ಕೇರಳ| ಪ್ರಾರ್ಥನಾಸಭೆಯಲ್ಲಿ ಸರಣಿ ಬಾಂಬ್ ಸ್ಫೋಟ; ಮಹಿಳೆ ಮೃತ್ಯು
ಹೊಸದಿಲ್ಲಿ: ಕೇರಳ ಕೊಚ್ಚಿ ನಗರ ಸಮೀಪ ಕ್ರೈಸ್ತ ಧಾರ್ಮಿಕ ಪಂಗಡವೊಂದರ ಪ್ರಾರ್ಥನಾ ಸಭೆಯಲ್ಲಿ ರವಿವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ ಮಕ್ಕಳು ಸೇರಿದಂತೆ 52 ಮಂದಿ ಗಾಯಗೊಂಡಿದ್ದಾರೆ.
ಕಲಮಶ್ಯೇರಿ ಮುನ್ಸಿಪಾಲಿಟಿ ಪ್ರದೇಶದಲ್ಲಿರುವ ಯೆಹೋವಾನ ಸಾಕ್ಷಿಗಳ (ಜೆಹೋವಾಸ್‌ವಿಟ್ನೆಸ್) ಪಂಗಡದ ಸಮಾವೇಶದಲ್ಲಿ ಬಾಂಬ್ ಸ್ಫೋಟ ನಡೆದಿದೆ. ಝಾಮ್ರಾ ಇಂಟರ್‌ನ್ಯಾಶನಲ್ ಕನ್‌ವೆನ್ಶನ್ ಹಾಗೂ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಕೇರಳ ರಾಜ್ಯಾದ್ಯಂತದಿಂದ 2500ಕ್ಕೂ ಅಧಿಕ ಮಂದಿ ಆಗಮಿಸಿದ್ದರು.
ಮೊದಲ ಸ್ಫೋಟ ಬೆಳಗ್ಗೆ ಸುಮಾರು 9.40ರ ವೇಳೆಗೆ ಸ್ಫೋಟ ಸಂಭವಿಸಿದೆ. ಪ್ರಾರ್ಥನಾ ಸಭೆ ಆರಂಭಗೊಂಡ ಐದು ನಿಮಿಷಗಳ ಬಳಿಕ ಈ ಸ್ಫೋಟ ಸಂಭವಿಸಿದೆ.
ಮೊದಲ ಸ್ಫೋಟ ಸಭಾಭವನದ ಮಧ್ಯದಲ್ಲೇ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯೆಹೋವಾನ ಸಾಕ್ಷಿಗಳ ಪಂಗಡದ ಮೂರು ದಿನಗಳ ಸಮಾವೇಶವು ಶುಕ್ರವಾರ ಆರಂಭಗೊಂಡಿದ್ದು ರವಿವಾರ ಸಮಾರೋಪಗೊಳ್ಳಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಭಾಭವನದಲ್ಲಿ ಸರಣಿ ಸ್ಫೋಟಗಳಿಂದಾಗಿ ಬೆಂಕಿ ಎದ್ದಿರುವುದನ್ನು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಭಯವಿಹ್ವಲರಾಗಿ ಕಿರುಚಾಡುತ್ತಿರುವ ದೃಶ್ಯಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಿಂದ ಜನರನ್ನು ತೆರವುಗೊಳಿಸಿದ್ದಾರೆ ಹಾಗೂ ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ.
ಪ್ರಕರಣದ ತನಿಖೆಗೆ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಎ) ಹಾಗೂ ರಾಷ್ಟ್ರೀಯ ಕಾವಲು ದಳದ (ಎನ್‌ಎಸ್‌ಜಿ)ಬಾಂಬ್ ಸ್ಕ್ವಾಡ್ ಘಟನಾ ಸ್ಥಳಕ್ಕೆ ಧಾವಿಸಿದ್ದು ತನಿಖೆಯಲ್ಲಿ ಕೇರಳ ಪೊಲೀಸರಿಗೆ ನೆರವಾಗುತ್ತಿದೆ.
ಈ ಘಟನೆಯು ಆತಂಕಕಾರಿ ಹಾಗೂ ಕಳವಳಕಾರಿ ಎಂದು ಕೇಂದ್ರ ಸಹಾಯಕ ವಿದೇಶಾಂಗ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.
ಸ್ಫೋಟದ ಹೊಣೆ ಹೊತ್ತ ಡೊಮಿನಿಕ್ ಮಾರ್ಟಿನ್:
ಕೊಚ್ಚಿಯ ಪ್ರಾರ್ಥನಾ ಸಭೆಯೊಂದರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಹೊಣೆಯನ್ನು ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿಯೊಬ್ಬರು ಹೊತ್ತುಕೊಂಡಿದ್ದು, ಪೊಲೀಸರಿಗೆ ಶರಣಾಗಿದ್ದಾನೆ.
ಸ್ಪೋಟದ ಆರೋಪಿಯನ್ನು ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದೆ. ಯೆಹೋವಾನ ಸಾಕ್ಷಿಗಳ ಸಮಾವೇಶ ನಡೆದ ಕಲಮಶ್ಯೇರಿಯ ಝಾಮ್ರಾ ಇಂಟರ್‌ನ್ಯಾಶನಲ್ ಕನ್‌ವೆನ್ಶನ್ ಹಾಗೂ ಎಕ್ಸಿಬಿಷನ್ ಸೆಂಟರ್‌ನಲ್ಲಿ ಬಾಂಬ್‌ಗಳನ್ನು ಇರಿಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಆತನ ಮೊಬೈಲ್ ಫೋನ್‌ನಲ್ಲಿಯೂ ಸ್ಪೋಟ ಸಂಚಿಗೆ ಸಂಬಂಧಿಸಿದ ವಿವರಗಳು ಲಭ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಶರಣಾಗುವ ಮುನ್ನ ಆತ ಫೇಸ್ಬುಕ್ ಲೈವ್‌ನಲ್ಲಿ ಬಾಂಬ್ ಸ್ಫೋಟ ನಡೆಸಿದ ಕಾರಣವನ್ನು ಬಹಿರಂಗಗೊಳಿಸಿದ್ದಾನೆ.
ಸ್ಫೋಟಕ್ಕೆ ಐಇಡಿ ಬಳಕೆ :
ಸ್ಪೋಟಗಳನ್ನು ನಡೆಸಲು ಸುಧಾರಿತ ಸ್ಪೋಟಕ ಸಾಮಾಗ್ರಿ (ಐಇಡಿ)ಗಳನ್ನು ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಕೇರಳ ಪೊಲೀಸ್ ಮಹಾನಿರ್ದೇಶಕ ಶೇಖ್ ದರ್ವೇಶ್ ಸಾಹೇಬ್ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಏಜೆನ್ಸಿ ಸ್ಥಳಕ್ಕೆ ಧಾವಿಸಿದ್ದು, ಪುರಾವೆಗಳನ್ನು ಸಂಗ್ರಹಿಸುತ್ತಿದೆ ಎಂದವರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕಗಳನ್ನು ಟಿಫಿನ್‌ಬಾಕ್ಸ್‌ನಲ್ಲಿ ಇರಿಸಲಾಗಿತ್ತೆಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ. ಸುಧಾರಿತ ಸ್ಫೋಟಕಗಳನ್ನು ದಾಳಿಗೆ ಬಳಸಿಕೊಳ್ಳಲಾಗಿತ್ತು ಎಂದು ಕೇರಳ ಡಿಜಿಪಿ ಶೇಖ್ ದರ್ವೇಶ್‌ಸಾಹೇಬ್ ತಿಳಿಸಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲವೆಂದು ಅವರು ಹೇಳಿದ್ದಾರೆ.