ʼಪಾಕಿಸ್ತಾನ ಝಿಂದಾಬಾದ್‌ʼ ಘೋಷಣೆ ಕುರಿತು ಮಾಧ್ಯಮಗಳು ಹಬ್ಬಿದ 22 ಸುಳ್ಳು ಪ್ರಕರಣಗಳು!

Update: 2024-03-05 10:41 GMT

ಬೆಂಗಳೂರು : ರಾಜ್ಯಸಭೆಯ ಮತ ಎಣಿಕೆ ಮುಕ್ತಾಯದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ವಿಧಾನಸೌಧದಿಂದ ಹೊರ ಬರುತ್ತಿದ್ದಂತೆಯೇ ಅವರ ಬೆಂಬಲಿಗರು ಅವರನ್ನು ಸುತ್ತುವರೆದು "ನಾಸಿರ್ ಸಾಬ್ ಝಿಂದಾಬಾದ್ " ಎಂದು ಘೋಷಣೆ ಕೂಗಿರುವುದನ್ನು “ಪಾಕಿಸ್ತಾನ ಝಿಂದಾಬಾದ್” ಎಂದು ತಿರುಚಿ ಮಾಧ್ಯಮಗಳು ಸುದ್ದಿ ಮಾಡಿರುವುದು ಪತ್ರಿಕೋದ್ಯಮದ ವಿಶ್ವಾಸಾರ್ಹತೆಯ ಕುರಿತು ಮತ್ತೆ ಪ್ರಶ್ನೆಗಳನ್ನು ಮುಂಚೂಣಿಗೆ ತಂದಿದೆ.

ಚುನಾವಣಾ ಫಲಿತಾಂಶಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಬಿಜೆಪಿಯ ಆರೋಪಗಳಿಗೆ ನೀಡಿ ಹಲವು ಪತ್ರಿಕೆಗಳೂ ಮುಖಪುಟ ಸುದ್ದಿಯನ್ನು ಮಾಡಿವೆ. ವಿಡಿಯೋದಲ್ಲಿ ನಾಸಿರ್‌ ಸಾಬ್‌ ಝಿಂದಾಬಾದ್‌ ಎಂದು ಕೂಗಿರುವುದು ಸ್ಪಷ್ಟವಾಗುತ್ತಿದ್ದರೂ ಮಾಧ್ಯಮಗಳು ಬಿಜೆಪಿಯ ಸುಳ್ಳಾರೋಪವನ್ನೇ ಬೃಹತ್‌ ಆಗಿ ಬಿಂಬಿಸುತ್ತಿದೆ.

ಬಿಜೆಪಿ ವಿರೋಧಿಗಳನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲು, ಅದರಲ್ಲೂ ಮುಸ್ಲಿಮರನ್ನು ಪಾಕಿಸ್ತಾನ ಬೆಂಬಲಿಗರು ಎಂದು ಬಿಂಬಿಸಲು ಮಾಧ್ಯಮಗಳು ಹಾಗೂ ಬಿಜೆಪಿ ಮಾಡಿರುವ ಪ್ರಯತ್ನ ಇದೇ ಮೊದಲೇನಲ್ಲ. ಬಿಜೆಪಿ ಬೆಂಬಲಿಗರು, ಕೆಲವು ಸುದ್ದಿ ವಾಹಿನಿಯ ನಿರೂಪಕರು, ಮಾಧ್ಯಮಗಳು ಈ ಹಿಂದೆ ಮಾಡಿದ್ದ ಇಂತಹದ್ದೇ 22 ಪ್ರಕರಣಗಳನ್ನು ಸತ್ಯ ಪರಿಶೋಧನಾ ತಂಡವಾದ ಆಲ್ಟ್‌ ನ್ಯೂಸ್‌ ಪಟ್ಟಿ ಮಾಡಿದ್ದು, ಪತ್ರಕರ್ತ ಮಹಮ್ಮದ್‌ ಝುಬೈರ್‌ ಈ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

1. ಉಜ್ಜಯಿನಿಯ ಬಿಜೆಪಿ ಸದಸ್ಯ ಶಬ್ನಮ್‌ ಅಲಿ ಅವರು ಆಯೋಜಿಸಿದ್ದ ಮುಸ್ಲಿಮರ ಕಾರ್ಯಕ್ರಮವೊಂದರಲ್ಲಿ ʼಕಾಝಿ ಸಾಬ್‌ ಝಿಂದಾಬಾದ್‌ʼ ಎಂದು ಘೋಷಣೆ ಕೂಗಿದ್ದನ್ನು ʼಪಾಕಿಸ್ತಾನ ಝಿಂದಾಬಾದ್‌ʼ ಎಂದು ತಿರುಚಲಾಗಿತ್ತು.

2. ಗುಜರಾತ್‌ನ ಕಛ್ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆಯನ್ನು ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಇದು ಪಾಕಿಸ್ತಾನ್ ಝಿಂದಾಬಾದ್ ಅಲ್ಲ, ರಾಧುಭಾಯ್ ಝಿಂದಾಬಾದ್ ಎಂದು ಕಛ್ ಎಸ್ಪಿಯೇ ನಂತರ ಸ್ಪಷ್ಟಪಡಿಸಿದ್ದರು.

3. ಜಾರ್ಖಂಡ್ ಮುಖಿಯಾ ಅಭ್ಯರ್ಥಿ ಶಾಕಿರ್ ಹುಸೇನ್ ಅವರ ನಾಮನಿರ್ದೇಶನದ ಮೆರವಣಿಗೆಯಲ್ಲಿ ‘ಶಾಕಿರ್ ಹುಸೇನ್ ಝಿಂದಾಬಾದ್’ ಎಂದು ಘೋಷಣೆ ಕೂಗಿದ್ದನ್ನು ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಎಂದು ತಿರುಚಲಾಗಿತ್ತು.

4. ಉವೈಸಿಯ ಜಾರ್ಖಂಡ್ ರ‍್ಯಾಲಿಯಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆಯನ್ನು ಕೂಗದಿದ್ದರೂ Zee, Aaj Tak, ABP, News 18 ಮೊದಲಾದ ಮಾಧ್ಯಮಗಳು ತಿರುಚಿ ವರದಿ ಪ್ರಸಾರ ಮಾಡಿದ್ದವು.

5. 2022 ರ ಸೆಪ್ಟೆಂಬರ್‌ ನಲ್ಲಿ ಪಿಎಫ್‌ಐ ನಾಯಕರ ಮೇಲೆ ಎನ್‌ಐಎ ದಾಳಿ ವಿರೋಧಿಸಿ ಅದರ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆಗಳನ್ನು ಕೂಗಲಾಗಿದೆ ಎಂದು ಹಲವಾರು ಟಿವಿ ಮಾಧ್ಯಮ ಚಾನೆಲ್‌ಗಳು, ಸುದ್ದಿ ಸಂಸ್ಥೆಗಳು ಮತ್ತು ಬಿಜೆಪಿ ನಾಯಕರು ಸುಳ್ಳು ಪ್ರತಿಪಾದಿಸಿದ್ದರು.

6. ಜೈಪುರದಲ್ಲಿ ಎಐಎಂಐಎಂ ಬೆಂಬಲಿಗರು ‘ಪಾಕಿಸ್ತಾನ್ ಝಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದವು. "ಉವೈಸಿ ಸಾಬ್ ಝಿಂದಾಬಾದ್" ಎಂದು ಘೋಷಣೆ ಕೂಗಿರುವುದನ್ನೇ ತಪ್ಪಾಗಿ ಪ್ರಸಾರ ಮಾಡಲಾಗಿತ್ತು.

7. 2022ರ ಫೆಬ್ರವರಿಯಲ್ಲಿ ಎಸ್‌ಪಿ-ಆರ್‌ಎಲ್‌ಡಿ ಅಭ್ಯರ್ಥಿ ರ‍್ಯಾಲಿಯಲ್ಲಿ ಬೆಂಬಲಿಗರು ‘ಅಕಿಫ್ ಭಾಯಿ ಝಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದರು. ಅದನ್ನೇ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು ತಿರುಚಿ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಕೊನೆಗೆ ಪೊಲೀಸ್‌ ವರಿಷ್ಠರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

8. ಪಶ್ಚಿಮ ಬಂಗಾಳದಲ್ಲಿ 'ಚುನಾಯಿತರಾದ' 31 ರೋಹಿಂಗ್ಯಾಗಳು 'ಪಾಕಿಸ್ತಾನ್ ಝಿಂದಾಬಾದ್' ಎಂದು ಘೋಷಣೆ ಕೂಗಿದ್ದಾರೆ ಎಂದು ವೈರಲ್‌ ಮಾಡಲಾಗಿತ್ತು. ಕೊನೆಗೆ ಬಹ್ರೈಚ್ ಪೊಲೀಸರು ಇದನ್ನು ನಿರಾಕರಿಸಿದ್ದರು. ಹೊಸದಾಗಿ ಚುನಾಯಿತರಾದ ಪ್ರಧಾನ್ ಬೆಂಬಲಿಗರು 'ಹಾಜಿ ಸಾಬ್ ಝಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿರುವುದನ್ನು ತಿರುಚಲಾಗಿತ್ತು.

9. 2021ರಲ್ಲಿ ಯುಪಿ ಪಂಚಾಯತ್ ಚುನಾವಣಾ ಫಲಿತಾಂಶದ ನಂತರ ‘ಪಾಕಿಸ್ತಾನ್ ಝಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು.ಆದರೆ ವಾಸ್ತವದಲ್ಲಿ ‘ಹಾಜಿ ಸಾಬ್ ಝಿಂದಾಬಾದ್’ ಎಂದು ಕೂಗಿರುವುದನ್ನು ತಿರುಚಿ, ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.


10. 2020ರ ನವೆಂಬರ್‌ನಲ್ಲಿ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರನ್ನು ಸ್ವಾಗತಿಸುವಾಗ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು ಅಸ್ಸಾಂ ಬಿಜೆಪಿ ಶಾಸಕ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದರು. ವಾಸ್ತವವಾಗಿ ಎಐಯುಡಿಎಫ್‌ ಬೆಂಬಲಿಗರು ‘ಅಜೀಜ್ ಖಾನ್ ಝಿಂದಾಬಾದ್’ ಎಂದು ಕೂಗಿದ್ದನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಬಿಜೆಪಿ ಹಬ್ಬಿಸಿದ ಸುಳ್ಳಿನ ಸುದ್ದಿ ಇದಾಗಿತ್ತು.


11. 2020ರ ಮೇನಲ್ಲಿ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಬು ಅಜ್ಮಿ ಅವರ ಬೆಂಬಲಿಗರು ಮುಂಬೈನ ವಡಾಲಾ ನಿಲ್ದಾಣದಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೊವೊಂದು ವೈರಲ್ ಆಯಿತು. ಆದರೆ ಫ್ಯಾಕ್ಟ್‌ ಚೆಕ್‌ ಮಾಡಿದಾಗ ‘ಸಾಜಿದ್ ಭಾಯ್ ಝಿಂದಾಬಾದ್’ ಎಂದು ಕೂಗಿರುವುದು ಕಂಡು ಬಂತು.



12. 2019ರ ಡಿಸೆಂಬರ್‌ನಲ್ಲಿ ಲಕ್ನೋದಲ್ಲಿ ನಡೆದ ಸಿಎಎ ವಿರೋಧಿ ರ‍್ಯಾಲಿ ನಡೆಯುತ್ತಿತ್ತು. ಈ ಸಂದರ್ಭ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು ಬಿಜೆಪಿ ನಾಯಕರು ಮತ್ತು ಮಾಧ್ಯಮಗಳು ಸುಳ್ಳನ್ನು ಹರಡಿದವು. ಆದರೆ ಅದು “ಕಾಶಿಫ್ ಸಾಬ್ ಝಿಂದಾಬಾದ್” ಎಂದು ಕೂಗಿರುವುದನ್ನು, ಸುಳ್ಳು ಸುದ್ದಿ ಮಾಡಿ ಹಂಚಿರುವುದು ಬಳಿಕ ತಿಳಿಯಿತು.

13. ರವಿಶಂಕರ್‌ ಗುರೂಜಿ ಅವರ 2016 ರ ಯಮುನಾ ನದಿ ತಟದ ‘ವಿಶ್ವ ಸಂಸ್ಕೃತಿ ಉತ್ಸವ’ ಕಾರ್ಯಕ್ರಮದ ಕುರಿತು ವ್ಯಕ್ತಿಯೊಬ್ಬರು ತಮ್ಮ ಭಾಷಣದಲ್ಲಿ ಉಲ್ಲೇಖಿಸುತ್ತಿರುವ ವೀಡಿಯೊವನ್ನು ಎಡಿಟ್‌ ಮಾಡಿ, ಮುಂಬೈನ ಚಂಡಿವಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ನಸೀಮ್ ಖಾನ್ ಎಂದು ಪ್ರತಿಪಾದಿಸಲಾಗಿತ್ತು. ಈ ವೀಡಿಯೊ ತುಣುಕಿನಲ್ಲಿ ವ್ಯಕ್ತಿಯು ರವಿಶಂಕರ್‌ ಗುರೂಜಿಯವರು ʼಪಾಕಿಸ್ತಾನ್‌ ಝಿಂದಾಬಾದ್ ಜೊತೆಯಲ್ಲಿ ಜೈ ಹಿಂದ್‌ ಇರಬೇಕುʼ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ, ಹಾಗೂ ರಾಜನಾಥ್‌ ಸಿಂಗ್‌ ಅವರಿಗೆ ಧೈರ್ಯವಿದ್ದರೆ ರವಿಶಂಕರ್ ಗುರೂಜಿ ಮೇಲೆ ದೇಶದ್ರೋಹದ ಕೇಸು ದಾಖಲಿಸಲಿ ಎಂದು ಹೇಳಿದ್ದರು.

14. 2019ರ ಜುಲೈನಲ್ಲಿ ಮಧ್ಯಪ್ರದೇಶದ ಮಂದಸೌರ್‌ನ ಮದ್ರಸಾ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೊವೊಂದನ್ನು ವೈರಲ್ ಮಾಡಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮಂದಸೌರ್ ಎಸ್ಪಿ ಅವರು, “ಮಕ್ಕಳು ತಮ್ಮ ಮೇಷ್ಟ್ರಿಗೆ ‘ಸಬೀರ್ ಸರ್ ಝಿಂದಾಬಾದ್’ ಎಂದು ಜೈಕಾರ ಕೂಗಿದ್ದಾರೆ ಎಂದು ಹೇಳಿದ್ದರು.

15. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು “ಪಾಕಿಸ್ತಾನ್ ಝಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೊವೊಂದನ್ನು 2019ರಲ್ಲಿ ವೈರಲ್‌ ಮಾಡಲಾಗಿತ್ತು. ಫ್ಯಾಕ್ಟ್‌ ಚೆಕ್‌ ಮಾಡಿದಾಗ ಅದು “ಭಾಟಿ ಸಾಬ್ ಝಿಂದಾಬಾದ್” ಎಂದು ಕೂಗಿದ್ದು ಕಂಡು ಬಂದಿತ್ತು.

16. ಸಾಮಾಜಿಕ ಜಾಲತಾಣದದಲ್ಲಿ ಬಲಪಂಥೀಯ ಹ್ಯಾಂಡಲ್‌ಗಳು ಸಹರಾನ್ಪುರ್ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದಾರೆಂದು ಮತ್ತು 2023ರ ಫೆಬ್ರವರಿಯಲ್ಲಿ ಸುಳ್ಳು ಹಬ್ಬಿಸಿದ್ದವು. ಸುದ್ದಿಯ ಬೆನ್ನತ್ತಿ ಹೋದಾಗ ಅದು “ಝೈದ್ ಸರ್ ಝಿಂದಾಬಾದ್, ಝೈದ್ ಸರ್ ಝಿಂದಾಬಾದ್, ಮೋನಿಸ್ ಸರ್ ಝಿಂದಾಬಾದ್, ಮೋನಿಸ್ ಸರ್ ಅಮರ್ ರಹೇ” ಎಂದು ಕೂಗಿದ್ದನ್ನು, ಪಾಕಿಸ್ತಾನ್‌ ಝಿಂದಾಬಾದ್‌ ಎಂದು ತಿರುಚಿ ಸುದ್ದಿ ಮಾಡಲಾಗಿತ್ತು.



17. 2022ರಲ್ಲಿ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನೂತನವಾಗಿ ಆಯ್ಕೆಯಾದ ಪಂಚಾಯತ್ ಸಮಿತಿಯ ಸದಸ್ಯರು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಲಾಗಿತ್ತು. ರಾಜ್ಯದ ಬಿಜೆಪಿ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಅದನ್ನೇ ವರದಿ ಮಾಡಿದ್ದವು. ಘಟನೆ ಎಲ್ಲಿಯವರೆಗೆ ಮುಟ್ಟಿತೆಂದರೆ 62 ಜನರ ಮೇಲೆ ಎಫ್‌ ಐ ಆರ್‌ ದಾಖಲಾಗಿತ್ತು. ಈ ಬಗ್ಗೆ ಫ್ಯಾಕ್ಟ್‌ ಚೆಕ್‌ ಮಾಡಿದಾಗ “ಛೋಟಿ ಚಾ ಝಿಂದಾಬಾದ್” ಎಂದು ಕೂಗಿರುವುದು ಕಂಡು ಬಂದಿತ್ತು. ಛೋಟಿ ರಾಮ್ ಅಕಾ ಅವರನ್ನು “ಛೋಟಿ ಚಾ” ಎಂದು ಕರೆದು, ಅವರ ಪರ ಘೋಷಣೆ ಕೂಗಲಾಗಿತ್ತು.

18. 2022ರ ಮೇ ತಿಂಗಳಲ್ಲಿ ಈದ್‌ ಆಚರಣೆ ವೇಳೆ ರಾಜಸ್ಥಾನದ ಝಲಾವರ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ ಚೆಕ್‌ ನಲ್ಲಿ “ಯಾವುದೇ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿಲ್ಲ. ಪರಿಸ್ಥಿತಿ ಕೈಮೀರಿದ್ದರಿಂದ, ಪೊಲೀಸ್‌ ಇಲಾಖೆಯು ಸೆಕ್ಷನ್ 151 ರ ಅಡಿಯಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ’ಆಲ್ಟ್‌ನ್ಯೂಸ್‌ʼಗೆ ಮಾಹಿತಿ ನೀಡಿದ್ದರು.

19. 2022ರ ಫೆಬ್ರವರಿಯಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷದ ರ‍್ಯಾಲಿಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಪ್ರತಿಪಾದಿಸಿ ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಸುಳ್ಳು ಸುದ್ದಿ ಹರಡಿದ್ದರು. ಫ್ಯಾಕ್ಟ್‌ ಚೆಕ್‌ ಮಾಡಿದಾಗ “ಪಾಕಿಸ್ತಾನ್ ಬನಾನಾ ಹೈ” ಎಂದು ಕೂಗಿರುವುದು ಎಲ್ಲೂ ಕಂಡುಬರಲಿಲ್ಲ. “ಮಾತಿ ಚೋರ್ ಭಗನಾ ಹೈ” ಎಂದು ಘೋಷಣೆ ಹಾಕಿದ್ದನ್ನು, ತಿರುಚಿ ಸುಳ್ಳು ಸುದ್ದಿ ಹಂಚಲಾಗಿತ್ತು.


20. ಉತ್ತರ ಪ್ರದೇಶದ ಘಾಝಿಯಾಬಾದ್‌ನಲ್ಲಿ ನಡೆದ ಎಐಎಂಐಎಂ ರ‍್ಯಾಲಿಯಲ್ಲಿ ’ಪಾಕಿಸ್ತಾನ್ ಝಿಂದಾಬಾದ್‌’ ಘೋಷಣೆ ಕೂಗಿರುವುದಾಗಿ, 2017ರ ನವೆಂಬರ್‌ನಲ್ಲಿ ದೈನಿಕ್ ಜಾಗರಣ್, ದೈನಿಕ್ ಭಾಸ್ಕರ್, ಅಮರ್ ಉಜಾಲಾ ಮತ್ತು ಜನಸತ್ತಾ ಮಾಧ್ಯಮಗಳು ವರದಿ ಮಾಡಿದವು. ಫ್ಯಾಕ್ಟ್‌ ಚೆಕ್ ಮಾಡಿದಾಗ “ಹಾಜಿ ಶಾಹಿದ್ ಝಿಂದಾಬಾದ್” ಎಂದು ಕಾರ್ಯಕರ್ತರು ಕೂಗಿರುವುದು ಕಂಡು ಬಂತು. ಸ್ಥಳೀಯ ಪೊಲೀಸ್‌ ಠಾಣೆಯ ಸ್ಟೇಷನ್‌ ಹೌಸ್ ಆಫೀಸರ್ ಕೂಡ ಇದನ್ನೇ ದೃಢಪಡಿಸಿದ್ದರು.


21. 2022ರ ಜುಲೈನಲ್ಲಿ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದ ಸರಪಂಚ್ ಚುನಾವಣೆಯಲ್ಲಿ ಮುಸ್ಲಿಂ ನಾಯಕರೊಬ್ಬರು ಗೆದ್ದಾಗ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ಫ್ಯಾಕ್ಟ್‌ ಚೆಕ್‌ ಮಾಡಿದಾಗ ‘ವಾಜಿದ್ ಭಾಯ್ ಝಿಂದಾಬಾದ್’ ಎಂದು ಕೂಗಿರುವುದು ಕಂಡು ಬಂತು.

22. 2022ರ ಎಪ್ರಿಲ್‌ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ನೆವಾಸಾದಲ್ಲಿ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿ, ಪಾಕಿಸ್ತಾನ್ ಝಿಂದಾಬಾದ್ ಎಂದಿದ್ದಾರೆಂದು ವಿಡಿಯೊವೊಂದನ್ನು ವೈರಲ್‌ ಮಾಡಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅಹಮದ್‌ನಗರ ಪೊಲೀಸರು, ರಾಮನವಮಿ ಆಚರಣೆಯ ಸಂದರ್ಭ ಮುಸ್ಲಿಮರು ಪಾಕ್ ಪರ ಘೋಷಣೆ ಕೂಗಿರುವುದನ್ನು ನಿರಾಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News