ಇನ್ನು ಸೂರ್ಯನ ಅಧ್ಯಯನಕ್ಕಾಗಿ ಬಾಹ್ಯಾಕಾಶ ವೀಕ್ಷಣಾಲಯ; ಸೆ. 2ರಂದು ‘ಆದಿತ್ಯ- ಎಲ್1’ ಉಡಾವಣೆ
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಮೊದಲ ಬಾಹ್ಯಾಕಾಶ ಸೌರ ವೀಕ್ಷಣಾಲಯ ‘ಆದಿತ್ಯ- ಎಲ್1’ನ್ನು ಸೆಪ್ಟಂಬರ್ 2ರಂದು ಉಡಾಯಿಸಲಿದೆ.
‘ಆದಿತ್ಯ- ಎಲ್1’ ಬಾಹ್ಯಾಕಾಶ ನೌಕೆಯು ಸೆಪ್ಟಂಬರ್ 2ರಂದು ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಕಾಶಕ್ಕೆ ಚಿಮ್ಮಲಿದೆ.
‘ಆದಿತ್ಯ- ಎಲ್1’ ಸೂರ್ಯನ ಅಧ್ಯಯನಕ್ಕೆ ಮೀಸಲಾಗಿರುವ ಭಾರತದ ಮೊದಲ ಯೋಜನೆಯಾಗಿದ್ದು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಇಸ್ರೋದ ಬಾಹ್ಯಾಕಾಶ ವೀಕ್ಷಣಾಲಯವನ್ನು ಸೂರ್ಯ-ಭೂಮಿ ಮಂಡಲದ ಲಗ್ರಾಂಜ್ ಪಾಯಿಂಟ್ 1 (ಎಲ್1)ನ ಸುತ್ತಲಿರುವ ಕಕ್ಷೆಯಲ್ಲಿ, ಅಂದರೆ ಭೂಮಿಯ ಮೇಲ್ಮೈಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಇರಿಸಲಾಗುವುದು. ಗ್ರಹಣಗಳೇ ಇರಲಿ, ಯಾವುದೇ ಆಕಾಶಕಾಯ ಭೂಮಿ ಮತ್ತು ಸೂರ್ಯನ ನಡುವೆ ಹಾದು ಹೋಗುತ್ತಿರಲಿ, ಈ ಸ್ಥಳದಿಂದ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.
ವಿವಿಧ ಸೌರ ಚಟುವಟಿಕೆಗಳು ಮತ್ತು ಬಾಹ್ಯಾಕಾಶ ವಾತಾವರಣದ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುವ ಉದ್ದೇಶವನ್ನು ಯೋಜನೆ ಹೊಂದಿದೆ. ಈ ವೀಕ್ಷಣಾಲಯದಲ್ಲಿ ಏಳು ಉಪಕರಣಗಳಿದ್ದು, ಫೋಟೊಸ್ಪೀಯರ್, ಕ್ರೋಮೋಸ್ಪಿಯರ್ ಮತ್ತು ಸೂರ್ಯನ ಅತ್ಯಂತ ಹೊರಗಿನ ಪದರವಾಗಿರುವ ಕೊರೋನವನ್ನು ವಿವಿಧ ತರಂಗಾಂತರಗಳಿಂದ ವೀಕ್ಷಿಸಲು ಸಾಧ್ಯವಾಗುತ್ತದೆ. ಇವುಗಳ ಪೈಕಿ ನಾಲ್ಕು ಉಪಕರಣಗಳು ಸೂರ್ಯನನ್ನು ನೇರವಾಗಿ ವೀಕ್ಷಿಸುತ್ತದೆ ಹಾಗೂ ಉಳಿದ ಮೂರು ಉಪಕರಣಗಳು ಎಲ್1 ಪಾಯಿಂಟ್‌ನಲ್ಲಿರುವ ಕಣಗಳು ಮತ್ತು ಕ್ಷೇತ್ರಗಳನ್ನು ಅಧ್ಯಯನ ಮಾಡುತ್ತವೆ.
ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ-ಎಕ್ಸ್‌ಎಲ್) ರಾಕೆಟ್ ಮೂಲಕ ಉಡಾಯಿಸಲಾಗುತ್ತದೆ. ಬಾಹ್ಯಾಕಾಶ ನೌಕೆಯು ಈಗಾಗಲೇ ಶ್ರೀಹರಿಕೋಟ ತಲುಪಿದೆ ಹಾಗೂ ಬಾಹ್ಯಾಕಾಶ ಯಾತ್ರೆಗೆ ಸಿದ್ಧವಾಗಿದೆ.
ಪ್ರಮುಖ ಉದ್ದೇಶಗಳು:
ಸೌರ ಗಾಳಿ ಮತ್ತು ಬಾಹ್ಯಾಕಾಶ ಹವಾಮಾನದ ರಚನೆ ಮತ್ತು ಸಂಯೋಜನೆ, ಅದರ ಹಿಂದಿನ ಕಾರಣಗಳನ್ನು ಅಧ್ಯಯನ ಮಾಡುವುದು, ಕೊರೋನಲ್ ಮಾಸ್ ಇಜೆಕ್ಷನ್ (ಸಿಎಮ್‌ಇ)ಗಳ ಪ್ರಕ್ರಿಯೆಯನ್ನು ಅರಿತುಕೊಳ್ಳುವುದು ಮತ್ತು ಸೌರ ಬಿಂಬವನ್ನು ವೀಕ್ಷಿಸುವುದು ಈ ಯೋಜನೆಯ ವೈಜ್ಞಾನಿಕ ಉದ್ದೇಶಗಳ ಪೈಕಿ ಕೆಲವು.
ಸೂರ್ಯನ ಹೊರ ವಾತಾವರಣವು ಬಿಸಿಯಾಗುವ ರೀತಿ ಹಾಗೂ ಭೂಮಿಯ ವಾತಾವರಣ ಮತ್ತು ಜಾಗತಿಕ ಹವಾಮಾನದ ಮೇಲೆ ಸೂರ್ಯನ ವಿಕಿರಣದ ಪರಿಣಾಮ ಮುಂತಾದ ಸೌರ ಭೌತಶಾಸ್ತ್ರದ ಬಗೆಹರಿಯದ ವಿಷಯಗಳ ಮೇಲೆಯೂ ಈ ಯೋಜನೆ ಗಮನ ಹರಿಸಲಿದೆ.