ಸಂಸದ ಪ್ರತಾಪ್ ಸಿಂಹ ಭಯೋತ್ಪಾದಕ ಎಂಬ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Update: 2023-12-17 13:35 GMT

ಮೈಸೂರು: ಪ್ರತಾಪಸಿಂಹ ಭಯೋತ್ಪಾದಕ ಎಂಬ ಹೇಳಿಕೆ ಕಾಂಗ್ರೆಸ್‌‍ ಪಕ್ಷದಲ್ಲ. ಪ್ರತಾಪಸಿಂಹ ಮೈಸೂರಿನ ಗೌರವಾನ್ವಿತ ಸಂಸದ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ತಿಳಿಸಿದರು.

ಕಾಂಗ್ರೆಸ್‌‍ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪಸಿಂಹ ಪ್ರಚೋದಿಸುತ್ತಾರೆ ಎಂದು ಟೀಕಿಸುತ್ತೇವೇ ಹೊರತು ಭಯೋತ್ಪಾದಕ ಎಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ರಾಮಸ್ವಾಮಿ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪ್ರತಾಪಸಿಂಹ ಅವರನ್ನು  ಕೈಯಲ್ಲಿ ಬಾಂಬ್‌ ಕೊಟ್ಟು ದೇಶದ್ರೋಹಿ, ಭಯೋತ್ಪಾದಕ ಎಂದೆಲ್ಲಾ ಚಿತ್ರಿಸಿ ಬರೆಯಲಾಗಿತ್ತು.

ಪ್ರತಿಭಟನೆ ನಡೆಸಿದ ವೇದಿಕೆಯ ಕೆ.ಎಸ್‌‍. ಶಿವರಾಮ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆ ಹಿಂದೆ, ಮುಂದೆ ನಿಂತಿರುತ್ತಾರೆ. ಅವರು ಕಾಂಗ್ರೆಸ್‌‍ ಪಕ್ಷದ ಸದಸ್ಯರೂ ಅಲ್ಲ. ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ತಿಳಿಸಿದರು.

ಹತಾಶರಾದ ಯುವಕರು: ದೇಶದ ಯುವಕರು ಉದ್ಯೋಗವಿಲ್ಲದೇ ಹತಾಶರಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ವಾರ್ಷಿಕ 2 ಕೋಟಿ ಉದ್ಯೋಗವಲ್ಲ, 10 ವರ್ಷಗಳ ಆಡಳಿತದಲ್ಲಿ 2 ಕೋಟಿ ಉದ್ಯೋಗವನ್ನು ಸೃಷ್ಟಿಸಲಿಲ್ಲ. ಇಂಜಿನಿಯರಿಂಗ್‌ ಮುಗಿಸಿದವರು ನರೇಗಾದಂತಹ ಕೂಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ವಂಟಮೂರಿ ಪ್ರಕರಣದಲ್ಲಿ ರಾಜಕೀಯ: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ಮೇಲೆ ನಡೆದ ಘಟನೆ ಖಂಡಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದನ್ನು ಟೀಕಿಸಿದ ಎಂ. ಲಕ್ಷ್ಮಣ್‌, ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

ದೇಶದಲ್ಲಿ ಪ್ರತಿನಿತ್ಯ 89 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಯ ಪ್ರಕಾರ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಮಣಿಪುರದ ಬೆತ್ತಲೆ ಮೆರವಣಿಗೆ ಬಗ್ಗೆ ಬಿಜೆಪಿಯವರು ಮೌನವಾಗಿದ್ದು, ಈಗ ಹೋರಾಟ ಮಾಡುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌‍ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಬಿ.ಎಂ. ರಾಮು, ಎಂ. ಶಿವಣ್ಣ, ಕೆ. ಮಹೇಶ್‌, ಸೇವಾದಳದ ಗಿರೀಶ್‌ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News