ಬಿಲ್ಕಿಸ್ ಬಾನು ಪ್ರಕರಣ: ಐತಿಹಾಸಿಕ ತೀರ್ಪು ನೀಡಿದ ಮಂಡ್ಯದ ಜಸ್ಟಿಸ್ ಬಿ.ವಿ. ನಾಗರತ್ನ ಬಗ್ಗೆ ಇಲ್ಲಿದೆ ಮಾಹಿತಿ...

Update: 2024-01-08 11:29 GMT

ಹೊಸದಿಲ್ಲಿ: ಗುಜರಾತ್‌ ಗಲಭೆ ಸಂದರ್ಭ ನಡೆದಿದ್ದ ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿ ಗುಜರಾತ್‌ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ ಇಂದು ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ನ್ಯಾಯಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಬೆಂಗಳೂರು ವೆಂಕಟರಾಮಯ್ಯ ನಾಗರತ್ನ ಅವರು ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆ ಸಮೀಪದ ಇಂಗಲಕುಪ್ಪೆ ಗ್ರಾಮದವರು.

ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸಿ ಗುಜರಾತ್‌ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ ಇಂದು ಮಹತ್ವದ ತೀರ್ಪು ಪ್ರಕಟಿಸಿದ ಜಸ್ಟಿಸ್‌ ಬಿ ವಿ ನಾಗರತ್ನ ಅವರ ಸುಪ್ರೀಂ ಕೋರ್ಟ್‌ ಪೀಠ, ಅಪರಾಧಿಗಳ ಶಿಕ್ಷೆ ಕಡಿತ ಪರಿಶೀಲಿಸುವಂತೆ ಗುಜರಾತ್‌ ಸರ್ಕಾರಕ್ಕೆ ಆದೇಶಿಸಿದ್ದ ಮೇ 13, 2022ರ ತೀರ್ಪು ಅಮಾನ್ಯವಾಗಿದೆ ಏಕೆಂದರೆ ಅದನ್ನು “ನ್ಯಾಯಾಲಯಕ್ಕೆ ವಂಚಿಸಿ” ಪಡೆದುಕೊಳ್ಳಲಾಗಿದೆ ಹಾಗೂ ವಾಸ್ತವಾಂಶಗಳನ್ನು ಮರೆಮಾಡಲಾಗಿತ್ತು ಎಂದು ಹೇಳಿದೆ.

“ಸಂತ್ರಸ್ತೆಯ ಹಕ್ಕುಗಳೂ ಮುಖ್ಯ, ಮಹಿಳೆ ಗೌರವಕ್ಕೆ ಅರ್ಹಳು. ಮಹಿಳೆಯರ ವಿರುದ್ಧ ನಡೆಸಲಾಗುವ ಬರ್ಬರ ಅಪರಾಧಗಳಲ್ಲಿ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಲು ಸಾಧ್ಯವೇ?,” ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಭಾರತದ ಸುಪ್ರೀಂ ಕೋರ್ಟಿನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ 2027ರಲ್ಲಿ ಅಧಿಕಾರ ವಹಿಸಲಿರುವ ನ್ಯಾಯಮೂರ್ತಿ ಬಿ ವಿ ನಾಗರತ್ನ ತಮ್ಮ ಶಾಂತಚಿತ್ತತೆಗೆ ಹಾಗೂ ನ್ಯಾಯದಾನದ ವೇಳೆ ತಮ್ಮ ಪ್ರಬಲ ಮಾತುಗಳಿಗೆ ಹೆಸರು ಪಡೆದವರು.

ನಾಗರತ್ನ ಅವರು ಕಳೆದ ಒಂದೂವರೆ ವರ್ಷದಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದು, ಹಲವು ಮಹತ್ವದ ತೀರ್ಪುಗಳ ಭಾಗವಾಗಿದ್ದಾರೆ.

“ಅಪ್ಪ ಅಥವಾ ಅಮ್ಮನಿಲ್ಲದೆ ಈ ಜಗತ್ತಿನಲ್ಲಿ ಯಾವುದೇ ಮಗು ಹುಟ್ಟುವುದಿಲ್ಲ. ಒಂದು ಮಗುವಿಗೆ ತನ್ನ ಜನ್ಮದ ವಿಚಾರದಲ್ಲಿ ಯಾವುದೇ ಪಾತ್ರವಿಲ್ಲ. ಆದುದರಿಂದ ಕಾನೂನು ಮಗುವಿನ ಹಕ್ಕನ್ನು ಮಾನ್ಯ ಮಾಡಬೇಕು. ಅಕ್ರಮ ಹೆತ್ತವರಿರಬಹುದು, ಆದರೆ ಅಕ್ರಮ ಮಕ್ಕಳಿಲ್ಲ,” ಎಂದು ತಮ್ಮ ತೀರ್ಪೊಂದನ್ನು ನೀಡುವ ವೇಳೆ ಅವರು ಗುಡುಗಿದ್ದರು.

ವ್ಯಕ್ತಿಯೊಬ್ಬನ ತಂದೆ ತನ್ನ ಮೊದಲ ವಿವಾಹ ಊರ್ಜಿತದಲ್ಲಿರುವಾಗಲೇ ಆತನ ತಾಯಿಯನ್ನು ವಿವಾಹವಾಗಿದ್ದನೆಂಬ ಕಾರಣಕ್ಕೆ ಆತನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ನಿರಾಕರಿಸಿದ್ದ ಸಂಬಂಧದ ಅರ್ಜಿಯ ಕುರಿತ ತೀರ್ಪಿನಲ್ಲಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಮೇಲಿನಂತೆ ಹೇಳಿತ್ತು.

ಇತ್ತೀಚೆಗೆ ದೆಹಲಿಯ ಐಐಸಿಯಲ್ಲಿ ನಡೆದ ಜಸ್ಟಿಸ್ ಸುನಂದಾ ಭಂಡಾರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ದೇಶದಲ್ಲಿ ಚಾಲ್ತಿಯಲ್ಲಿರುವ ಲಿಂಗ ತಾರತಮ್ಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾದರಿ ಬದಲಾವಣೆಯ ತುರ್ತು ಅಗತ್ಯದ ಕುರಿತು ಮಾತನಾಡಿದ್ದಾರೆ.

ಅಕ್ಟೋಬರ್‌ 30, 1962ರಲ್ಲಿ ಜನಿಸಿರುವ ಜಸ್ಟಿಸ್‌ ನಾಗರತ್ನ ಅವರ ತಂದೆ ಇ ಎಸ್‌ ವೆಂಕಟರಾಮಯ್ಯ ಭಾರತದ 19ನೇ ಮುಖ್ಯ ನ್ಯಾಯಮೂರ್ತಿಯಾಗಿ ಜೂನ್‌ 19, 1989 ಹಾಗೂ ಡಿಸೆಂಬರ್‌ 17, 1989 ನಡುವೆ ಸೇವೆ ಸಲ್ಲಿಸಿದ್ದರು.

ಅಕ್ಟೋಬರ್‌ 28, 1987ರಲ್ಲಿ ವಕೀಲರಾಗಿ ನೋಂದಣಿಗೊಂಡ ಜಸ್ಟಿಸ್‌ ನಾಗರತ್ನ ಬೆಂಗಳೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಫೆಬ್ರವರಿ 18, 2008ರಲ್ಲಿ ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕಗೊಂಡ ಅವರನ್ನು ಫೆಬ್ರವರಿ 17, 2010 ರಂದು ಖಾಯಂ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದರು.

ಹೈಕೋರ್ಟ್‌ ನ್ಯಾಯಾಧೀಶೆಯಾಗಿ ಹದಿಮೂರುವರೆ ವರ್ಷ ಸೇವೆ ಸಲ್ಲಿಸಿದ್ದ ಅವರು ನಂತರ ಸುಪ್ರೀಂ ಕೋರ್ಟಿಗೆ ಭಡ್ತಿ ಹೊಂದಿದ್ದರು. ಹೈಕೋರ್ಟ್‌ ಸೇವೆ ವೇಳೆ ಅವರು ಹಲವಾರು ಪ್ರಮುಖ ಪ್ರಕರಣಗಳನ್ನು ನಿಭಾಯಿಸಿದ್ದರು.

ಜಸ್ಟಿಸ್‌ ನಾಗರತ್ನ ಅವರು ಕೋವಿಡ್‌ ಪ್ರಕರಣಗಳ ವಿಚಾರಣೆ ನಡೆಸಿದ್ದ ಜಸ್ಟಿಸ್‌ ಎ ಎಸ್‌ ಓಕಾ ನೇತೃತ್ವದ ಪೀಠದ ಭಾಗವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News