ಅದಾನಿಯಿಂದ ಸರಕಾರಿ ಖರೀದಿದಾರರಿಗೆ ಅಧಿಕ ಬೆಲೆಯಲ್ಲಿ ಕಳಪೆ ಕಲ್ಲಿದ್ದಲು ಮಾರಾಟ ಮಾಡಿ ವಂಚನೆ?: ವರದಿ‌

Update: 2024-05-22 11:57 GMT

 ಗೌತಮ್ ಅದಾನಿ | PC : PTI

ಹೊಸದಿಲ್ಲಿ: ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಕಂಪನಿಯು ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ಅತ್ಯುತ್ತಮ ದರ್ಜೆಯದು ಎಂದು ಹೇಳಿಕೊಂಡು ಮಾರಾಟ ಮಾಡುತ್ತಿದೆ ಎಂದು ಶಂಕಿಸಲಾಗಿದೆ ಎಂದು ಲಂಡನ್‌ನ ‘ದಿ ಫೈನಾನ್ಶಿಯಲ್ ಟೈಮ್ಸ್(ಎಫ್‌ಟಿ)’ತನ್ನ ಮುಖಪುಟದಲ್ಲಿ ಪ್ರಕಟಿಸಿರುವ ವರದಿಯಲ್ಲಿ ಹೇಳಿದೆ. ಆದರೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವ ಎಲ್ಲ ಆರೋಪಗಳನ್ನು ಅದಾನಿ ಕಂಪನಿಯು ತಿರಸ್ಕರಿಸಿದೆ.

ಅದಾನಿ ‘ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಇಂಧನವನ್ನಾಗಿ ಮಾರಾಟ ಮಾಡುವ ಮೂಲಕ ವಂಚಿಸುತ್ತಿದ್ದಾರೆ’ ಎಂಬ ಶಂಕೆಯು ಈ ಹಿಂದೆಯೂ ಸುದ್ದಿಯಾಗಿತ್ತು. ತನಿಖೆಗಾಗಿ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ(ಒಸಿಸಿಆರ್‌ಪಿ)ಯ ದಾಖಲೆಗಳನ್ನು ತಾನು ಪರಿಶೀಲಿಸಿರುವುದಾಗಿ ಎಫ್‌ಟಿ ಹೇಳಿದೆ. ಒಸಿಸಿಆರ್‌ಪಿ ಕೂಡ ಈ ಬಗ್ಗೆ ಸಂಶೋಧನಾ ವರದಿಯನ್ನು ಪ್ರಕಟಿಸಿದೆ.

ಈ ಆರೋಪಗಳು ಅದಾನಿಯೊಂದಿಗೆ ಗುರುತಿಸಿಕೊಂಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಸಂಭಾವ್ಯ ಪರಿಸರ ಆಯಾಮವನ್ನು ಸೇರಿಸಿವೆ. ಬಂಪರ್ ಲಾಭವನ್ನು ಗಳಿಸಲು ಅದಾನಿ ಈ ಕೆಲಸವನ್ನು ಮಾಡಿರಬಹುದು ಮತ್ತು ವಾಯುಮಾಲಿನ್ಯಕ್ಕೆ ಕಾರಣರಾಗಿರಬಹುದು ಎನ್ನಲಾಗಿದೆ. ವಿದ್ಯುತ್ ಉತ್ಪಾದನೆಗಾಗಿ ಕಡಿಮೆ ಗುಣಮಟ್ಟದ ಕಲ್ಲಿದ್ದಲಿನ ಬಳಕೆಯು ಹೆಚ್ಚಿನ ವಾಯುಮಾಲಿನ್ಯವನ್ನುಂಟು ಮಾಡುತ್ತದೆ.

ಅದಾನಿ ಕಂಪನಿಯು ಗುಜರಾತಿನಲ್ಲಿ ಪಾಕಿಸ್ತಾನದ ಗಡಿಗೆ ಸಮೀಪದ ಖಾವಡಾದಲ್ಲಿ ವಿಶ್ವದ ಅತ್ಯಂತ ಬೃಹತ್ ಪವನ ವಿದ್ಯುತ್ ಮತ್ತು ಸೌರ ವಿದ್ಯುತ್ ಸ್ಥಾವರಗಳಲ್ಲೊಂದರ ನಿರ್ಮಾಣ ಸೇರಿದಂತೆ ತನ್ನನ್ನು ನವೀಕರಿಸಬಹುದಾದ ಇಂಧನದ ಬೃಹತ್ ಉತ್ಪಾದಕನಾಗಿ ಮರು ಬ್ರ್ಯಾಂಡ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಎಫ್‌ಟಿ ಬೆಟ್ಟು ಮಾಡಿದೆ. ತಾನು ತಪ್ಪು ಮಾಡಿರುವುದನ್ನು ನಿರಾಕರಿಸುತ್ತಿರುವ ಅದಾನಿ ಗ್ರೂಪ್ ಈಗಲೂ ಭಾರತದ ಅತ್ಯಂತ ದೊಡ್ಡ ಕಲ್ಲಿದ್ದಲು ಆಮದುದಾರನಾಗಿದೆ.

ಕಂಪನಿಯ ಇನ್ವಾಯ್ಸ್‌ಗಳನ್ನು ಎಫ್‌ಟಿ ಪರಿಶೀಲಿಸಿದೆ. ಅದಾನಿ ಕಂಪನಿಯು 2014ರಲ್ಲಿ ಪ್ರತಿ ಕೆ.ಜಿ.ಗೆ 3,500 ಕ್ಯಾಲರಿಗಳನ್ನು ಒಳಗೊಂಡಿದೆ ಎಂದು ಹೇಳಲಾದ ಕಲ್ಲಿದ್ದಲನ್ನು ಇಂಡೋನೇಶ್ಯಾದಿಂದ ಖರೀದಿಸಿತ್ತು. ಇದೇ ಕಲ್ಲಿದ್ದಲನ್ನು 6,000 ಕ್ಯಾಲೋರಿಯನ್ನು ಒಳಗೊಂಡಿದೆ ಎಂದು ಹೇಳಿಕೊಂಡು ತಮಿಳುನಾಡು ಜನರೇಷನ್ ಆ್ಯಂಡ್ ಡಿಸ್ಟ್ರಿಬ್ಯೂಷನ್ ಕಂಪನಿ (ತಂಗೆಡ್ಕೋ)ಗೆ ಮಾರಾಟ ಮಾಡಿತ್ತು. 6,000 ಕ್ಯಾಲೋರಿ ಕಲ್ಲಿದ್ದಲು ಅತ್ಯುತ್ತಮ ದರ್ಜೆಯದು ಎಂದು ಪರಿಗಣಿಸಲ್ಪಟ್ಟಿದೆ. ಕಲ್ಲಿದ್ದಲು ಸಾಗಣೆ ವೆಚ್ಚವನ್ನು ಕಳೆದರೂ ಅದಾನಿ ಈ ಮಾರಾಟದಿಂದ ಶೇ.100ಕ್ಕೂ ಅಧಿಕ ಲಾಭವನ್ನು ಗಳಿಸಿರಬಹುದು ಎಂದು ಎಫ್‌ಟಿ ಎತ್ತಿ ತೋರಿಸಿದೆ.

ಇದೇ ಪೂರೈಕೆದಾರರ ಇನ್ನೂ 22 ಶಿಪ್‌ಮೆಂಟ್‌ಗಳ ದಾಖಲೆಗಳೊಂದಿಗೆ ತಾನು ತಾಳೆ ಹಾಕಿ ನೋಡಿದ್ದೇನೆ. ಎಲ್ಲವೂಗಳಲ್ಲಿ ಕಲ್ಲಿದ್ದಲಿನ ದರ್ಜೆಯನ್ನು ಉತ್ಪ್ರೇಕ್ಷಿಸಲಾಗಿದೆ,ಅಂದರೆ 1.5 ಮಿಲಿಯ ಟನ್‌ಗಳಷ್ಟು ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಅತ್ಯುತ್ತಮ ದರ್ಜೆಯದು ಎಂದು ಹೇಳಿ ಮಾರಾಟ ಮಾಡಲಾಗಿದೆ. ಸರಕಾರಿ ಸಂಸ್ಥೆ ಈ ಕಲ್ಲಿದ್ದಲನ್ನು ಖರೀದಿಸಿರುವುದರಿಂದ ಇದು ಸರಕಾರದ ಬೊಕ್ಕಸಕ್ಕೆ ನೇರವಾದ ನಷ್ಟವಾಗಿದೆ ಎಂದು ಎಫ್‌ಟಿ ತನ್ನ ವರದಿಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ ತನ್ನ ಕಡಿಮೆ ಕ್ಯಾಲೊರಿ ಕಲ್ಲಿದ್ದಲಿಗಾಗಿ ಹೆಸರಾಗಿರುವ ಇಂಡೋನೇಶ್ಯಾದ ಗಣಿಗಾರಿಕೆ ಸಮೂಹದಿಂದ ಅದಾನಿ ಕಂಪನಿಯು ಕಳಪೆ ಕಲ್ಲಿದ್ದಲನ್ನು ಖರೀದಿಸಿತ್ತು,ಆದರೆ ಅದನ್ನು ತಂಗೆಡ್ಕೋಗೆ ವಿದ್ಯುತ್ ಉತ್ಪಾದನೆಗಾಗಿ ಅತ್ಯುತ್ತಮ ದರ್ಜೆಯ ಕಲ್ಲಿದ್ದಲಿನ ದರದಲ್ಲಿ ಮಾರಾಟ ಮಾಡಿತ್ತು.

2021-23ರ ನಡುವೆ ಅದಾನಿ ಭಾರತಕ್ಕೆ ಆಮದು ಮಾಡಿಕೊಂಡ ಕಲ್ಲಿದ್ದಲಿಗಾಗಿ ಮಧ್ಯವರ್ತಿಗಳಿಗೆ 5 ಶತಕೋಟಿ ಡಾಲರ್ ಗೂ ಹೆಚ್ಚಿನ ಮೊತ್ತವನ್ನು ಪಾವತಿಸಿದ್ದರು ಮತ್ತು ಇದು ಮಾರುಕಟ್ಟೆ ಮೌಲ್ಯಕ್ಕಿಂತ ಅಧಿಕವಾಗಿತ್ತು ಎಂದು ಎಫ್‌ಟಿ ಕಳೆದ ವರ್ಷ ವರದಿ ಮಾಡಿತ್ತು. ವಿತ್ತ ಸಚಿವಾಲಯದ ತನಿಖಾ ಘಟಕ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) 2016ರಲ್ಲಿ ಕಲ್ಲಿದ್ದಲು ಬೆಲೆಗಳ ಕುರಿತು ತನಿಖೆಯನ್ನು ಆರಂಭಿಸಿತ್ತು.

ಡಿಸೆಂಬರ್ 2013ರಲ್ಲಿ ಕಲ್ಲಿದ್ದಲನ್ನು ಹೊತ್ತಿದ್ದ ಹಡಗು ಇಂಡೋನೇಶ್ಯಾದಿಂದ ಭಾರತಕ್ಕೆ ನಿರ್ಗಮಿಸಿತ್ತು ಮತ್ತು ಈ ಕಲ್ಲಿದ್ದಲಿನ ಬೆಲೆ ಪ್ರತಿ ಟನ್‌ಗೆ 28 ಡಾ‌ಲರ್ ಗಳಾಗಿದ್ದವು. ಹೊಸ ವರ್ಷದಲ್ಲಿ ಅದು ಭಾರತಕ್ಕೆ ಆಗಮಿಸಿದಾಗ ಅದಾನಿ ಕಲ್ಲಿದ್ದಲನ್ನು ತಂಗೆಡ್ಕೋಗೆ ಪ್ರತಿ ಟನ್‌ಗೆ 92 ಡಾ‌ಲರ್ ಬೆಲೆಯಲ್ಲಿ ಮಾರಾಟ ಮಾಡಿದ್ದರು ಎನ್ನುವುದನ್ನು ಎಫ್‌ಟಿ ಒಸಿಸಿಆರ್‌ಪಿಯಿಂದ ಪಡೆದುಕೊಂಡ ದಾಖಲೆಗಳು ತೋರಿಸಿವೆ.

ಬ್ರಿಟಿಷ್ ವರ್ಜಿನ್ ದ್ವೀಪದ ಮೂಲದ ಕಂಪನಿಯ ಪಾತ್ರ

ಕಲ್ಲಿದ್ದಲನ್ನು ಮೂಲತಃ ಸೌಥ ಕಲಿಮಂಟನ್‌ನ ಇಂಡೋನೇಶ್ಯಾದ ಗಣಿಗಾರಿಕೆ ಸಮೂಹ ಪಿಟಿ ಜಾನ್‌ಲಿನ್ಸ್ ಸಪ್ಲೈಸ್‌ನಿಂದ ಖರೀದಿಸಲಾಗಿತ್ತು ಮತ್ತು ಅಲ್ಲಿಯೇ ಹಡಗಿಗೆ ತುಂಬಲಾಗಿತ್ತು. ಪಿಟಿ ಜಾನ್‌ಲಿನ್‌ನ ರಫ್ತು ಘೋಷಣೆಯಲ್ಲಿ ಅಂತಿಮ ಖರೀದಿದಾರ ತಂಗೆಡ್ಕೋ ಆಗಿದೆ ಎಂದು ತಿಳಿಸಿತ್ತು ಮತ್ತು ಮಧ್ಯವರ್ತಿಯಾಗಿ ಅದಾನಿಯನ್ನು ಹೆಸರಿಸಿತ್ತು. ಆದರೆ ಜಾನಲಿನ್‌ನ ಇನ್ವಾಯ್ಸ್ ಬ್ರಿಟಿಷ್ ವರ್ಜಿನ್ ದ್ವೀಪದ ಸುಪ್ರೀಂ ಯೂನಿಯನ್ ಇನ್ವೆಸ್ಟರ್ಸ್‌ಗೆ ಹೋಗಿತ್ತು ಮತ್ತು ಅದು ಪ್ರತಿ ಟನ್‌ಗೆ 28 ಡಾ.ಬೆಲೆ ನಿಗದಿಗೊಳಿಸಿತ್ತು. ಮುಖ್ಯ ವಿಷಯವೆಂದರೆ ಒಂದು ವಾರದಲ್ಲಿ ಸುಪ್ರೀಂ ಯುನಿಯನ್ ಸಿಂಗಾಪುರದಲ್ಲಿ ಅದಾನಿಗೆ ಪ್ರತಿ ಟನ್‌ಗೆ 34 ಡಾಲರ್ ಗಳಲ್ಲಿ ಶಿಪ್‌ಮೆಂಟ್‌ನ ಇನ್ವಾಯ್ಸ್ ಮಾಡಿತ್ತು ಮತ್ತು ಕಲ್ಲಿದ್ದಲು ಪ್ರತಿ ಕೆ.ಜಿ.ಗೆ 3,500 ಕ್ಯಾಲೊರಿಗಳನ್ನು ಒಳಗೊಂಡಿದೆ ಎಂದು ಹೇಳಿತ್ತು.

ಆದರೆ ಇದೇ ಕಲ್ಲಿದ್ದಲಿಗಾಗಿ ಅದಾನಿ ತಂಗೆಡ್ಕೋಗೆ ನೀಡಿದ್ದ ಇನ್ವಾಯ್ಸ್‌ನಲ್ಲಿ ಗುಣಮಟ್ಟವು 6,000 ಕ್ಯಾಲೊರಿಗಳಿಗೆ ಜಿಗಿದಿತ್ತು ಮತ್ತು ಬೆಲೆ ಪ್ರತಿ ಟನ್‌ಗೆ 92 ಡಾ‌ಲರ್ ಗೆ ಏರಿಕೆಯಾಗಿತ್ತು. ತಂಗೆಡ್ಕೋಗೆ 22 ಶಿಪ್‌ಮೆಂಟ್‌ಗಳ ಮೂಲಕ ಅದಾನಿ ಕಂಪನಿ ಮತ್ತು ಅದರ ಮಧ್ಯವರ್ತಿಗಳು ಅಂದಾಜು ಏಳು ಕೋಟಿ ಡಾ.ಲಾಭ ಗಳಿಸಿದ್ದರು ಎಂದು ಎಫ್‌ಟಿ ಹೇಳಿದೆ.

ಅದಾನಿ ನಿರಾಕರಣೆ

ಅದಾನಿ ಕಂಪನಿಯು ಎಲ್ಲ ಆರೋಪಗಳನ್ನು ನಿರಾಕರಿಸಿದೆ. ಪೂರೈಕೆಯಾದ ಕಲ್ಲಿದ್ದಲು ಹಲವಾರು ಏಜೆನ್ಸಿಗಳಿಂದ ಹಲವಾರು ಹಂತದಲ್ಲಿ ವಿಸ್ತ್ರತ ಗುಣಮಟ್ಟ ಪರೀಕ್ಷೆಗೆ ಒಳಗಾಗಿತ್ತು ಮತ್ತು ಇದು ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಆರೋಪವು ಆಧಾರರಹಿತ ಮಾತ್ರವಲ್ಲ,ಸಂಪೂರ್ಣ ಅಸಂಬದ್ಧವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ ಎಂದು ಅದಾನಿ ಗ್ರೂಪ್‌ನ ವಕ್ತಾರರು ಎಫ್‌ಟಿಗೆ ತಿಳಿಸಿದ್ದಾರೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News