ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ: ಆದಿತ್ಯನಾಥ್ ಆಡಳಿತದ ವಿರುದ್ಧ ಬಿಜೆಪಿ ಶಾಸಕನಿಂದಲೇ ಆರೋಪ

ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜರ್ (Photo credit: jagran.com)
ಗಾಝಿಯಾಬಾದ್: ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ಗುರ್ಜರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ, ಉತ್ತರ ಪ್ರದೇಶದಲ್ಲಿ ಇದುವರೆಗಿನ ಅತ್ಯಂತ ಭ್ರಷ್ಟ ಸರ್ಕಾರ ಇದೆ ಎಂದು ಆರೋಪಿಸಿದ್ದು, ಅಧಿಕಾರಿಗಳು ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
"ಪೊಲೀಸರು ನನ್ನ ಬಟ್ಟೆಗಳನ್ನು ಹರಿದು ಹಾಕಿದ್ದಾರೆ" ಎಂದು ಆರೋಪಿಸಿದ ಗುರ್ಜರ್ ಹರಿದ ಕುರ್ತಾದಲ್ಲಿಯೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ,"ಮಹಾರಾಜ್ ಜಿ" ಅವರ ಮೇಲೆ ನಿಗೂಢ ಮಾಯಾಜಾಲವನ್ನು ಪ್ರಯೋಗಿಸುವ ಮೂಲಕ ಅವರ ಮೆದುಳನ್ನು ಕಟ್ಟಿಹಾಕಿದ್ದಾರೆ ಎಂದು ಗುರ್ಜರ್ ಆರೋಪಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ವಿಶ್ವದ ಅತ್ಯಂತ ಭ್ರಷ್ಟ ಅಧಿಕಾರಿ ಎಂದಿರುವ ಅವರು, ಉತ್ತರ ಪ್ರದೇಶ ಸರ್ಕಾರಿ ಅಧಿಕಾರಿಗಳು ಅಯೋಧ್ಯೆಯಲ್ಲಿ ಭೂಮಿಯನ್ನು ಲೂಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಶಾಸಕರ ಆರೋಪದ ಹಿನ್ನೆಲೆಯಲ್ಲಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
"ಬಿಜೆಪಿಯ ಆಡಳಿತದಲ್ಲಿ, ಅನ್ಯಾಯ ಮತ್ತು ಭ್ರಷ್ಟಾಚಾರ ಎಲ್ಲೆಡೆ ಹೇಗೆ ಹರಡಿದೆ ಎಂಬುದರ ರಹಸ್ಯಗಳನ್ನು ಬಿಜೆಪಿ ಸದಸ್ಯರು ಸ್ವತಃ ಬಹಿರಂಗಪಡಿಸುತ್ತಿದ್ದಾರೆ. ಈಗ ಅವರು ತಮ್ಮ ವರದಿಗಳನ್ನು ಸಹ ಬದಲಾಯಿಸುತ್ತಾರೆಯೇ?" ಎಂದು ಸಾಮಾಜಿಕ ಮಾಧ್ಯಮದಲ್ಲಿ ಯಾದವ್ ಬಿಜೆಪಿ ಶಾಸಕರ ಹೇಳಿಕೆಗಳ ಬಗ್ಗೆ ಸುದ್ದಿ ವರದಿಯನ್ನು ಹಂಚಿಕೊಂಡಿದ್ದಾರೆ.
ಲೋನಿಯ ಮಹಿಳೆಯರು ಗುರುವಾರ 'ರಾಮ್ ಕಲಾಶ್ ಯಾತ್ರೆ' ನಡೆಸುತ್ತಿದ್ದರು. ಪೊಲೀಸರು ಅದನ್ನು ತಡೆಯಲು ಪ್ರಯತ್ನಿಸಿದಾಗ, ಕೆಟ್ಟ ತಿರುವು ಪಡೆದುಕೊಂಡಿತು ಎಂದು ಗುರ್ಜರ್ ಆರೋಪಿಸಿದ್ದಾರೆ.
ಶಾಸಕರು ಮತ್ತು ಅವರ ಬೆಂಬಲಿಗರು ಯಾವುದೇ ಅನುಮತಿಯಿಲ್ಲದೆ ಯಾತ್ರೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸಿಪಿ (ಅಂಕುರ್ ವಿಹಾರ್) ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮತ್ತೊಂದೆಡೆ, ಲೋನಿಯ ಎಸ್‌ಡಿಎಂ ಅನುಮತಿಗಾಗಿ ಅರ್ಜಿಯನ್ನು ನೀಡಲಾಗಿದೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.
ರಾಮ್ ಕಲಾಶ್ ಯಾತ್ರೆ ಸಾಂಪ್ರದಾಯಿಕವಾಗಿದ್ದು, ಇದುವರೆಗೂ ಸಂಘಟಕರು ಎಂದಿಗೂ ಅನುಮತಿಯನ್ನು ಕೋರಿರಲಿಲ್ಲ ಎಂದು ಗುರ್ಜರ್ ಮಾಧ್ಯಮಗಳಿಗೆ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಸಾಮೂಹಿಕವಾಗಿ ಗೋಹತ್ಯೆ ನಡೆಯುತ್ತಿದೆ ಮತ್ತು ನಕಲಿ ಎನ್‌ಕೌಂಟರ್‌ಗಳಲ್ಲಿ ಜನರನ್ನು ಕೊಲ್ಲಲಾಗುತ್ತಿದೆ ಎಂದು ಆರೋಪಿಸಿ ಅವರು ತಮ್ಮ ಪಕ್ಷದ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದರು.