ಜ.6ರಂದು ಗಮ್ಯ ತಲುಪಲಿರುವ ಆದಿತ್ಯ-ಎಲ್1
ಹೊಸದಿಲ್ಲಿ: ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಉಡಾವಣೆಗೊಳಿಸಿರುವ ಆದಿತ್ಯ-ಎಲ್1 ನೌಕೆಯು ತನ್ನ ಯೋಜಿತ ಗಮ್ಯ ತಾಣವಾದ ಲ್ಯಾಗ್ರೆಂಜಿಯನ್ ಪಾಯಿಂಟ್(ಎಲ್1) ತಲುಪಲು ಸಿದ್ಧವಾಗಿದೆ. ಭೂಮಿಯಿಂದ 11.50 ಲಕ್ಷ ಕಿ.ಮೀ.ದೂರದಲ್ಲಿರುವ ಗುರುತ್ವಾಕರ್ಷಣ ಶೂನ್ಯ ಪ್ರದೇಶವಾದ ಎಲ್1 ಬಿಂದುವನ್ನು ಅದು ಜನವರಿ 6ರಂದು ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಅವರು ಶನಿವಾರ ತಿಳಿಸಿದ್ದಾರೆ.
ವಿಜ್ಞಾನಭಾರತಿ ಆಯೋಜಿಸಿದ ಭಾರತೀಯ ವಿಜ್ಞಾನ ಸಮ್ಮೇಳನದ ನೇಪಥ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ‘‘ ಆದಿತ್ಯ ಎಲ್1 ಜನವರಿ 6ರಂದು ಎಲ್1 ಬಿಂದುವನ್ನು ಪ್ರವೇಶಿಸಲಿದೆಯೆಂದು ನಿರೀಕ್ಷಿಸಲಾಗಿದೆ. ಸೂಕ್ತ ಸಮಯದಲ್ಲಿ ಆದಿತ್ಯ ನೌಕೆಯ ಎಲ್1 ಪ್ರವೇಶದ ನಿಖರ ದಿನಾಂಕವನ್ನು ಪ್ರಕಟಿಸಲಾಗುವುದು’’ ಎಂದವರು ತಿಳಿಸಿದರು.
ಆದಿತ್ಯ-ಎಲ್1 ಮಿಶನ್‌ನ ಸಂಕೀರ್ಣತೆಗಳ ಬಗ್ಗೆ ವಿವರಿಸಿದ ಅವರು, ‘‘ಎಲ್1 ಪಾಯಿಂಟ್ ಅನ್ನು ಆದಿತ್ಯ ನೌಕೆಯು ತಲುಪಿದ ಬೆನ್ನಲ್ಲೇ ಮತ್ತೊಮ್ಮೆ ಎಂಜಿನ್ ಅನ್ನು ಮುಂದೆ ಸಾಗದಂತೆ ಸ್ತಂಭನಗೊಳಿಸಬೇಕಾಗುತ್ತದೆ. ಹೀಗಾಗಿ ಅದು ಒಮ್ಮೆ ಎಲ್1 ಪಾಯಿಂಟ್ ಅನ್ನು ತಲುಪಿದಾಗ ಅದು ಅಲ್ಲೇ ಪರಿಭ್ರಮಿಸತೊಡಗುತ್ತದೆ ಎಂದವರು ಹೇಳಿದರು.