ಅಭಿವೃದ್ಧಿಗಾಗಿ ದೇಶದಲ್ಲಿ ಬಿಜೆಪಿಯೇತರ ಸರಕಾರ ಬರಲೇಬೇಕು: ಸಾಂಗ್ಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು/ಮಹಾರಾಷ್ಟ್ರ, ಜೂ.25: ‘ದೀನದಲಿತರು ಹಾಗೂ ಬಡವರ ಏಳಿಗೆ, ಭ್ರಷ್ಟಾಚಾರ ನಿಗ್ರಹ ಹಾಗೂ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಲು ದೇಶದಲ್ಲಿ ಬಿಜೆಪಿಯೇತರ ಸರಕಾರ ಬರಲೇಬೇಕು. ಎಲ್ಲರೂ ಒಗ್ಗಟ್ಟಾಗಿ, ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಲೊಕಸಭೆ ಚುನಾವಣೆಯನ್ನು ಗೆಲ್ಲಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ರವಿವಾರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ‘ಮಹಾ ನಿರ್ಧಾರ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿರಲಿಲ್ಲ. ಅವರ ‘ಅಚ್ಛೇ ದಿನ್ ಆಯೆಂಗೆ’ ಎಂಬ ಮಾತು ಹೇಳಿದ್ದರು. ಆದರೆ, ಆ ಮಾತು ಏನಾಯಿತು’ ಎಂದು ಪ್ರಶ್ನಿಸಿದರು.
ಹೋರಾಟಕ್ಕೆ ಸಿದ್ಧರಾಗಬೇಕು: ‘ಸಾಂಗ್ಲಿ ಜಿಲ್ಲೆ ಕಾಂಗ್ರೆಸ್‍ನ ಭದ್ರ ಕೋಟೆ. ರಾಷ್ಟ್ರನಾಯಕರನ್ನು ದೇಶಕ್ಕೆ ನೀಡಿದೆ. ಅಂಬೇಡ್ಕರ್ ಅವರು ಸಂವಿಧಾನದ ಕರ್ತೃ. ಸಂವಿಧಾನವಿರದಿದ್ದರೆ ಸಮಾಜದ ಶೋಷಿತರು, ದೀನ ದಲಿತರು, ಅಲ್ಪಸಂಖ್ಯಾತರೂ ದೇಶದ ರಾಜಕಾರಣದಲ್ಲಿ, ಸಾಮಾಜಿಕ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯಬಹುದು. ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್‍ನವರು ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಸಲಹೆ ಮಾಡಿದರು.
‘ಕೋಮುವಾದಿ ಬಿಜೆಪಿ ಸಂವಿಧಾನವನ್ನು ವಿರೋಧಿಸುತ್ತದೆ. ಸಾವರ್ಕರ್, ಗೋಲ್ವಾಲ್ಕರ್ ಸಂವಿಧಾನವನ್ನು ಅಂದೇ ವಿರೋಧಿಸಿದ್ದರು. ಧರ್ಮಗಳ ನಡುವೆ ಸಂಘರ್ಷಗಳಿಂದ ದೀನದಲಿತರು, ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ. ಹೀಗಾಗಿ ಬಿಜೆಪಿ ಕಿತ್ತೊಗೆಯಬೇಕಾದ ಜವಾಬ್ದಾರಿ ಕಾಂಗ್ರೆಸ್‍ನ ಮೇಲಿದೆ. ಪ್ರಜಾತಂತ್ರದ ರಕ್ಷಣೆಗಾಗಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಾವೆಲ್ಲರೂ ಸನ್ನದ್ಧರಾಗಬೇಕು ಎಂದು ಹೇಳಿದರು.
ಮೋದಿ ಜನಪ್ರಿಯತೆ ಮಸುಕು: ‘ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಪ್ರಧಾನಿ ಮೋದಿ ಹಾಗೂ ಕೇಂದ್ರದ ಅನೇಕ ಸಚಿವರು ರಾಜ್ಯಕ್ಕೆ ಭೇಟಿ ನೀಡಿದರು. ಆದರೂ ಕರ್ನಾಟಕದಲ್ಲಿ ಬಿಜೆಪಿ ಸೋತಿರುವುದು ಮೋದಿಯವರ ಜನಪ್ರಿಯತೆ ಮಸುಕ್ಕಾಗುತ್ತಿದೆ ಎಂಬುದರ ಸಂಕೇತ. ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ, ಜನ ವಿರೋಧಿಯಾಗಿತ್ತು. ಕೇವಲ ಪ್ರಧಾನಿ ಮೋದಿಯವರನ್ನು ನಂಬಿ ಚುನಾವಣೆ ಗೆಲ್ಲಬಹುದೆಂಬ ಬಿಜೆಪಿ ನಂಬಿಕೆ ಹುಸಿಯಾಯಿತು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಶಾಸಕಾಂಗ ಪಕ್ಷದ ನಾಯಕ ಬಾಳಾ ಸಾಹೇಬ್ ತೋರತ್, ಕೇಂದ್ರದ ಮಾಜಿ ಸಚಿವ ಪೃಥ್ವಿರಾಜ್ ಚೌಹಾಣ್, ಶಾಸಕರಾದ ವಿಕ್ರಂ ಸಾವಂತ್, ವಿಶ್ವಜಿತ್ ಕದಂ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.