ರಾಜಸ್ಥಾನ: ಹಳಿ ತಪ್ಪಿದ ಸಬರಮತಿ-ಆಗ್ರಾ ಸೂಪರ್ ಫಾಸ್ಟ್ ರೈಲು
ಅಜ್ಮೀರ್: ಸೋಮವಾರ ಬೆಳಗ್ಗೆ ಸಬರಮತಿ-ಆಗ್ರಾ ಸೂಪರ್ ಫಾಸ್ಟ್ ರೈಲಿನ ನಾಲ್ಕು ಬೋಗಿಗಳು ಅಜ್ಮೀರ್ ನಿಲ್ದಾಣದ ಬಳಿ ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ಮುಂಜಾನೆ ಒಂದು ಗಂಟೆಯ ಆಸುಪಾಸು ನಡೆದಿದ್ದು, ಯಾವುದೇ ಜೀವ ಹಾನಿ ವರದಿಯಾಗಿಲ್ಲ. ರೈಲು ಅಜ್ಮೀರ್ ಮಾರ್ಗವಾಗಿ ಆಗ್ರಾಗೆ ತೆರಳುತ್ತಿತ್ತು ಎಂದು ಅವರು ಹೇಳಿದ್ದಾರೆ.
“ರೈಲು ಮಾದರ್ ನಿಲ್ದಾಣವನ್ನು ತಲುಪುವ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ” ಎಂದು ವಾಯುವ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಶಿ ಕಿರಣ್ ತಿಳಿಸಿದ್ದಾರೆ.
“ಯಾವುದೇ ಗಾಯ ಅಥವಾ ಜೀವ ಹಾನಿ ಸಂಭವಿಸಿಲ್ಲ. ದಿಲ್ಲಿ ಕಡೆ ಸಾಗುವ ಮತ್ತು ದಿಲ್ಲಿಯಿಂದ ಬರುವ ರೈಲುಗಳ ಸಂಚಾರ ಅದಾಗಲೇ ಪ್ರಾರಂಭಗೊಂಡಿದೆ. ನಾವು ಶೀಘ್ರದಲ್ಲೇ ಉತ್ತರ ಪ್ರದೇಶ ಮಾರ್ಗವಾಗಿಯೂ ರೈಲು ಸಂಚಾರ ಪ್ರಾರಂಭಿಸುವವರಿದ್ದೇವೆ” ಎಂದೂ ಅವರು ಹೇಳಿದ್ದಾರೆ.
ವಾಯುವ್ಯ ರೈಲ್ವೆ ವಲಯವು ಅಜ್ಮೇರ್ ನಿಲ್ದಾಣದಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದು, ಸಹಾಯ ವಾಣಿ ಸಂಖ್ಯೆ 0145-2429642 ಅನ್ನೂ ಬಿಡುಗಡೆಗೊಳಿಸಿದೆ. ಈ ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಬಂಧಿಕರು ಈ ಸಹಾಯವಾಣಿಗೆ ಕರೆ ಮಾಡಿ, ತಮ್ಮವರ ಯೋಗಕ್ಷೇಮವನ್ನು ವಿಚಾರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
“ಘಟನೆ ಬಳಿಕ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಎರಡು ರೈಲುಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.