ಉತ್ತರ ರಾಜ್ಯಗಳಲ್ಲಿ ವ್ಯಾಪಕ ಮಳೆಗೆ 31 ಮಂದಿ ಮೃತ್ಯು
ಹೊಸದಿಲ್ಲಿ: ರಾಜಸ್ಥಾನ, ಹಿಮಾಚಲ, ಉತ್ತರ ಪ್ರದಶ ಹಾಗೂ ಪಂಜಾಬ್ ನಲ್ಲಿ ಮಳೆಹಾನಿಯಿಂದ ಕನಿಷ್ಠ 31 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್ ನಲ್ಲಿ ತೊರೆಯೊಂದರಲ್ಲಿ ಕಾರು ಕೊಚ್ಚಿಕೊಂಡು ಹೋದ ದುರಂತದಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿ ಜಲಸಮಾಧಿಯಾಗಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಕನಿಷ್ಠ ಎಂದು ಮಂದಿ ನಾಪತ್ತೆಯಾಗಿದ್ದಾರೆ.
ರಾಜಸ್ಥಾನದ ಜೈಪುರ ಮತ್ತು ಭರತ್ಪುರದಲ್ಲಿ ಮಳೆ ವ್ಯಾಪಕ ಹಾನಿ ಮಾಡಿದೆ. ಇಲ್ಲಿ 17 ಸಾವು ಸಂಭವಿಸಿದ್ದು, ಐದು ಮಂದಿ ಕಾಣೆಯಾಗಿದ್ದಾರೆ. ಈ ಐದು ಮಂದಿ ಜೈಪುರದ ಕನೋಟಾ ಅಣೆಕಟ್ಟಿನಲ್ಲಿ ಸ್ನಾನಕ್ಕೆ ತೆರಳಿದ್ದರು ಎನ್ನಲಾಗಿದೆ.
ಭರತ್ಪುರದಲ್ಲಿ ಏಳು ಮಂದಿ ಯುವಕರು ಬಂಗಾಂಗ ಜಲಪಾತ ಬಳಿ ರೀಲ್ಸ್ ಗೆ ಪೋಸ್ ನೀಡುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮಳೆನೀರಿನಿಂದ ತುಂಬಿದ್ದ ಹೊಂಡಕ್ಕೆ ಬಿದ್ದು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಮೂವರು ಮೃತಪಟ್ಟರು. ಕರೌಲಿ ಜಿಲ್ಲೆಯಲ್ಲಿ ಒಂದೇ ದಿನ 380 ಮಿ.ಮೀಟರ್ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ತಾವು ವಾಸವಿದ್ದ ಮನೆಯ ಮೇಲೆ ಪಕ್ಕದ ಮನೆ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ವ್ಯಕ್ತಿಯೊಬ್ಬರು ಹಾಗೂ ಹತ್ತು ವರ್ಷದ ಮಗ ಜೀವ ಕಳೆದುಕೊಂಡಿದ್ದಾರೆ.
ಜೋಧ್ ಪುರದಲ್ಲಿ ಐದು ಮಂದಿ ಮಳೆಸಂಬಂಧಿ ಅನಾಹುತಗಳಲ್ಲಿ ಮೃತರಾಗಿದ್ದಾರೆ. ಚಾರಣಕ್ಕೆ ಆಗಮಿಸಿದ್ದ 17 ವರ್ಷದ ಯುವಕ ಕೊಯ್ಲಾನಾ ಸರೋವರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಳೆ ವ್ಯಾಪಕ ಹಾನಿಗೆ ಕಾರಣವಾಗಿದ್ದು, ವಿವಿಧೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಿಎಂ ಭಜನ್ ಲಾಲ್ ಶರ್ಮಾ ಭಾನುವಾರ ಪರಿಸ್ಥಿತಿ ವೀಕ್ಷಿಸಿ ಸಂತ್ರಸ್ತರಿಗೆ ಸೂಕ್ತ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.