ಅಂಗಾಂಗ ದಾನಿಗಳಲ್ಲಿ 5 ರಲ್ಲಿ 4 ಮಂದಿ ಮಹಿಳೆಯರು; ಅಧ್ಯಯನ ವರದಿ

Update: 2023-11-13 05:27 GMT

photo: freepik

ಪುಣೆ: ಭಾರತದಲ್ಲಿ ಒಬ್ಬ ಮಹಿಳೆ ಅಂಗಾಂಗ ದಾನ ಮಾಡಿದರೆ, ನಾಲ್ವರು ಪುರುಷರು ಅಂಗಾಂಗ ದಾನ ಪಡೆಯುತ್ತಾರೆ. 1995ರಿಂದ 2021ರವರೆಗೆ ದೇಶದಲ್ಲಿ 36640 ಅಂಗಾಂಗ ಕಸಿ ನಡೆದಿದ್ದು, ಇದರಲ್ಲಿ 29 ಸಾವಿರ ಪುರಷರು ಹಾಗೂ 6945 ಮಹಿಳೆಯರು ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ ಎಂದು ಅಧ್ಯಯನ ವರದಿ ಹೇಳಿದೆ ಎಂದು timesofindia ವರದಿ ಮಾಡಿದೆ.

ಆರ್ಥಿಕ ಹಾಗೂ ಹಣಕಾಸು ಹೊಣೆಗಾರಿಕೆ, ಸಾಮಾಜಿಕ ಒತ್ತಡಗಳಿಂದಾಗಿ ಮತ್ತು ಆಳವಾಗಿ ಬೇರುಬಿಟ್ಟ ಆದ್ಯತೆಗಳಿಂದಾಗಿ ಅಂಗಾಂಗ ಸ್ವೀಕರಿಸುವಲ್ಲಿ ಪುರುಷರು ಸಿಂಹಪಾಲು ಪಡೆಯುತ್ತಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಎನ್ಓಟಿಟಿಓ ನಿರ್ದೇಶಕ ಡಾ.ಅನಿಲ್ ಕುಮಾರ್ ಅವರ ಪ್ರಕಾರ, ಬಹಳಷ್ಟು ಮಂದಿ ಪುರುಷರು ಮೃತರಾದ ಬಳಿಕ ಅಂಗಾಂಗ ದಾನ ಮಾಡಿದರೆ, ಮಹಿಳೆಯರು ಬಹಳಷ್ಟು ಮಂದಿ ಜೀವಿತಾವಧಿಯಲ್ಲೇ ಅಂಗಾಂಗ ದಾನ ಮಾಡುತ್ತಾರೆ. "ದೇಶದ ಅಂಗಾಂಗ ದಾನಿಗಳಲ್ಲಿ ಶೇಕಡ 93ರಷ್ಟು ಮಂದಿ ಜೀವಂತ ದಾನಿಗಳು. ಅಂದರೆ ದೇಶದ ಬಹುತೇಕ ಅಂಗಾಂಗ ದಾನಿಗಳು ಮಹಿಳೆಯರು ಎನ್ನುವುದು ಸ್ಪಷ್ಟವಾಗುತ್ತದೆ" ಎನ್ನುವುದು ಅವರ ಅಭಿಮತ.

ಎಕ್ಸ್ಪರಿಮೆಂಟಲ್ ಅಂಡ್ ಕ್ಲಿನಿಕಲ್ ಟ್ರಾನ್ಸಪ್ಲಾಂಟೇಶನ್ ಜರ್ನಲ್ ಪ್ರಕಟಿಸಿದ ಅಧ್ಯಯನ ವರದಿಯೊಂದರ ಪ್ರಕಾರ, ದೇಶದಲ್ಲಿ ಈ ವಿಚಾರದಲ್ಲಿ ದೊಡ್ಡ ಪ್ರಮಾಣದ ಲಿಂಗ ತಾರತಮ್ಯ ಇದೆ. 2019ರಲ್ಲಿ ಆಗಿರುವ ಅಂಗಾಂಗ ಕಸಿ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ, ಶೇಕಡ 80ರಷ್ಟು ಸಜೀವ ಅಂಗಾಂಗ ದಾನಿಗಳು ಮಹಿಳೆಯರು. ಮುಖ್ಯವಾಗಿ ಪತ್ನಿ ಅಥವಾ ತಾಯಿ. ಅಂಗಾಂಗ ದಾನ ಪಡೆಯುವವರಲ್ಲಿ ಶೇಕಡ 80ರಷ್ಟು ಮಂದಿ ಪುರುಷರು.

ಮಹಿಳೆಯರು ಸಾಮಾನ್ಯವಾಗಿ ಕುಟುಂಬದ ಆರೈಕೆ ಜವಾಬ್ದಾರಿ ಹೊಂದಿರುವುದು ಮತ್ತು ಪುರುಷರು ಆದಾಯದ ಮೂಲವಾಗಿರುವುದರಿಂದ ಈ ತಾರತಮ್ಯ ಇದೆ. ಜತೆಗೆ ಪುರುಷರು ಅಂಗಾಂಗ ದಾನ ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News