ಸಂಸತ್ತಿನ ಮೇಲೆ ದಾಳಿ ಪ್ರಕರಣದಲ್ಲಿ ಆರು ಮಂದಿ ಭಾಗಿ; ನಾಲ್ವರ ಬಂಧನ, ಇಬ್ಬರು ಪರಾರಿ

Update: 2023-12-13 13:55 GMT

ಹೊಸದಿಲ್ಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಸಂಸತ್ತಿನ ಮೇಲೆ ದಾಳಿ ಪ್ರಕರಣದ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಆರು ಜನರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

ಸಂಸತ್ತಿನೊಳಗೆ ಅಪರಿಚಿತರು ನುಗ್ಗಿದ ಬಳಿಕ ಹೊಸ ಸಂಸತ್ ಕಟ್ಟಡದಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳ ಮಹಾಪೂರವೇ ಹರಿದುಬಂದಿದೆ. ಐದು ಹಂತಗಳಲ್ಲಿ ಭದ್ರತಾ ಸ್ಕ್ರೀನಿಂಗ್ ಇದ್ದರೂ, ಭದ್ರತಾ ವೈಫಲ್ಯವಾದುದು ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಸಂಸತ್ತಿನ ಒಳಗೆ ದಾಳಿ ಘಟನೆಯಲ್ಲಿ ಭಾಗಿಯಾದ ಇಬ್ಬರು ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್. ಸಂಸತ್ತಿನ ಹೊರಗಡೆಯ ಘಟನೆಯಲ್ಲಿ ಭಾಗಿಯಾದವರು ನೀಲಂ ದೇವಿ ಮತ್ತು ಅಮೋಲ್ ಶಿಂಧೆ. ಐದನೆಯ ವ್ಯಕ್ತಿಯನ್ನು ಲಲಿತ್ ಝಾ ಎಂದು ಹೆಸರಿಸಲಾಗಿದ್ದು, ಆತನ ಗುರುಗ್ರಾಮದ ಮನೆಯಲ್ಲಿ ಐವರು ಉಳಿದುಕೊಂಡಿದ್ದರು ಎನ್ನಲಾಗಿದೆ.

ಆರನೇ ವ್ಯಕ್ತಿಯ ಹೆಸರು ವಿಕ್ರಂ ಎನ್ನಲಾಗಿದೆ. ಲಲಿತ್ ಝಾ ಜೊತೆ ಆತನೂ ಪರಾರಿಯಾಗಿದ್ದಾನೆ.

ಲೋಕಸಭೆಯೊಳಗೆ ನುಗ್ಗಿದವರಲ್ಲಿ ಇಬ್ಬರ ಪೈಕಿ ಸಾಗರ್ ಶರ್ಮಾ ಉತ್ತರ ಪ್ರದೇಶದ ಲಕ್ನೋ ಮೂಲದವನು ಎನ್ನಲಾಗಿದೆ. ಇನ್ನೋರ್ವ ಕರ್ನಾಟಕದ ಮೈಸೂರಿನ ಡಿ ಮನೋರಂಜನ್ ಎಂಬುದು ಪ್ರಾಥಮಿಕ ವಿಚಾರಣೆಯಿಂದ ದೃಢಪಟ್ಟಿದೆ. ಸಂಸತ್ತಿನ ಹೊರಗೆ ಸಿಕ್ಕಿಬಿದ್ದ ಇಬ್ಬರಲ್ಲಿ ಓರ್ವ ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ ಎನ್ನಲಾಗಿದೆ. ಮತೊಬ್ಬಳು ಹರಿಯಾಣದ ಹಿಸಾರ್ ನ ನೀಲಂ ದೇವಿ ಎಂದು ತಿಳಿದು ಬಂದಿದೆ.

ಸಂಸತ್ತಿನೊಳಗೆ ನುಗ್ಗಿದ ಘಟನೆಯಲ್ಲಿ ಭಾಗಿಯಾದ, ಲೋಕಸಭೆಯ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್, ಅವರಿಬ್ಬರೂ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಎಲ್ಲಾ ಆರು ಮಂದಿ ಆನ್‌ಲೈನ್‌ನಲ್ಲಿ ಭೇಟಿಯಾಗಿ, ಒಟ್ಟಿಗೆ ಈ ಯೋಜನೆ ರೂಪಿಸಿದರು ಎನ್ನಲಾಗಿದೆ. ಅವರು ಯಾವುದೇ ಭಯೋತ್ಪಾದಕ ಗುಂಪಿನಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಅವರ ಆಧಾರ್ ಕಾರ್ಡ್‌ಗಳು ಸೇರಿದಂತೆ ಇನ್ನೂ ಕೆಲವು ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಿಕ್ಷಕಿಯಾಗಿರುವ 42 ವರ್ಷದ ನೀಲಂ ದೇವಿ, ನಾಗರಿಕ ಸೇವೆ ಪರೀಕ್ಷೆಗಳಿಗೆ ಅಭ್ಯಾಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನೀಲಂ ಅವರ ಸಹೋದರನ ಪ್ರಕಾರ, ಅವರು ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ 2020 ರ ವಿವಾದಾತ್ಮಕ ರೈತರ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು, ಆದರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಅವರು ಸಂಬಂಧ ಹೊಂದಿಲ್ಲ ಎನ್ನಲಾಗಿದೆ.

ಹಳೆ ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಎಂಟು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ 22 ವರ್ಷಗಳ ಇಂದಿನ ದಿನವೇ ಸಂಸತ್ತಿನ ಮೇಲೆ ಇನ್ನೊಂದು ದಾಳಿ ನಡೆದಿದೆ. ಸಂಸತ್ ದಾಳಿ ನಡೆದ ದಿನವೇ, "ಸಂಸತ್ತಿನ ಅಡಿಪಾಯವನ್ನು ಅಲುಗಾಡಿಸುವ" ದಾಳಿಯನ್ನು ನಡೆಸುವುದಾಗಿ ಖಾಲಿಸ್ತಾನಿ ಭಯೋತ್ಪಾದಕ – ಗುರುಪಂತ್ ಸಿಂಗ್ ಪನ್ನುನ್ - ಬೆದರಿಕೆಯನ್ನೂ ಹಾಕಿದ್ದೂ, ಭದ್ರತಾ ವೈಫಲ್ಯದ ನಡುವೆ ಚರ್ಚೆಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News