ಅರುಣಾಚಲ ಸಿಎಂ ಸೇರಿ 10 ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆ!

Update: 2024-03-31 05:07 GMT

Photo: PTI

ಗುವಾಹತಿ: ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ 10 ಮಂದಿ ಬಿಜೆಪಿ ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆ ಜತೆಗೆ ರಾಜ್ಯ ವಿಧಾನಸಭೆಗೂ ಏಪ್ರಿಲ್ 19ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ವಾಪಾಸು ಪಡೆಯಲು ಕೊನೆಯ ದಿನವಾಗಿದ್ದ ಶನಿವಾರ 10 ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.

ಒಟ್ಟು 60 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಪೆಮಾ ಸೇರಿದಂತೆ ಐದು ಮಂದಿ ಬಿಜೆಪಿ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

"ಸರ್ಕಾರದ ಕೆಲಸಗಳಿಂದ ಜನ ಸಂತೃಪ್ತರಾಗಿದ್ದು, ವಿಧಾನಸಭೆಯ ಉಳಿದ 50 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಲಿದ್ದಾರೆ ಎನ್ನುವುದರ ಸೂಚನೆ ಇದಾಗಿದೆ. ನಾವು ಶೇಕಡ 100ರಷ್ಟು ಫಲಿತಾಂಶ ಪಡೆಯಲಿದ್ದೇವೆ ಎನ್ನುವುದು ಇಂದಿನ ಬೆಳವಣಿಗೆಯಿಂದ ದೃಢಪಟ್ಟಿದೆ" ಎಂದು ಸಿಎಂ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಜೂನ್ 2ರಂದು ಹಾಗೂ ಲೋಕಸಭೆಯ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 41 ವಿಧಾನಸಭಾ ಸ್ಥಾನಗಳನ್ನು ಹಾಗೂ ಎರಡೂ ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು.

ಉಪಮುಖ್ಯಮಂತ್ರಿ ಚೌನಾ ಮೀನ್ ಕೂಡಾ ಚೌಖಂ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಲವು ನಾಮಪತ್ರಗಳನ್ನು ತಿರಸ್ಕರಿಸಿದ ಬಳಿಕ ಹಾಗೂ ಇತರ ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಾಸು ಪಡೆದ ಹಿನ್ನೆಲೆಯಲ್ಲಿ ಇವರು ಕಣದಲ್ಲಿ ಉಳಿದ ಏಕೈಕ ಅಭ್ಯರ್ಥಿ ಎನಿಸಿದರು.

ಹ್ಯೂಲಿಂಗ್ ಕ್ಷೇತ್ರದಲ್ಲಿ ಕಾಂಗ್ರೆಸ್, ಎನ್ ಸಿಪಿ ಹಾಗೂ ಎಲ್ ಜೆಪಿ ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆದದ್ದರಿಂದ ಬಿಜೆಪಿಯ ದಸಂಗ್ಲು ಕಣದಲ್ಲಿ ಉಳಿದ ಏಕೈಕ ಅಭ್ಯರ್ಥಿಯಾದರು. ಮಾಜಿ ಸಿಎಂ ಕಲಿಖೋ ಪುಲ್ ಅವರ ಪತ್ನಿ ಪುಲ್ ಕೂಡಾ ಅವಿರೋಧ ಆಯ್ಕೆಯಾಗಿದ್ದಾರೆ. ಝಿಯೊ-ಹಪೋಲಿ ಕ್ಷೇತ್ರದಲ್ಲಿ ಇಬ್ಬರು ಪಕ್ಷೇತರರು ಹಾಗೂ ಪಿಪಿಎ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಹಗೆ ಅಪ ಅವಿರೋಧ ಆಯ್ಕೆಯಾದರು. ಎನ್ ಪಿಪಿ ಅಭ್ಯರ್ಥಿ ನಾಮಪತ್ರ ವಾಪಾಸು ಪಡೆದ ಹಿನ್ನೆಲೆಯಲ್ಲಿ ಬೊಂದಿಲ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡೊಂಗ್ರು ಸಿಯೋಂಜು ಅವಿರೋಧ ಆಯ್ಕೆಯಾದರು. ಅಂತೆಯೇ ಇಟಾನಗರದಲ್ಲಿ ಎನ್ ಪಿಪಿಯ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಬಿಜೆಪಿಯ ತೆಚಿ ಕಾಸೊ ಚುನಾಯಿತರಾದರು. ಉಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಹೊರತುಪಡಿಸಿ ಉಳಿದ ಯಾವ ಪಕ್ಷಗಳೂ ನಾಮಪತ್ರ ಸಲ್ಲಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News