ಮಲೇಶ್ಯದ ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಮೇಲೆ ಆ್ಯಸಿಡ್ ದಾಳಿ
ಕೌಲಾಲಂಪುರ : ಶಾಪಿಂಗ್ ಮಾಲೊಂದರಲ್ಲಿ ರವಿವಾರ ಮಲೇಶ್ಯದ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರರೊಬ್ಬರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಆಟಗಾರ ಫೈಸಲ್ ಹಲೀಮ್ ಕುತ್ತಿಗೆ, ಹೆಗಲು, ಕೈಗಳು ಮತ್ತು ಎದೆಯಲ್ಲಿ ಎರಡನೇ ಡಿಗ್ರಿ ಸುಟ್ಟ ಗಾಯಕ್ಕೆ ಒಳಗಾಗಿದ್ದಾರೆ ಎಂದು ಕ್ರೀಡಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿರುವ ಪೆಟಲಿಂಗ್ ಜಯ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಸೆಲಂಗೊರ್ ರಾಜ್ಯದ ಕ್ರೀಡಾ ಅಧಿಕಾರಿ ನಜ್ವಾನ್ ಹಲೀಮಿ ತಿಳಿಸಿದ್ದಾರೆ. 26 ವರ್ಷದ ಫೈಸಲ್ ಸೆಲಂಗೊರ್ ಫುಟ್ಬಾಲ್ ಕ್ಲಬ್ ನಲ್ಲಿ ವಿಂಗರ್ ಆಗಿದ್ದಾರೆ.
ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಸೆಲಂಗೊರ್ ರಾಜ್ಯದ ಪೊಲೀಸ್ ಮುಖ್ಯಾಧಿಕಾರಿ ಹುಸೈನ್ ಉಮರ್ ಖಾನ್ ತಿಳಿಸಿದ್ದಾರೆ. ಆದರೆ, ದಾಳಿಯ ಉದ್ದೇಶವೇನೆಂದು ಗೊತ್ತಾಗಿಲ್ಲ.
ಮೂರು ದಿನಗಳ ಹಿಂದೆ, ರಾಷ್ಟ್ರೀಯ ಫುಟ್ಬಾಲ್ ತಂಡದ ಇನ್ನೋರ್ವ ಆಟಗಾರ ಅಖ್ಯರ್ ರಶೀದ್ ದರೋಡೆ ಘಟನೆಯೊಂದರಲ್ಲಿ ಗಾಯಗೊಂಡಿದ್ದಾರೆ. ಟೆರೆಂಗನು ರಾಜ್ಯದಲ್ಲಿರುವ ಅವರ ಮನೆಯ ಹೊರಗಡೆ ದರೋಡೆ ನಡೆದಿದೆ.
25 ವರ್ಷದ ಅಖ್ಯರ್ ಮೇಲೆ ಇಬ್ಬರು ಅಜ್ಞಾತ ವ್ಯಕ್ತಿಗಳು ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿದ್ದರು. ಅವರ ತಲೆ ಮತ್ತು ಕಾಲಿಗೆ ತೀವ್ರ ಗಾಯವಾಗಿದೆ.