ವಾರಂಟ್ ಇಲ್ಲದೆ ಮನೆಗೆ ಪ್ರವೇಶಿಸಿದ ಪೊಲೀಸರು: ಹೈದರಾಬಾದ್ ಮೂಲದ ಹೋರಾಟಗಾರನ ಆರೋಪ

Update: 2023-07-21 13:09 GMT

ಸಾಂದರ್ಭಿಕ ಚಿತ್ರ | Photo: PTI

ಹೈದರಾಬಾದ್: ಪಹರೆ ಹಾಗೂ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದ ಕಾರ್ಯವಿಧಾನ ಹಾಗೂ ಮಾರ್ಗಸೂಚಿಗಳನ್ನು ಕೂಲಂಕಷವಾಗಿ ಪರಾಮರ್ಶಿಸಬೇಕು ಎಂದು ಕಾಲಾ ಪತ್ಥರ್ ಪ್ರದೇಶದಲ್ಲಿ ನೆಲೆಸಿರುವ ಹೈದರಾಬಾದ್‌ ಮೂಲದ ಹೋರಾಟಗಾರರೊಬ್ಬರು ಪೊಲೀಸ್ ಆಯುಕ್ತ ಸಿ.ವಿ‌.ಆನಂದ್ ಅವರಿಗೆ ಪತ್ರ ಬರೆದಿದ್ದಾರೆ. ಮೇ 31, 2023ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯ ನಡುವೆ ಕಾಲಾಪತ್ಥರ್ ಪ್ರದೇಶದ ಬಷರತ್‌ನಗರದಲ್ಲಿ ನಡೆದಿರುವ ಇತ್ತೀಚಿನ ಪಹರೆ ಹಾಗೂ ಶೋಧ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಜುಲೈ 14, ಶುಕ್ರವಾರದಂದು ಹೋರಾಟಗಾರ ಎಸ್‌.ಕ್ಯೂ.ಮಸೂದ್ ಈ ಪತ್ರ ಬರೆದಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಪೊಲೀಸರು ಯಾವುದೇ ವಾರಂಟ್ ಅನ್ನು ತೋರಿಸದೆ ನೆರೆಪ್ರದೇಶದ ಮನೆಗಳಿಗೆ ಪ್ರವೇಶಿಸುತ್ತಿದ್ದು, ಈ ಕ್ರಮವು ಹೈದರಾಬಾದ್ ಪೊಲೀಸ್ ಕಾಯ್ದೆ ಪ್ರಕಾರ, ಪೀಡಕ ಶೋಧನೆಯಾಗುತ್ತದೆ ಎಂದು ಮಸೂದ್ ಆರೋಪಿಸಿದ್ದಾರೆ. ಈ ಶೋಧ ಕಾರ್ಯಾಚರಣೆಗಳನ್ನು ಯಾವುದೇ ಸೂಕ್ತ ವಿವರಣೆ ನೀಡದೆ ನಿರಂಕುಶವಾಗಿ ನಡೆಸಲಾಗುತ್ತಿದೆ ಎಂದೂ ಅವರು ದೂರಿದ್ದಾರೆ.

"ಅಪರಾಧ ದಂಡ ಸಂಹಿತೆ, 1973ರ ಸೆಕ್ಷನ್ 94ರ ಅನ್ವಯ ಈ ಪಹರೆ ಹಾಗೂ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದ್ದು, ಈ ಸೆಕ್ಷನ್ ಅನ್ವಯ ಕಳವು ವಸ್ತುಗಳ ಶೋಧಕ್ಕೆ ಮಾತ್ರ ಅವಕಾಶವಿದೆಯೇ ಹೊರತು ವಾಹನಗಳ ಮಾಲಕತ್ವ ದಾಖಲೆಗಳು, ಅನಿಲ ಸಂಪರ್ಕ, ಮನೆಯಲ್ಲಿನ ಒಟ್ಟು ನಿವಾಸಿಗಳ ಸಂಖ್ಯೆ ಹಾಗೂ ಮನೆಯೊಂದರಲ್ಲಿರುವ ವಲಸೆ ಕಾರ್ಮಿಕರು, ಇತ್ಯಾದಿ ಕುರಿತು ತಪಾಸಣೆ ನಡೆಸಲು ಅವಕಾಶವಿಲ್ಲ. ಹೀಗಾಗಿ ಇದು ಈ ಸೆಕ್ಷನ್‌ನ ನಿರ್ದಾಕ್ಷಿಣ್ಯ ದುರ್ಬಳಕೆಯಾಗಿದೆ ಎಂದು ಮಸೂದ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಲಾಪತ್ಥರ್ ಪ್ರದೇಶದಲ್ಲಿ ಪಹರೆ ಹಾಗೂ ಶೋಧ ಕಾರ್ಯಾಚರಣೆ ನಡೆಸಲು ಪಡೆದುಕೊಂಡಿರುವ ಎಲ್ಲ ವಾರಂಟ್‌ಗಳನ್ನು ಒದಗಿಸಬೇಕು ಎಂದು ಮನವಿ ಮಾಡಿರುವ ಮಸೂದ್, ಪೊಲೀಸರ ನಡಾವಳಿಗಳು, ವಿಶೇಷವಾಗಿ ಪಹರೆ ಮತ್ತು ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿನ ನಡಾವಳಿಗಳನ್ನು ವಿವರಿಸಲು ತೆಲಂಗಾಣ ಪೊಲೀಸ್ ಕೈಪಿಡಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೇ 31ರಂದು ನಡೆದಿದ್ದ ಶೋಧ ಕಾರ್ಯಾಚರಣೆಯ ನೇತೃತ್ವವವನ್ನು 250 ಪೊಲೀಸ್ ಸಿಬ್ಬಂದಿಗಳೊಂದಿಗೆ ದಕ್ಷಿಣ ವಲಯದ ಉಪ ಪೊಲೀಸ್ ಆಯುಕ್ತ ಸಾಯಿ ಚೈತನ್ಯ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News