ನಾಯಿ ದಾಳಿಗೆ ಸಿಲುಕಿ ಏಳು ತಿಂಗಳ ಮಗು ಮೃತ್ಯು
ಭೋಪಾಲ್: ನಾಯಿಗಳ ಗುಂಪಿನ ದಾಳಿಗೆ ಸಿಲುಕಿ ಏಳು ತಿಂಗಳ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬುಧವಾರ ಭೋಪಾಲ್ ನ ಅಯೋಧ್ಯಾನಗರ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಸಂಗತಿಯನ್ನು ಪೊಲೀಸರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ದಿನವೇ ಕುಟುಂಬದ ಸದಸ್ಯರು ಹೂಳಿದ್ದ ಬಾಲಕನ ಶವವನ್ನು ಗುಂಡಿಯಿಂದ ಹೊರ ತೆಗೆಸಿರುವ ಪೊಲೀಸರು, ಶನಿವಾರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೃತ ಬಾಲಕನ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಹೇಳಲಾಗಿದೆ.
ಘಟನೆಗೂ ಮುಂಚೆ, ಬಾಲಕನ ತಾಯಿಗೆ ಕೊಂಚ ಕೆಲಸವಿದ್ದುದರಿಂದ ಆತನನ್ನು ಘಟನಾ ಸ್ಥಳದಲ್ಲಿ ಕುಳ್ಳರಿಸಿದ್ದಳು ಎಂದು ಅಯೋಧ್ಯಾನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹೇಶ್ ನಿಲ್ಹಾರೆ ತಿಳಿಸಿದ್ದಾರೆ.
ಆಗ, ಅಲ್ಲಿಗೆ ಬಂದಿರುವ ನಾಯಿಗಳ ಗುಂಪೊಂದು ಆ ಬಾಲಕನಿಗೆ ಕಚ್ಚಿ, ಎಳೆದೊಯ್ದಿವೆ ಎಂದು ಅವರು ಹೇಳಿದ್ದಾರೆ.
ಕೂಡಲೇ ಆ ಪ್ರದೇಶದಲ್ಲಿನ ಜನರು ಈ ಬಗ್ಗೆ ಎಚ್ಚರಿಸಿದರಾದರೂ, ಆ ಹೊತ್ತಿಗಾಗಲೇ ಆ ಬಾಲಕನನ್ನು ವಿರೂಪಗೊಳಿಸಿದ್ದ ನಾಯಿಗಳ ಗುಂಪು, ಆತನ ಕೈಯೊಂದಕ್ಕೆ ತೀವ್ರ ಜಖಂ ಮಾಡಿ, ಆತನನ್ನು ಸ್ಥಳದಲ್ಲೇ ಕೊಂದು ಹಾಕಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.
ಗುನಾದ ಜಿಲ್ಲೆಯ ಮೂಲದವರಾದ ಬಾಲಕನ ಕುಟುಂಬದವರು ಮೃತ ಬಾಲಕನ ದೇಹವನ್ನು ಭೋಪಾಲ್ ಗೆ ಸಮೀಪವಿರುವ ಗ್ರಾಮವೊಂದರಲ್ಲಿ ಹೂಳಿದ್ದರು ಎಂದು ಹೇಳಿರುವ ಅವರು, ಈ ಪ್ರಕರಣದ ಕುರಿತು ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ನಡುವೆ ಜಿಲ್ಲಾಡಳಿತವು ಮೃತ ಬಾಲಕನ ಕುಟುಂಬದವರಿಗೆ ರೂ. 50,000 ಆರ್ಥಿಕ ನೆರವು ಒದಗಿಸಿದ್ದು, ಉಳಿದ ರೂ. 50,000 ನೆರವನ್ನು ಶೀಘ್ರದಲ್ಲೇ ವಿತರಿಸಲಿದೆ ಎಂದು ಹೇಳಲಾಗಿದೆ.
ಈ ಘಟನೆಯ ಬೆನ್ನಿಗೇ ಭೋಪಾಲ್ ನಗರ ಸಭೆಯು ಎಂಟು ಬೀದಿ ನಾಯಿಗಳನ್ನು ಸೆರೆ ಹಿಡಿದಿದ್ದು, ಬೀದಿ ನಾಯಿಗಳನ್ನು ಸೆರೆ ಹಿಡಿಯಲು ಅಭಿಯಾನವೊಂದನ್ನು ನಡೆಸುವಂತೆ ನಗರಸಭೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.