5 ವರ್ಷದಲ್ಲಿ 22 ಸಾವಿರ ಚುನಾವಣಾ ಬಾಂಡ್ ಬಿಡುಗಡೆ: ಎಸ್ ಬಿಐ

Update: 2024-03-05 02:31 GMT

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ 22,217 ಚುನಾವಣಾ ಬಾಂಡ್ ಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಸಲುವಾಗಿ ಬಳಸಲಾಗಿದೆ ಎಂಬ ಅಂಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಬಹಿರಂಗಪಡಿಸಿದೆ.

ಫೆಬ್ರವರಿ 15ರಂದು ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಸ್ರಾಹಾದ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ ಐವರು ನ್ಯಾಯಾಧೀಶರ ಪೀಠ ನಿರ್ದೇಶನ ನೀಡಿ, "ಸುಪ್ರೀಕೋರ್ಟ್ 2019ರ ಏಪ್ರಿಲ್ 12ರಂದು ನೀಡಿದ ಮಧ್ಯಂತರ ಆದೇಶದ ಬಳಿಕ ಖರೀದಿಯಾದ ಚುನಾವಣಾ ಬಾಂಡ್ ಗಳ ವಿವರಗಳನ್ನು ಎಸ್ ಬಿಐ, ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಪ್ರತಿ ಬಾಂಡ್ ಖರೀದಿಯ ದಿನಾಂಕದ ವಿವರ, ಖರೀದಿದಾರರ ಹೆಸರು ಮತ್ತು ಖರೀದಿ ಮಾಡಿದ ಬಾಂಡ್ ಗೆ ನೀಡಲ್ಪಟ್ಟ ದೇಣಿಗೆಯ ವಿವರಗಳನ್ನು ಇದು ಒಳಗೊಂಡಿರಬೇಕು" ಎಂದು ಸೂಚಿಸಿತ್ತು.

ಎಸ್ ಬಿಐ ನೀಡಿದ ವಿವರಗಳನ್ನು ಭಾರತದ ಚುನಾವಣಾ ಆಯೋಗ ತನ್ನ ವೆಬ್ಸೈಟ್ ನಲ್ಲಿ ಒಂದು ವಾರದ ಒಳಗಾಗಿ ಅಂದರೆ ಮಾರ್ಚ್ 13ರ ಒಳಗಾಗಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ 2019ರ ಏಪ್ರಿಲ್ 12ರಿಂದ ಈ ವರ್ಷದ ಫೆಬ್ರುವರಿ 15ರವರೆಗೆ ಒಟ್ಟು 22217 ಬಾಂಡ್ ಗಳನ್ನು ಬಳಸಲಾಗಿದೆ ಎಂಬ ಅಂಶವನ್ನು ಪ್ರಕಟಿಸಿದೆ.

"ಬಿಡುಗಡೆ ಮಾಡಲಾದ ಚುನಾವಣಾ ಬಾಂಡ್ ಗಳನ್ನು ಅನುಮತಿ ನೀಡಲಾದ ಶಾಖೆಗಳು ಮುಂಬೈ ಪ್ರಧಾನ ಶಾಖೆಗೆ ಪ್ರತಿ ಹಂತದ ಕೊನೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿವೆ. ಎರಡು ಭಿನ್ನ ಮಾಹಿತಿ ಭಾಗಗಳು ಇರುವುದರಿಂದ ಒಟ್ಟು 44434 ಮಾಹಿತಿ ಸೆಟ್ ಗಳನ್ನು ಡಿಕೋಡ್ ಮಾಡಿ, ಕ್ರೋಢೀಕರಿಸಿ, ತುಲನೆ ಮಾಡಬೇಕಾಗುತ್ತದೆ" ಎಂದು ವಿವರಿಸಿದೆ.

ದಾನಿಗಳ ಹೆಸರನ್ನು ಗುಪ್ತವಾಗಿ ಇಡುವ ಉದ್ದೇಶದಿಂದ ಡಿಕೋಡ್ ಮಾಡುವ ಪ್ರಕ್ರಿಯೆ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ. ದೇಶಾದ್ಯಂತ ಒಟ್ಟು 29 ಎಸ್ ಬಿಐ ಶಾಖೆಗಳಿಗೆ ಈ ಬಾಂಡ್ ಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News