ಕಾವೇರಿ, ಕಬಿನಿ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
ಮೈಸೂರು: ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಾಡಾ ಇಲಾಖೆಯಲ್ಲಿರುವ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.
ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬುಧವಾರ ಗನ್ ಹೌಸ್ ವೃತ್ತದಲ್ಲಿ ಜಮಾಯಿಸಿದ ರೈತರು ಕಾಲ್ನಡಿಗೆ ಮೂಲಕ ಕಾಡಾ ಕಚೇರಿವರೆಗೂ ತೆರಳಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಇದೇ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಾವೇರಿ ಕಬಿನಿ ಅಚ್ಚುಕಟ್ಟು ಭಾಗದ ಕೆರೆಗಳು ಒಣಗಿದ್ದು, ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಬೆಳೆಗಳು ಒಣಗಿ ಹಾಳಾಗುತ್ತಿವೆ. ತಕ್ಷಣವೇ ಕಾಲುವೆಗಳ ಮೂಲಕ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಿ ಎಂದು ಒತ್ತಾಯಿಸಿದರು.
ರೈತರು ಮಾಡಿದ ಸಾಲ ತೀರಿಸಲಾಗದೇ ಜೀವನ ನಡೆಸಲು ಕಷ್ಟಕರ ವಾಗಿದೆ. ಸರಕಾರವೇ ಬರಗಾಲ ಘೋಷಣೆ ಮಾಡಿದ್ದು , ಬರ ಪರಿಹಾರ ಎಕರೆಗೆ ಕನಿಷ್ಟ 25,000 ಸಾವಿರ ರೂ. ಹಾಗೂ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 10,000 ಸಾವಿರ ರೂ. ಕೊಡಬೇಕು ಎಂದು ಸರಕಾರಕ್ಕೆ ಒತ್ತಯಿಸಲಾಯಿತು.
ತಮಿಳುನಾಡಿನ ಮುಖ್ಯಮಂತ್ರಿಗಳ ಬಾಂಧವ್ಯಕ್ಕೆ ತಲೆಬಾಗಿ ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿ ಖಾಲಿ ಮಾಡಿದ ಕಾರಣ ಬೆಂಗಳೂರು ನಗರದ ನಿವಾಸಿಗಳು ಕಾವೇರಿ ಅಚ್ಚುಕಟ್ಟು ಭಾಗದ ರೈತರ ನೀರಿನ ಸಮಸ್ಯೆಗೆ ಬಲಿಯಾಗಿದ್ದಾರೆ.
ಇನ್ನು ಮೂರು ದಿನಗಳೊಳಗೆ ನಾಲೆಗಳಿಗೆ ನೀರು ಹರಿಸದಿದ್ದರೆ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಬೀಗ ಹಾಕಬೇಕಾಗುತ್ತದೆ ಎಂದು ಈ ವೇಳೆ ರೈತರು ಎಚ್ಚರಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಮುಖಂಡರಾದ ಸಿದ್ದೇಶ್, ವೆಂಕಟೇಶ್ , ರಾಜೇಶ್, ದೇವನೂರು ವಿಜಯೇಂದ್ರ, ಪ್ರದೀಪ್, ಸೂರಿ, ಉಮೇಶ್, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ಸುನಿಲ್, ಶಿವಸ್ವಾಮಿ ಚೇತನ್, ಶಂಭು, ಶಾಂತರಾಜ್, ಶಿವಮೂರ್ತಿ, ಮಂಜುನಾಥ್, ಶಿವಕುಮಾರ್, ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.