ಕರ್ನಾಟಕದಲ್ಲಿ 2022ರ ಲಿಂಗಾನುಪಾತ 18 ಅಂಕಗಳಷ್ಟು ಕುಸಿತ: ಹೆಣ್ಣು ಭ್ರೂಣ ಹತ್ಯೆ ದೊಡ್ಡ ಕಳವಳ
ಬೆಂಗಳೂರು: ಕರ್ನಾಟಕದಲ್ಲಿ ಲಿಂಗಾನುಪಾತ ಕಳವಳಕಾರಿ ಪ್ರಮಾಣದಲ್ಲಿ ಕುಸಿತಗೊಂಡಿದ್ದು, 2021ರಲ್ಲಿ 947 ಇದ್ದದ್ದು, 2022ರಲ್ಲಿ 929ಕ್ಕೆ ಕುಸಿತಗೊಂಡಿದೆ ಎಂದು ರಾಜ್ಯ ಸರ್ಕಾರದ ನಾಗರಿಕ ನೋಂದಣಿ ವ್ಯವಸ್ಥೆಯ ದತ್ತಾಂಶಗಳಿಂದ ತಿಳಿದು ಬಂದಿದೆ ಎಂದು theprint.in ವರದಿ ಮಾಡಿದೆ.
2011ರ ಜನಗಣತಿ ದತ್ತಾಂಶದ ಪ್ರಕಾರ, ಮಕ್ಕಳ ಲಿಂಗಾನುಪಾತವು ಗ್ರಾಮೀಣ ಭಾಗದಲ್ಲಿ 950 ಇದ್ದರೆ, ಪಟ್ಟಣ ಪ್ರದೇಶಗಳಲ್ಲಿ 946 ಇದೆ.
ರಾಜಧಾನಿ ಬೆಂಗಳೂರಿನಿಂದ ಕೇವಲ 60 ಕಿಮೀ ದೂರವಿರುವ ಚಿಕ್ಕಬಳ್ಳಾಪುರದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆಯ ದತ್ತಾಂಶದ ಪ್ರಕಾರ, 2022ರಲ್ಲಿ 868ಕ್ಕೆ ಕುಸಿತಗೊಂಡಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ, 22 ಜಿಲ್ಲೆಗಳಲ್ಲಿ ಲಿಂಗಾನುಪಾತ ಇಳಿಕೆ ಕಂಡಿದೆ.
ಬೆಂಗಳೂರು ನಗರದಲ್ಲಿ ಲಿಂಗಾನುಪಾತ ತೀವ್ರ ಇಳಿಕೆ ಕಂಡಿದ್ದು, 2019ರಲ್ಲಿ 1,715 ಇದ್ದ ಮಕ್ಕಳ ಅನುಪಾತವು, 2022ರಲ್ಲಿ 949ಕ್ಕೆ ಕುಸಿದಿದೆ. ಈ ಪ್ರವೃತ್ತಿಗೆ ವಲಸೆ ಜನಸಂಖ್ಯೆ ಕಾರಣ ಎನ್ನುತ್ತಾರೆ ತಜ್ಞರು.
"ಈ ಎಲ್ಲ ಲಿಂಗಾನುಪಾತದ ಇಳಿಕೆಯು ಲಿಂಗ ಪತ್ತೆ ಹಾಗೂ ಗರ್ಭಪಾತ ಚಿಕಿತ್ಸಾಲಯದ ಕಾರಣಕ್ಕೆ ಆಗುತ್ತಿದೆ. ಸ್ವಲ್ಪ ಮಟ್ಟಿನ ಬದಲಾವಣೆಯಾದರೆ ಪರವಾಗಿಲ್ಲ. ಆದರೆ, ಇದು ಗಂಭೀರವಾಗಿದ್ದರೆ, ಏನೋ ಲೋಪವಾಗಿದೆ ಎಂಬುದನ್ನು ಸೂಚಿಸುತ್ತದೆ" ಎಂದು ಕರ್ನಾಟಕ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳುತ್ತಾರೆ.
ಈ ದತ್ತಾಂಶವನ್ನು ಈ ತಿಂಗಳ ಆರಂಭದಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲಾಗಿತ್ತು.