಕಾನೂನು ಬಾಹಿರವಾಗಿ ಧ್ವಜ ಹಾರಿಸಿ ಹೋರಾಟ ಮಾಡುವ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯ

Update: 2024-01-30 17:49 GMT

ಮೈಸೂರು: ಕಾನೂನು ಬಾಹಿರವಾಗಿ ಹನುಮ ಧ್ವಜ ಹಾರಿಸಿ ಹೋರಾಟ ಮಾಡುತ್ತಾ ಕಾನೂನು ಉಲ್ಲಂಘಿಸುತ್ತಿರುವ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕಾಂಗ್ರೆಸ್‌‍ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸುವುದಾಗಿ ಅನುಮತಿ ಪಡೆದವರು ಹನುಮಧ್ವಜ ಹಾರಿಸಿದ್ದಾರೆ. ಈಗ ತಪ್ಪು ಮಾಡಿದವರೇ ಹೋರಾಟ ಮಾಡುತ್ತಿದ್ದಾರೆ ಎಂದರು.

ಕರಾವಳಿ ಬಳಿಕ ಮಂಡ್ಯದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕೋಮು ಸಂಘರ್ಷದಿಂದ ಕರಾವಳಿ ಪ್ರದೇಶವನ್ನು ನಾಶ ಮಾಡಿದರು. ಸತತ ಹಿಂದೂ ಮುಸ್ಲಿಂ ಗಲಾಟೆಯಿಂದ ಕರಾವಳಿಯಲ್ಲಿ ಹೊಸ ಉದ್ಯಮ ಸ್ಥಾಪನೆಯಾಗುತ್ತಿಲ್ಲ. ಪ್ರವಾಸೋದ್ಯಮ ಕುಸಿದಿದೆ ಎಂದು ತಿಳಿಸಿದರು.

ರಾಷ್ಟ್ರಧ್ವಜ ಸಂಹಿತೆಯ ನಿಯಮಗಳನ್ನು ಉಲ್ಲಂಘಿಸಿ ಅವಮಾನ ಮಾಡಿದರೆ 3 ವರ್ಷ ಜೈಲು ಶಿಕ್ಷೆ ಎಂದು ಬಿಜೆಪಿಯವರೇ ತಿದ್ದುಪಡಿ ತಂದು ಅವರೇ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಅವಮಾನಿಸಿದ್ದಾರೆ. ಅವರಿಗೆ ರಾಷ್ಟ್ರಧ್ವಜ, ರಾಷ್ಟ್ರೀಯತೆಯ ಬಗ್ಗೆ ಗೌರವವಿಲ್ಲ. ಯಾವ ಕಾರಣಕ್ಕೂ ಬಿಜೆಪಿ ಜೆಡಿಎಸ್‌‍ನ ಕುತಂತ್ರದ ರಾಜಕಾರಣಕ್ಕೆ ಮಕ್ಕಳು ಬಲಿಯಾಗದಂತೆ ಜನರು ನೋಡಿಕೊಳ್ಳಬೇಕು ಎಂದು ಕೋರಿದರು.

ಮಂಡ್ಯ ಜಿಲ್ಲೆಯಲ್ಲಿ ಹಸಿರು ಶಲ್ಯಕ್ಕೆ ಶತಮಾನದ ಹೋರಾಟದ ಇತಿಹಾಸವಿದೆ. ಇಂದು ಅಲ್ಲೀಗ ಕೇಸರಿ ಬಾವುಟ, ಶಲ್ಯವನ್ನು ತಂದಿರುವ ಬಿಜೆಪಿ ಜೆಡಿಎಸ್‌‍ ಕೋಮುಗಲಭೆಯನ್ನು ಸೃಷ್ಟಿಸುತ್ತಿದೆ. ರೈತರ ಕಿಚ್ಚು ಮಂಡ್ಯದಿಂದಲೇ ಶುರುವಾಗಲಿದೆ ಎಂದರು.

ಚುನಾವಣೆ ಸಂದರ್ಭ ಉರಿಗೌಡ, ನಂಜೇಗೌಡ ಹೆಸರನ್ನು ಮುನ್ನಲೆಗೆ ತರಲಾಯಿತು. ಅದಕ್ಕೆಲ್ಲ ಮತದಾರರು ಮನ್ನಣೆ ನೀಡಲಿಲ್ಲ. ಇದೀಗ ಒಕ್ಕಲಿಗ ಸಮುದಾಯವನ್ನು ಎತ್ತಿಕಟ್ಟಲು ಈ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

350 ಕೋಟಿ ಯೋಜನೆಗಳು ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವುದನ್ನು ಸಂಸದ ಪ್ರತಾಪಸಿಂಹಗೆ ಸಹಿಸಲಾಗುತ್ತಿಲ್ಲ. ಹೀಗಾಗಿ, ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡಲು ಒತ್ತಾಯಿಸಿದ್ದಾರೆ. 5 ಲಕ್ಷ ಮತದಾರರಿಗೆ ಕ್ಷೇತ್ರ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಈಶ್ವರ ಚಕ್ಕಡಿ, ಗಿರೀಶ್‌‍, ಮಹೇಶ್‌‍, ಅಬ್ರಾರ್‌, ಕೋಟೆ ಶಿವಪ್ಪ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News