ಸಮರ್ಥ ಮಹಿಳೆಯರು ಮಧ್ಯಂತರ ಜೀವನಾಂಶ ಕೋರಬಾರದು: ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PTI
ಹೊಸದಿಲ್ಲಿ: ಸಂಪಾದನೆ ಮಾಡುವ ಸಾಮರ್ಥ್ಯವುಳ್ಳ ಶಿಕ್ಷಿತ ಮಹಿಳೆಯರು ತಮ್ಮ ಗಂಡಂದಿರಿಂದ ಮಧ್ಯಂತರ ಜೀವನಾಂಶವನ್ನು ಕೇಳಬಾರದು ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಹಾಗೂ ಸೋಮಾರಿಯಾಗಿ ಕಾಲ ಕಳೆಯುವುದನ್ನು ಕಾನೂನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.
ಸಿಆರ್‌ಪಿಸಿಯ ವಿಧಿ 125 (ಹೆಂಡತಿ, ಮಕ್ಕಳು ಮತ್ತು ಹೆತ್ತವರಿಗೆ ಜೀವನಾಂಶ ನೀಡುವುದು)ರ ಉದ್ದೇಶ ಗಂಡ-ಹೆಂಡತಿಯರ ನಡುವೆ ಸಮಾನತೆ ಕಾಯ್ದುಕೊಳ್ಳುವುದು ಹಾಗೂ ಪತ್ನಿಯರು, ಮಕ್ಕಳು ಮತ್ತು ಹೆತ್ತವರಿಗೆ ರಕ್ಷಣೆ ನೀಡುವುದಾಗಿದೆ, ‘‘ಸೋಮಾರಿತನ’’ಕ್ಕೆ ಉತ್ತೇಜನ ನೀಡುವುದಲ್ಲ ಎಂದು ಬುಧವಾರ ನೀಡಿದ ಆದೇಶದಲ್ಲಿ ನ್ಯಾ. ಚಂದ್ರ ಧಾರಿ ಸಿಂಗ್ ಹೇಳಿದರು.
ಪರಿತ್ಯಕ್ತ ಗಂಡನಿಂದ ಮಧ್ಯಂತರ ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘‘ಕೆಲಸ ಮಾಡಿ ಅನುಭವವಿರುವ ಸುಶಿಕ್ಷಿತ ಪತ್ನಿಯೊಬ್ಬರು ತನ್ನ ಗಂಡನಿಂದ ಜೀವನಾಂಶ ಪಡೆಯುವ ಏಕೈಕ ಕಾರಣಕ್ಕಾಗಿ ಸೋಮಾರಿಯಾಗಿ ಉಳಿಯಬಾರದು’’ ಎಂದು ನ್ಯಾ. ಸಿಂಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
‘‘ಹಾಗಾಗಿ, ಈ ಪ್ರಕರಣದಲ್ಲಿ ಮಧ್ಯಂತರ ಜೀವನಾಂಶವನ್ನು ನಿರುತ್ತೇಜಿಸಲಾಗುತ್ತಿದೆ. ಯಾಕೆಂದರೆ, ತನ್ನ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಂಪಾದನೆ ಮಾಡುವ ಸಾಮರ್ಥ್ಯವನ್ನು ಈ ನ್ಯಾಯಾಲಯವು ಅರ್ಜಿದಾರರಲ್ಲಿ ನೋಡುತ್ತಿದೆ’’ ಎಂದು ನ್ಯಾ. ಸಿಂಗ್ ನುಡಿದರು. ಸ್ವಾವಲಂಬಿಯಾಗಲು ಕೆಲಸ ಹುಡುಕುವಂತೆ ನ್ಯಾಯಾಲಯವು ಮಹಿಳೆಗೆ ಸೂಚಿಸಿತು.
ಗಂಡನ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿರುವ ಇತರ ಅಶಿಕ್ಷಿತ ಮಹಿಳೆಯರಂತಲ್ಲದೆ, ಈ ಪ್ರಕರಣದ ಅರ್ಜಿದಾರರು ಜಾಗತಿಕ ವಿಷಯಗಳನ್ನು ಬಲ್ಲವರಾಗಿದ್ದಾರೆ ಹಾಗೂ ಉತ್ತಮ ಅನುಭವ ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿತು.