ಮಣಿಪುರ: ಗುಂಡಿನ ದಾಳಿಯಲ್ಲಿ 13 ಮಂದಿ ಹತ್ಯೆ; ವರದಿ ಕೇಳಿದ ಮಾನವ ಹಕ್ಕು ಆಯೋಗ
ಗುವಾಹತಿ: ಡಿಸೆಂಬರ್ 4ರಂದು ಮಣಿಪುರದ ತೆಂಗೊಪಾಲ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ಮಂದಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಎರಡು ವಾರಗಳ ಒಳಗಾಗಿ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ ಆರ್ ಸಿ) ಮಣಿಪುರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಮಣಿಪುರದ ತೆಂಗೊಪಾಲ್ ಜಿಲ್ಲೆಯ ಸೈಬಲ್ ಸಮೀಪದ ಲೀಥೊ ಗ್ರಾಮದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ಮಂದಿ ಹತ್ಯೆಗೀಡಾಗಿರುವ ಪ್ರಕರಣದ ಬಗ್ಗೆ ಬಂದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಆಯೋಗ ಈ ನೋಟಿಸ್ ಜಾರಿ ಮಾಡಿದೆ.
"ಈ ವರ್ಷದ ಮೇ ತಿಂಗಳಲ್ಲಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಒಂದೇ ದಿನ ನಡೆದ ಅತಿದೊಡ್ಡ ಜೀವಹಾನಿಯ ಪ್ರಕರಣ ಇದಾಗಿದೆ. ಮೇಲ್ನೋಟಕ್ಕೆ ಸಂತ್ರಸ್ತರು ಮ್ಯಾನ್ಮಾರ್ ಮೂಲದವರು ಎಂದು ಶಂಕಿಸಲಾಗಿದೆ. ಏಕೆಂದರೆ ಲೀಥೊ ಪಕ್ಕದ ಬೆಟ್ಟ ಪ್ರದೇಶದ ದಾರಿಯನ್ನು ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಪ್ರವೇಶಿಸಲು ದಾರಿಯನ್ನಾಗಿ ಬಳಸಿಕೊಳ್ಳಲಾಗಿದೆ" ಎಂದು ಆಯೋಗ ಹೇಳಿದೆ.
"ಮಾಧ್ಯಮ ವರದಿಗಳು ನಿಜ ಎಂದಾದಲ್ಲಿ, ಇದು ಗಂಭೀರ ಮಾನವಹಕ್ಕು ಉಲ್ಲಂಘನೆಯಾಗುತ್ತದೆ ಮತ್ತು ಕಳವಳಕಾರಿ ವಿಚಾರ. ಇದು ಕಾನೂನು ಜಾರಿ ಏಜೆನ್ಸಿಗಳ ಕಡೆಯಿಂದ ಮತ್ತು ಅಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಉದ್ದೇಶಕ್ಕಾಗಿ ನೇಮಕ ಮಾಡಿರುವ ಭದ್ರತಾ ಪಡೆಗಳ ಕಡೆಯಿಂದ ಲೋಪ ಆಗಿರುವ ಸುಳಿವನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿ, ವಿವರವಾದ ವರದಿ ನೀಡುವಂತೆ ಸೂಚಿಸಲಾಗಿದೆ" ಎಂದು ಎನ್ಎಚ್ ಆರ್ ಸಿ ಸ್ಪಷ್ಟಪಡಿಸಿದೆ.