ಸದನದಲ್ಲಿ ಗಲಾಟೆ ನಡೆಸಿದ ಆರೋಪ; ಹಿಮಾಚಲದ 7 ಬಿಜೆಪಿ ಶಾಸಕರಿಗೆ ಉಚ್ಚಾಟನೆ ಭೀತಿ

Update: 2024-03-05 04:00 GMT

ಸಾಂದರ್ಭಿಕ ಚಿತ್ರ Photo: TOI 

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯ ಬಜೆಟ್ ಸೆಷನ್ ವೇಳೆ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ, ಏಳು ಮಂದಿ ಬಿಜೆಪಿ ಶಾಸಕರಿಗೂ ಇದೀಗ ಉಚ್ಚಾಟನೆಯ ತೂಗುಗತ್ತಿ ಎದುರಾಗಿದೆ. ಫೆಬ್ರವರಿ 28ರಂದು ಸದನದಲ್ಲಿ ದಾಂಧಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಏಳು ಮಂದಿ ಬಿಜೆಪಿ ಶಾಸಕರ ವಿರುದ್ಧ ಸದನದ ಹಕ್ಕುಚ್ಯುತಿ ಸಮಿತಿ ಶಿಸ್ತುಕ್ರಮ ಆರಂಭಿಸಿದೆ.

ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಸದಸ್ಯರನ್ನು ಉಚ್ಚಾಟಿಸುವ ಸಿದ್ಧತೆ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಹೇಳಿದ್ದಾರೆ.

ಸೋಮವಾರ ಹಕ್ಕುಚ್ಯುತಿ ಸಮಿತಿ ರಚಿಸಿ ಅಂದೇ ಸಭೆ ನಡೆಸಲಾಗಿದೆ. 10 ದಿನಗಳ ಒಳಗಾಗಿ ಉತ್ತರಿಸುವಂತೆ ಶಾಸಕರಿಗೆ ಸೂಚಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿವರಿಸಿದ್ದಾರೆ. ಬಜೆಟ್ ಅಧಿವೇಶನ ನಡೆಯುತ್ತಿದ್ದ ವೇಳೆ ಫೆಬ್ರವರಿ 28ರಂದು, 15 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅಮಾನತುಗೊಳಿಸಿದ್ದರು. ಅಮಾನತುಗೊಂಡ ಶಾಸಕರನ್ನು ಸದನದಿಂದ ಹೊರಹಾಕುವಂತೆ ಸ್ಪೀಕರ್ ಅವರು ಮಾರ್ಷಲ್ ಗಳಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಶಾಸಕರು ದಾಂಧಲೆ ನಡೆಸಿದ್ದರು.

ಈ ಮಧ್ಯೆ, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರು ಮಂದಿ ಬಂಡಾಯ ಶಾಸಕರನ್ನು ತಾವು ಭೇಟಿ ಮಾಡಿ ಚರ್ಚಿಸಿದ್ದಾಗಿ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ. ಅಡ್ಡಮತದಾನಕ್ಕೆ ಏನು ಕಾರಣ ಎನ್ನುವುದನ್ನು ತಿಳಿಯುವ ಪ್ರಯತ್ನ ನಡೆಯುತ್ತಿದೆ. ಈ ಶಾಸಕರ ಭಾವನೆಗಳನ್ನು ಕೇಂದ್ರ ಮುಖಂಡರಾದ ಪ್ರಿಯಾಂಕಾಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಅವರಿಗೆ ತಿಳಿಸಲಾಗಿದೆ ಎಂದು ಸಿಂಗ್ ವಿವರಿಸಿದ್ದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಕಾಂಗ್ರೆಸ್ ಬಂಡಾಯ ಶಾಸಕರು ರಾಜಿಸಂಧಾನಕ್ಕೆ ಸಿದ್ಧರಿದ್ದಾರೆ ಎನ್ನಲಾಗಿದ್ದು, ಕಾನೂನಾತ್ಮಕವಾಗಿ ಅನರ್ಹತೆಯನ್ನು ಪ್ರಶ್ನಿಸುವ ನಿರೀಕ್ಷೆ ಇದೆ. ಇದು ಅವರ ಶಾಸಕತ್ವ ಪುನಃಸ್ಥಾಪನೆಗೆ ಮಾರ್ಗವಾಗಲಿದೆ ಎಂದು ತಿಳಿದು ಬಂದಿದೆ. ಅನರ್ಹತೆ ನಿರ್ಧಾರವನ್ನು ಪ್ರಶ್ನಿಸಿ ಈ ಶಾಸಕರು ಹೈಕೋರ್ಟ್ನಲ್ಲಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News