ಜಿ20 ಶೃಂಗಸಭೆಯಿಂದಾಗಿ 400 ಕೋ.ರೂ.ಗಳ ನಷ್ಟ:ದಿಲ್ಲಿ ವ್ಯಾಪಾರಿಗಳ ಅಳಲು

Update: 2023-09-16 14:09 GMT

G20 | Photo: PTI 

ಹೊಸದಿಲ್ಲಿ : ಇತ್ತೀಚಿಗೆ ಮುಕ್ತಾಯಗೊಂಡ ಜಿ20 ಶೃಂಗಸಭೆ ಭಾರತದ ಪಾಲಿಗೆ ಅದ್ಭುತ ಯಶಸ್ಸು ಆಗಿರಬಹುದು, ಆದರೆ ಅದು ದಿಲ್ಲಿಯ ಅಂಗಡಿಗಳು ಮತ್ತು ರೆಸ್ಟೋರಂಟ್‌ಗಳಿಗೆ ಅಂದಾಜು 400 ಕೋ.ರೂ.ಗಳ ನಷ್ಟವನ್ನುಂಟು ಮಾಡಿದೆ. ಹೊಸದಿಲ್ಲಿ ಪ್ರದೇಶದಲ್ಲಿಯ ಮಾರುಕಟ್ಟೆಗಳು ಮತ್ತು ಮಾಲ್‌ಗಳು ಮುಚ್ಚಲ್ಪಟ್ಟಿದ್ದರಿಂದ ಸುಮಾರು 9,000 ಡೆಲಿವರಿ ಬಾಯ್‌ಗಳ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಶೃಂಗಸಭೆಗಾಗಿ ಹೊಸದಿಲ್ಲಿ ಜಿಲ್ಲೆಯಲ್ಲಿ ಎಲ್ಲ ವಾಣಿಜ್ಯ ಮಳಿಗೆಗಳು ಮತ್ತು ಆರ್ಥಿಕ ಸಂಸ್ಥೆಗಳನ್ನು ಸೆ.8ರಿಂದ ಸೆ.10ರವರೆಗೆ ಮುಚ್ಚಲಾಗಿತ್ತು ಎಂದು indiatimes.com ವರದಿ ಮಾಡಿದೆ.

ಸಂಚಾರ ನಿರ್ಬಂಧಗಳಿಂದಾಗಿ ತಮ್ಮ ಮನೆಗಳಲ್ಲಿಯೇ ಇರುವುದು ಜನರಿಗೆ ಅನಿವಾರ್ಯವಾಗಿದ್ದರಿಂದ ನಿಯಂತ್ರಿತ ವಲಯದ ಹೊರಗಿನ ಅನೇಕ ವ್ಯವಹಾರ ಮಳಿಗೆಗಳಲ್ಲಿಯೂ ವ್ಯಾಪಾರ ಅರ್ಧದಷ್ಟು ಕಡಿಮೆಯಾಗಿತ್ತು ಎಂದು ಉದ್ಯಮ ರಂಗದ ಪ್ರಮುಖರು ಹೇಳಿದರು.

‘ಮೂರು ದಿನಗಳ ಕಾಲ ವ್ಯವಹಾರಗಳನ್ನು ಮುಚ್ಚಿದ್ದರಿಂದ ಹೊಸದಿಲ್ಲಿಯ ವ್ಯಾಪಾರಿಗಳು ಸುಮಾರು 300-400 ಕೋ.ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ.

ಶೃಂಗಸಭೆಗಾಗಿ ನಾವು ಎದುರು ನೋಡುತ್ತಿದ್ದೆವು,ಆದರೆ ಭದ್ರತೆಯು ಪ್ರಮುಖ ಕಾಳಜಿಯಾಗಿದ್ದರಿಂದ ಅತಿಥಿಗಳು ನಮ್ಮ ದೇಶದ ಸರಿಯಾದ ಚಿತ್ರಣದೊಂದಿಗೆ ಹಿಂದಿರುಗಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ’ ಎಂದು ಹೊಸದಿಲ್ಲಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅತುಲ್ ಭಾರ್ಗವ ಹೇಳಿದರು.

ದಿಲ್ಲಿಯ ರೆಸ್ಟೋರಂಟ್‌ಗಳಲ್ಲಿ ವ್ಯಾಪಾರ ಕನಿಷ್ಠ ಶೇ.50ರಷ್ಟು ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್)ದಲ್ಲಿ ಶೇ.20ರವರೆಗೆ ಕುಸಿದಿತ್ತು. ಈ ಪ್ರಮಾಣದಲ್ಲಿ ಕಾರ್ಯಕ್ರಮದ ಆಯೋಜನೆಯು ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು ಎನ್ನುವುದು ಸ್ಪಷ್ಟವಾಗಿದೆ ಎಂದು ಸರಣಿ ಹೋಟೆಲ್‌ಗಳನ್ನು ನಡೆಸುತ್ತಿರುವ ಸ್ಪೆಷಾಲಿಟಿ ರೆಸ್ಟೋರಂಟ್ಸ್‌ನ ಅಧ್ಯಕ್ಷ ಅಂಜಾನ್ ಚಟರ್ಜಿ ಹೇಳಿದರು.

‘ದಿಲ್ಲಿಯಲ್ಲಿ ನಮ್ಮ ಮಾರಾಟವು ಸುಮಾರು ಶೇ.50ರಷ್ಟು ಕುಸಿದಿತ್ತು, ಗುರಗಾಂವ್‌ನಲ್ಲಿಯೂ ನಮ್ಮ ಮಾರಾಟ ಸುಮಾರು ಶೇ.20ರಷ್ಟು ಇಳಿಕೆಯಾಗಿತ್ತು ’ ಎಂದು ಸರಣಿ ಹೋಟೆಲ್‌ಗಳನ್ನು ಹೊಂದಿರುವ ಲೈಟ್ ಬೈಟ್ ಫುಡ್ಸ್‌ನ ನಿರ್ದೇಶಕ ರೋಹಿತ್ ಅಗರವಾಲ್ ತಿಳಿಸಿದರು.

ಶಾಪಿಂಗ್ ಮತ್ತು ಡೈನಿಂಗ್‌ಗಾಗಿ ಹೆಸರುವಾಸಿಯಾಗಿರುವ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗಳನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುವ ಖಾನ್ ಮಾರ್ಕೆಟ್, ಕನಾಟ್ ಪ್ಲೇಸ್ ಮತ್ತು ಜನಪಥ್‌ನಂತಹ ದಿಲ್ಲಿಯ ಪ್ರಮುಖ ಮಾರುಕಟ್ಟೆಗಳು ವ್ಯಾಪಾರದ ಅತ್ಯುತ್ತಮ ಅವಕಾಶವನ್ನು ಕಳೆದುಕೊಂಡಿವೆ. ಶೃಂಗಸಭೆಯ ಪರಿಣಾಮ ರಾಜಧಾನಿಯಾದ್ಯಂತ ಅನುಭವವಾಗಿತ್ತು ಎಂದು ಉದ್ಯಮ ಪ್ರಮುಖರು ಹೇಳಿದರು.

ಜಿ20ಗಾಗಿ 4,100 ಕೋ.ರೂ.ವೆಚ್ಚ

ಸರಕಾರದ ದಾಖಲೆಗಳಂತೆ ಜಿ20 ಶೃಂಗಸಭೆಗಾಗಿ ಹೊಸದಿಲ್ಲಿಯನ್ನು ಸುಂದರವಾಗಿಸಲು 4,100 ಕೋ.ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡಲಾಗಿದೆ. ಅಂದ ಹಾಗೆ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ 2023-24ನೇ ಸಾಲಿನ ಮುಂಗಡಪತ್ರದಲ್ಲಿ ಜಿ20 ಅಧ್ಯಕ್ಷತೆಗಾಗಿ 990 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ವರದಿಯಾಗಿರುವ 4,100 ಕೋ.ರೂ.ಹಣವು ಬಜೆಟ್‌ನಲ್ಲಿ ಗೊತ್ತುಪಡಿಸಲಾಗಿದ್ದ ಮೊತ್ತಕ್ಕಿಂತ ನಾಲ್ಕು ಪಟ್ಟು ಅಧಿಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News