ವಿಶ್ವ ಸಂತೋಷ ಸೂಚ್ಯಂಕದಲ್ಲಿ ಭಾರತಕ್ಕೆ 118ನೇ ಸ್ಥಾನ, ಅಗ್ರಸ್ಥಾನ ಕಾಯ್ದುಕೊಂಡ ಫಿನ್ಲಂಡ್

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ವಿಶ್ವ ಸಂತೋಷ ಸೂಚ್ಯಂಕ 2025ರಲ್ಲಿ ಭಾರತವು 118ನೇ ಸ್ಥಾನದಲ್ಲಿದೆ. ಆಕ್ಸ್‌ಫರ್ಡ್ ವಿವಿಯ ಯೋಗಕ್ಷೇಮ ಸಂಶೋಧನಾ ಕೇಂದ್ರವು ಗ್ಯಾಲಪ್, ಯುಎನ್ ಸಸ್ಟೈನೇಬಲ್ ಡೆವಲಪ್‌ಮೆಂಟ್ ಸೊಲ್ಯೂಷನ್ಸ್ ನೆಟ್‌ವರ್ಕ್ ಮತ್ತು ಸ್ವತಂತ್ರ ಸಂಪಾದಕೀಯ ಮಂಡಳಿಯೊಂದರ ಸಹಯೋಗದಲ್ಲಿ ಸಿದ್ಧಗೊಳಿಸಿರುವ ವರದಿಯು ಗುರುವಾರ ಬಿಡುಗಡೆಗೊಂಡಿದೆ.
ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಎಂಬ ತನ್ನ ಹೆಗ್ಗಳಿಕೆಯನ್ನು ಫಿನ್ಲಂಡ್ ಉಳಿಸಿಕೊಂಡಿದ್ದು, ಡೆನ್ಮಾರ್ಕ್ ಮತ್ತು ಐಸ್‌ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ. ವಾರ್ಷಿಕ ಸೂಚ್ಯಂಕವು ಯೋಗಕ್ಷೇಮದ ಮೇಲೆ ಪ್ರಭಾವ ಬೀರುವ ಸಾಮಾಜಿಕ, ದೈಹಿಕ ಮತ್ತು ಭಾವನಾತ್ಮಕ ಬೆಂಬಲ ಅಂಶಗಳ ಆಧಾರದಲ್ಲಿ ದೇಶಗಳ ಮೌಲ್ಯಮಾಪನವನ್ನು ನಡೆಸುತ್ತದೆ.
ಸೂಚ್ಯಂಕ ಪಟ್ಟಿಯಲ್ಲಿ ಅಫ್ಘಾನಿಸ್ತಾನ ಅತ್ಯಂತ ಕೆಳಮಟ್ಟದಲ್ಲಿದ್ದು, ಜೀವನ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಅನೇಕ ಅಫ್ಘಾನ್ ಮಹಿಳೆಯರು ದೂರಿದ್ದಾರೆ. ಸಿಯೆರಾ ಲಿಯೋನ್ ಮತ್ತು ಲೆಬನಾನ್ ಅಫ್ಘಾನಿಸ್ತಾನಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ.
147 ದೇಶಗಳ ಪೈಕಿ ಭಾರತವು ಎಂಟು ಸ್ಥಾನಗಳ ಏರಿಕೆಯೊಂದಿಗೆ 118ನೇ ಶ್ರೇಯಾಂಕ ಪಡೆದಿದೆ. 2023 ಮತ್ತು 2024ರ ವರದಿಗಳಲ್ಲಿ ಭಾರತವು 126ನೇ ಸ್ಥಾನದಲ್ಲಿತ್ತು. 2012ರಲ್ಲಿ ಭಾರತವು 144ನೇ ಸ್ಥಾನದಲ್ಲಿದ್ದು, ಅದು ಅದರ ಅತ್ಯಂತ ಕಡಿಮೆ ಶ್ರೇಯಾಂಕವಾಗಿದ್ದರೆ, 2022ರಲ್ಲಿ 94ನೇ ಸ್ಥಾನ ಗಳಿಸಿದ್ದು ಅದರ ಅತ್ಯಂತ ಹೆಚ್ಚಿನ ಶ್ರೇಯಾಂಕವಾಗಿತ್ತು.
ಪಾಕಿಸ್ತಾನವು ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದ್ದರೂ ಭಾರತಕ್ಕಿಂತ ಹೆಚ್ಚು ಸುಖಿ ರಾಷ್ಟ್ರವಾಗಿದ್ದು, ಸೂಚ್ಯಂಕದಲ್ಲಿ ಸ್ವಲ್ಪ ಮೇಲಕ್ಕೆ 109ನೇ ಸ್ಥಾನದಲ್ಲಿದೆ.
ಸೂಚ್ಯಂಕವು ತಲಾವಾರು ಜಿಡಿಪಿ, ಸಾಮಾಜಿಕ ಬೆಂಬಲ, ಜೀವಿತಾವಧಿ, ಜೀವನದಲ್ಲಿ ಆಯ್ಕೆಗಳನ್ನು ಮಾಡುವ ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರದ ಗ್ರಹಿಕೆಗಳು ಸೇರಿದಂತೆ ಹಲವಾರು ಮಾನದಂಡಗಳನ್ನು ಆಧರಿಸಿ ದೇಶಗಳಿಗೆ ಶ್ರೇಯಾಂಕಗಳನ್ನು ನೀಡುತ್ತದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದರೂ, ಭಾರತದ ಒಟ್ಟಾರೆ ಸಂತೋಷದ ಅಂಕಗಳು ಕಡಿಮೆಯಾಗಿಯೇ ಉಳಿದಿವೆ.