ಹರ್ಯಾಣ | 125 ವರ್ಷಗಳ ಹಿಂದೆ ರೂ. 90 ರೂ.ಗೆ ಒತ್ತೆ ಇಟ್ಟಿದ್ದ 1.6 ಎಕರೆ ಜಮೀನನ್ನು ಮರಳಿ ವಶಕ್ಕೆ ಪಡೆಯಲಿರುವ ಕುಟುಂಬ

Update: 2024-04-07 07:27 GMT

Photo: PTI

ಚಂಡೀಗಢ: 125 ವರ್ಷಗಳ ಹಿಂದೆ ತಮ್ಮ ಪೂರ್ವಜರು ಒತ್ತೆ ಇಟ್ಟಿದ್ದ 1.6 ಎಕರೆ ಜಮೀನನ್ನು ಮರಳಿ ಪಡೆಯಲು ಕಾನೂನು ಹೋರಾಟವನ್ನು ಪ್ರಾರಂಭಿಸಿದ್ದ ಹರ್ಯಾಣದ ಕುರುಕ್ಷೇತ್ರದಲ್ಲಿನ ಕುಟುಂಬವೊಂದು, ಮತ್ತೆ ಆ ಜಮೀನನ್ನು ತನ್ನ ವಶಕ್ಕೆ ಪಡೆಯಲಿದೆ.

ಈ ಜಮೀನನ್ನು ಜೂನ್ 1899ರಲ್ಲಿ 90 ರೂ.ಗೆ ಒತ್ತೆ ಇಡಲಾಗಿತ್ತು.

ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ತಮ್ಮ ಅರೆ ನ್ಯಾಯಿಕ ಅಧಿಕಾರವನ್ನು ಬಳಿಸಿ, ಆ ಜಮೀನನನ್ನು ಮೂಲ ಮಾಲಕರ ಉತ್ತರಾಧಿಕಾರಿಗಳಿಗೆ ಈ ವರ್ಷದ ಜೂನ್ 30ರೊಳಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದ್ದಾರೆ. ಮೂಲ ಮಾಲಕರ ಒಂಬತ್ತು ಮಂದಿ ಉತ್ತರಾಧಿಕಾರಿಗಳು ಕುರುಕ್ಷೇತ್ರ ಜಿಲ್ಲೆಯ ಇಸ್ಮಾಯಿಲಾಬಾದ್ ತಾಲ್ಲೂಕಿನ ನೆರೆಯ ಗ್ರಾಮಗಳಾದ ಮಾರ್ಜಿ ಕಲನ್ ಹಾಗೂ ಥೋಲ್ ನ ನಿವಾಸಿಗಳಾಗಿದ್ದಾರೆ.

ಈ ಪ್ರಕರಣದಲ್ಲಿ ಬೀರು ಎಂಬ ರೈತರು ತನ್ನ ಮಾಲಕತ್ವದ ಅರ್ಧದಷ್ಟು ಭಾಗವನ್ನು ಪ್ರಭು ಎಂಬ ವ್ಯಕ್ತಿಗೆ ಜೂನ್ 17, 1899ರಲ್ಲಿ ಒತ್ತೆ ಇಟ್ಟಿದ್ದರು. ಒತ್ತೆ ಕರಾರು ಪತ್ರದ ಪ್ರಕಾರ, ಈ ಜಮೀನಿನಿಂದ ಆಗುವ ಗಳಿಕೆಯಿಂದ ಸಾಲದ ಮೇಲಿನ ಬಡ್ಡಿ ಹಾಗೂ ಸರಕಾರಕ್ಕೆ ಪಾವತಿಸಬೇಕಾದ ಕಂದಾಯವು ವಜಾಗೊಳ್ಳುತ್ತದೆ. ಜಮೀನನ್ನು ಮರಳಿ ಪಡೆಯಲು ಈ ಕರಾರು ಪತ್ರದಲ್ಲಿ ಯಾವುದೇ ಸಮಯ ಮಿತಿಯನ್ನು ವಿಧಿಸಲಾಗಿಲ್ಲ.

ಸಾಲ 90 ರೂ. ಆಗಿದ್ದರೆ, 1900ರಲ್ಲಿ ಪಾವತಿ ಮಾಡಬೇಕಿದ್ದ ಕಂದಾಯವು ಎರಡು ರೂಪಾಯಿ 9 ಆಣೆಯಾಗಿತ್ತು. ಇದರೊಂದಿಗೆ ಸಾಲದ ಮೇಲಿನ ನಿರ್ದಿಷ್ಟ ಬಡ್ಡಿ ದರದ ಬಗ್ಗೆ ಕರಾರು ಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ.

ಖೇಮ್ಕಾ ನ್ಯಾಯಾಲಯದಲ್ಲಿ ಜಮೀನು ಮಾಲಕರ ಉತ್ತರಾಧಿಕಾರಿಗಳು ತಮ್ಮ ವಕೀಲರ ಮೂಲಕ ವಾದ ಮಂಡಿಸಿ, ನಮ್ಮ ಜಮೀನು ಕಳೆದ 125 ವರ್ಷಗಳಿಂದ ಒತ್ತೆದಾರರ ವಶದಲ್ಲಿದ್ದು, ಅವರು ಈ ಜಮೀನಿನಿಂದ ಹೆಚ್ಚುವರಿ ಆದಾಯ ಗಳಿಸುತ್ತಿದ್ದರೂ, ಸಾಲದ ಖಾತೆಯ ವಿವರಣೆ ಒದಗಿಸಿಲ್ಲ ಎಂದು ವಾದಿಸಿದ್ದರು.

ಈ ಪ್ರಕರಣದ ಕುರಿತು ಎಪ್ರಿಲ್ 4ರಂದು ಆದೇಶ ನೀಡಿರುವ 1991ನೇ ಬ್ಯಾಚ್ ನ ಹರ್ಯಾಣ ಕೇಡರ್ ಐಎಎಸ್ ಅಧಿಕಾರಿ ಖೇಮ್ಕಾ, ಸಾಲಕ್ಕೆ ಪ್ರತಿಯಾಗಿ ಒತ್ತೆದಾರರು 1.6 ಎಕರೆ ವಿಸ್ತೀರ್ಣದ ಜಮೀನಿನ ಉಳುಮೆ ಒಡೆತನ ಅನುಭವಿಸುತ್ತಿದ್ದಾರೆ. ಒತ್ತೆದಾರರಿಂದ ಹೆಚ್ಚುವರಿ ಲಾಭ ಹಾಗೂ ಪ್ರಧಾನ ಸಾಲದ ವಿರುದ್ಧ ಹೆಚ್ಚುವರಿ ಆದಾಯವನ್ನು ಸರಿದೂಗಿಸಿರುವ ವಿವರಣೆಯು ಲಭ್ಯವಿಲ್ಲ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಸಾಲದ ಮೊತ್ತವು ವೃದ್ಧಿಯಾಗಲು ಸಾಧ್ಯವಿಲ್ಲದಿದ್ದರೂ, ಕಳೆದ 125 ವರ್ಷಗಳಲ್ಲಿ ಜಮೀನಿನ ಗಳಿಕೆಯು ಭೌಗೋಳಿಕವಾಗಿ ವೃದ್ಧಿಯಾಗಿರುವ ಸಾಧ್ಯವಿದೆ. ಹಾಲಿ ಒತ್ತೆ ಇಟ್ಟಿರುವ ಜಮೀನಿನ ಗುತ್ತಿಗೆ ಬಾಡಿಗೆಯು ಪ್ರತಿ ವರ್ಷ ರೂ. 80,000-90,000 ಇರಬಹುದು ಎಂದು ಅಂದಾಜಿಸಲಾಗಿದೆ” ಎಂದು ತಮ್ಮ ಆದೇಶದಲ್ಲಿ ಖೇಮ್ಕಾ ಪರಿಗಣನೆಗೆ ತೆಗೆದುಕೊಂಡಿದ್ದಾರೆ.

1938ರಲ್ಲಿ ಸರ್ ಛೋಟು ರಾಮ್ ಪರಿಚಯಿಸಿರುವ ಶಾಸನ(ಪಂಜಾಬ್ ಒತ್ತೆ ಜಮೀನುಗಳ ಬಿಡುಗಡೆ ಕಾಯ್ದೆ, 1938)ವನ್ನೂ ಉಲ್ಲೇಖಿಸಿರುವ ಖೇಮ್ಕಾ, “1938ರ ಕಾಯ್ದೆಯು ಕೃಷಿಕರ ಪರ ಕಾಯ್ದೆಯಾಗಿದ್ದು, ಒತ್ತೆ ಇಟ್ಟಿರುವ ಜಮೀನುಗಳನ್ನು ಮೂಲ ಮಾಲಕರ ಪರ ಮರು ವಶಪಡಿಸಿಕೊಳ್ಳಲು ಹಾಗೂ ಸಾಲಗಾರರಿಂದ ದುಬಾರಿ ಬಡ್ಡಿ ದರದಲ್ಲಿ ಸಾಲ ಪಡೆದಿರುವ ರೈತರಿಗೆ ಮುಕ್ತಿ ದೊರಕಿಸಲು ರೂಪಿಸಲಾಗಿರುವ ಕಾಯ್ದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ” ಎಂದೂ ಹೇಳಿದ್ದಾರೆ. ಸರ್ ಛೋಟು ರಾಮ್ ಪರಿಚಯಿಸಿದ ಶಾಸನದ ನಂತರ, ತಮ್ಮ ಜಮೀನುಗಳನ್ನು ಒತ್ತೆ ಇಟ್ಟಿರುವ ರೈತರು ಜಿಲ್ಲಾಧಿಕಾರಿಗಳಿಗೆ ಜಮೀನು ಬಿಡುಗಡೆ ಮಾಡಿಸಿಕೊಡುವಂತೆ ಕೇವಲ ಅರ್ಜಿಯೊಂದನ್ನು ಮಾತ್ರ ಸಲ್ಲಿಸಬೇಕಿತ್ತು.

ಹಾಲಿ ಪ್ರಕರಣದಲ್ಲೂ ಕೂಡಾ, ಜಮೀನಿನ ಮೂಲ ಮಾಲಕ(ಬೀರು)ನ ಉತ್ತರಾಧಿಕಾರಿಗಳು ಅಕ್ಟೋಬರ್ 2018ರಲ್ಲಿ ಜಿಲ್ಲಾಧಿಕಾರಿ (ಪೆಹೊವಾ ಜಿಲ್ಲಾಧಿಕಾರಿ) ಎದುರು ತಮ್ಮ ಜಮೀನನ್ನು ಬಿಡುಗಡೆ ಮಾಡಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಒತ್ತೆದಾರರಿಂದ 1986ರಲ್ಲಿ ಒತ್ತೆ ಇಟ್ಟಿರುವ 1.6 ಎಕರೆ ಜಮೀನನ್ನು ರೂ. 7,000ಕ್ಕೆ ಖರೀದಿಸಿದ್ದ ನೆರೆಯ ಗ್ರಾಮಗಳ ನಿವಾಸಿಗಳಾದ ಗುರ್ಮಿತ್ ಸಿಂಗ್ ಹಾಗೂ ಹರ್ಕೇಶ್ ಈ ಮನವಿಯನ್ನು ವಿರೋಧಿಸಿದ್ದರು.

ಜಿಲ್ಲಾಧಿಕಾರಿಗಳು ಮೂಲ ಮಾಲಕರ ಕುಟುಂಬದ ಪರವಾಗಿ ಒತ್ತೆಯಿಟ್ಟಿರುವ ಜಮೀನನ್ನು ಬಿಡುಗಡೆ ಮಾಡಬೇಕು ಎಂದು ಆದೇಶಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಗುರ್ಮೀತ್ ಹಾಗೂ ಹರ್ಕೇಶ್ ಅಂಬಾಲಾ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿಯೂ ಅವರಿಗೆ ಪರಿಹಾರ ದೊರೆಯದಿದ್ದಾಗ, ಅವರು ಕೇಮ್ಕಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೂಲ ಮಾಲಕರ ಒತ್ತೆ ಕರಾರು ಪತ್ರದಲ್ಲಿ ಮೂಲ ಮಾಲಕರ ಉತ್ತರಾಧಿಕಾರಿಗಳನ್ನು ಲಗತ್ತಿಸಲಾಗಿಲ್ಲ ಎಂದು ಅವರ ಪರ ವಕೀಲರು ವಾದಿಸಿದರಾದರೂ, ಒತ್ತೆ ಕರಾರು ಪತ್ರವು ಸಾಲಗಾರರ ವಶದಲ್ಲಿದೆ ಎಂದೇ ಪರಿಗಣಿಸಲಾಗುತ್ತದೆ ಎಂದು ಖೇಮ್ಕಾ ತೀರ್ಪು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News