ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಿದ್ದ ಹೈದರಾಬಾದ್ ಯುವತಿ ಚಿಕಾಗೋ ಬೀದಿಯಲ್ಲಿ ಹಸಿವಿನಿಂದ ಪರದಾಡುತ್ತಿರುವ ವಿಡಿಯೋ ವೈರಲ್
ಚಿಕಾಗೋ : ಸ್ನಾತ್ತಕೋತ್ತರ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಿದ್ದ ಹೈದರಾಬಾದಿನ ಮಹಿಳೆ ಸಯೀದಾ ಲುಲು ಮಿನ್ಹಜ್ ಝೈದಿ ಎಂಬಾಕೆ ಚಿಕಾಗೋ ನಗರದ ರಸ್ತೆಯೊಂದರಲ್ಲಿ ಹಸಿವಿನಿಂದ ನರಳುತ್ತಾ ಬಿದ್ದಿರುವ ವಿಚಾರ ಬೆಳಕಿಗೆ ಬಂದಿದೆ.
ಈ ವಿಚಾರದತ್ತ ಎಲ್ಲರ ಗಮನ ಹರಿಸಿದವರು ತೆಲಂಗಾಣದ ಪಕ್ಷ ಮಜ್ಲಿಸ್ ಬಚಾವೋ ತೆಹ್ರೀಕ್ ಇದರ ವಕ್ತಾರ ಅಮ್ಜದ್ ಉಲ್ಲಾಹ್ ಖಾನ್ ಎಂಬವರು.
ರಸ್ತೆಯೊಂದರ ಮೂಲೆಯಲ್ಲಿ ತನ್ನ ಕೆಲ ವಸ್ತುಗಳೊಂದಿಗೆ ಕುಳಿತುಕೊಂಡಿರುವ ಆಕೆಯ ವೀಡಿಯೋವನ್ನು ಅವರು ಶೇರ್ ಮಾಡಿದ್ದಾರೆ. ಆಕೆಗೆ ತನ್ನ ಹೆಸರು ಕೂಡ ಸರಿಯಾಗಿ ನೆನಪಾಗುತ್ತಿಲ್ಲ. ಚಿಕಿತ್ಸೆಗೆ ತನ್ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು, ಅಲ್ಲಿ ರಕ್ತ ಪರೀಕ್ಷೆಗಾಗಿ ರಕ್ತ ಸಂಗ್ರಹಿಸಿದ ನಂತರ ತನ್ನ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು ಎಂದು ಆಕೆ ಹೇಳಿದ್ದಾರೆ.
ಆಕೆಯ ತಾಯಿ ಸಯೀದಾ ವಹಾಜ್ ಫಾತಿಮಾ ಅವರು ತಮ್ಮ ಪುತ್ರಿಯನ್ನು ಭಾರತಕ್ಕೆ ವಾಪಸ್ ಕರೆತರಲು ಸಹಾಯ ಮಾಡುವಂತೆ ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಆಕೆ ಡೆಟ್ರಾಯಿಟ್‌ನಲ್ಲಿರುವ ಟ್ರೈನ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಾಗಿ ತೆರಳಿದ್ದರು. ಆಕೆ ಖಿನ್ನತೆಯಿಂದ ಬಳಲುತ್ತಿದ್ದಾಳೆ, ಆಕೆಯ ಎಲ್ಲಾ ವಸ್ತುಗಳು ಕಳವಾದ ನಂತರ ಹಸಿವಿನಿಂದ ನರಳುವಂತಾಗಿದೆ ಎಂದು ಆಕೆಯ ತಾಯಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಆಕೆ ಆಗಸ್ಟ್ 2021ರಲ್ಲಿ ತೆರಳಿದ್ದಳು ನಂತರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದರೂ ಕಳೆದ ಎರಡು ತಿಂಗಳುಗಳಿಂದ ಆಕೆ ಸಂಪರ್ಕಕ್ಕೆ ದೊರೆತಿಲ್ಲ. ಆಕೆಯ ಸಮಸ್ಯೆಯ ಬಗ್ಗೆ ಇಬ್ಬರು ಹೈದರಾಬಾದ್‌ನ ಯುವಕರಿಂದ ತಿಳಿದು ಬಂತು ಎಂದು ಆಕೆಯ ತಾಯಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಚಿಕಾಗೋದ ಭಾರತೀಯ ಕಾನ್ಸುಲೇಟ್‌ಗೂ ಆಕೆ ಸಹಾಯಕ್ಕಾಗಿ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾನ್ಸುಲೇಟ್, ''ಈ ಪ್ರಕರಣದ ಬಗ್ಗೆ ನಮಗೆ ಈಗಷ್ಟೇ ತಿಳಿದು ಬಂತು. ಸಂಪರ್ಕಿಸಲು ನೇರ ಸಂದೇಶ ಕಳುಹಿಸಿ'' ಎಂದು ಉತ್ತರಿಸಿದೆ.