ಶರದ್ ಪವಾರ್ ಬಣದ 12 ಶಾಸಕರಿಗೆ ಅಜಿತ್ ಬಣದಿಂದ ಅನರ್ಹತೆ ನೋಟಿಸ್
ಮುಂಬೈ: ಎನ್ ಸಿ ಪಿ ಯ ಅಜಿತ್ ಪವಾರ್ ಬಣವು ನಿಮ್ಮನ್ನು ಯಾಕೆ ಅನರ್ಹಗೊಳಿಸಬಾರದು ಎಂದು ಕಾರಣ ನೀಡುವಂತೆ ಸೂಚಿಸಿ ಶರದ್ ಪವಾರ್ ಬಣಕ್ಕೆ ಸೇರಿದ ಒಂಬತ್ತು ಶಾಸಕರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರಿಗೆ ನೋಟಿಸ್ ಗಳನ್ನು ಕಳುಹಿಸಿದೆ.
ಅಜಿತ್ ಪವಾರ್ ಬಣವು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ರನ್ನು ಭೇಟಿಯಾಗಿ, ಈ 12 ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದೆ.
ಜಯಂತ್ ಪಾಟೀಲ್, ಜಿತೇಂದ್ರ ಅವ್ಲಾಡ್, ರೋಹಿತ್ ಪವಾರ್, ಬಾಳಾಸಾಹೇಬ್ ಪಾಟೀಲ್, ಪ್ರಜಕ್ತ್ ತಾನ್ಪುರೆ, ಸುನೀಲ್ ಭೂಸರ, ಅನಿಲ್ ದೇಶ್ಮುಖ್, ರಾಜೇಶ್ ಟೋಪೆ ಮತ್ತು ಸಂದೀಪ್ ಕ್ಷೀರಸಾಗರ್ ನೋಟಿಸ್ ಗಳನ್ನು ಪಡೆದ ಶಾಸಕರು. ವಿಧಾನ ಪರಿಷತ್ ಸದಸ್ಯರಾದ ಏಕನಾಥ್ ಖಡ್ಸೆ, ಶಶಿಕಾಂತ್ ಶಿಂದೆ ಮತ್ತು ಅರುಣ್ ಲಾಡ್ ಅವರಿಗೂ ನೋಟಿಸ್ ಕಳುಹಿಸಲಾಗಿದೆ.
ಶರದ್ ಪವಾರ್ ಬಣವು ಅಜಿತ್ ಪವಾರ್ ಬಣದ ಶಾಸಕರಿಗೆ ಈಗಾಗಲೇ ಅನರ್ಹತಾ ನೋಟಿಸ್ ಗಳನ್ನು ನೀಡಿದೆ. ಶನಿವಾರದ ವೇಳೆಗೆ, ಅಜಿತ್ ಪವಾರ್ ಬಣವು 41 ಶಾಸಕರು ಮತ್ತು ಐವರು ವಿಧಾನ ಪರಿಷತ್ ಸದಸ್ಯರ ಬೆಂಬಲ ಹೊಂದಿದೆ.