ದಿಲ್ಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿ ಶಾಶ್ವತ ಬಂದ್‌

Update: 2023-11-24 15:26 GMT

Photo: NDTV 

ಹೊಸದಿಲ್ಲಿ: ಭಾರತದಲ್ಲಿನ ತನ್ನ ಕಾರ್ಯಾಚರಣೆಯನ್ನು ಖಾಯಂ ಆಗಿ ನಿಲ್ಲಿಸಿರುವುದಾಗಿ ಹೊಸದಿಲ್ಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿ ಶುಕ್ರವಾರ ಪ್ರಕಟಿಸಿದೆ. ಭಾರತ ಸರಕಾರದಿಂದ ಬರುತ್ತಿರುವ ‘‘ನಿರಂತರ ಸವಾಲುಗಳು’’ ಮತ್ತು ಕಾಬೂಲ್ ನಲ್ಲಿರುವ ತಾಲಿಬಾನ್ ಆಡಳಿತದಿಂದ ಬರುತ್ತಿರುವ ‘‘ನಿರಂತರ ಒತ್ತಡ’’ಗಳ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಅದು ಹೇಳಿದೆ.

2021 ಆಗಸ್ಟ್ ನಲ್ಲಿ, ಅಫ್ಘಾನಿಸ್ತಾನ ಸರಕಾರದ ನಿಯಂತ್ರಣವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ, ಅಲ್ಲಿನ ತಾಲಿಬಾನ್ ಸರಕಾರವನ್ನು ಭಾರತ ಮಾನ್ಯ ಮಾಡಿಲ್ಲ ಮತ್ತು ಕಾಬೂಲ್ ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿದೆ. ಆದರೂ, ವೀಸಾಗಳನ್ನು ನೀಡಲು ಮತ್ತು ವ್ಯಾಪಾರ ಸಂಬಂಧಿ ವಿಷಯಗಳನ್ನು ನಿಭಾಯಿಸಲು ಅಫ್ಘಾನಿಸ್ತಾನದ ರಾಯಭಾರಿ ಫರೀದ್ ಮಮುಂಡ್ಝಾಯ್ ಮತ್ತು ಅವರ ಸಿಬ್ಬಂದಿಗೆ ಅವಕಾಶ ನೀಡಿದೆ. ಫರೀದ್ ಮತ್ತು ಇತರ ರಾಯಭಾರ ಸಿಬ್ಬಂದಿಯನ್ನು ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿಯ ಹಿಂದಿನ ಸರಕಾರ ನೇಮಿಸಿತ್ತು.

ನಮ್ಮ ರಾಜತಾಂತ್ರಿಕರಿಗೆ ಭಾರತ ಸರಕಾರವು ವೀಸಾ ವಿಸ್ತರಣೆಗಳನ್ನು ನೀಡಿಲ್ಲ ಎಂದು ಶುಕ್ರವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಅಫ್ಘಾನ್ ರಾಯಭಾರ ಕಚೇರಿ ತಿಳಿಸಿದೆ. ‘‘ರಾಜತಾಂತ್ರಿಕರೆಲ್ಲರೂ ಬೇರೆ ದೇಶಗಳಿಗೆ ಹೋಗಿದ್ದಾರೆ. ಭಾರತದಲ್ಲಿ ಈಗ ಯಾರೂ ಉಳಿದಿಲ್ಲ. ಈಗ ಭಾರತದಲ್ಲಿ ಉಳಿದಿರುವವರೆಲ್ಲರೂ ತಾಲಿಬಾನ್ ಜೊತೆಗೆ ನಂಟು ಹೊಂದಿರುವ ರಾಜತಾಂತ್ರಿಕರು. ಅವರು ತಮ್ಮ ನಿಯಮಿತ ಆನ್ಲೈನ್ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ.

ರಾಯಭಾರ ಕಚೇರಿಯನ್ನು ಭಾರತ ಸರಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

‘‘ರಾಯಭಾರ ಕಚೇರಿಯ ಭವಿಷ್ಯವನ್ನು ನಿರ್ಧರಿಸುವುದು ಈಗ ಭಾರತ ಸರಕಾರಕ್ಕೆ ಬಿಟ್ಟ ವಿಚಾರ. ಅದನ್ನು ಶಾಶ್ವತವಾಗಿ ಮುಚ್ಚುವುದೇ ಅಥವಾ ತಾಲಿಬಾನ್ ‘ರಾಜತಾಂತ್ರಿಕ’ರಿಗೆ ಹಸ್ತಾಂತರಿಸುವುದು ಸೇರಿದಂತೆ ಪರ್ಯಾಯ ವ್ಯವಸ್ಥೆ ಮಾಡುವುದೇ ಎನ್ನುವುದನ್ನು ಭಾರತ ಸರಕಾರ ನಿರ್ಧರಿಸಬೇಕಾಗಿದೆ’’ ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News