ಸ್ವೀಡನ್ನಿಂದ ಸಾವಿರ ವೋಲ್ವೊ ಕಾರು ಖರೀದಿಸಿ, 49 ವರ್ಷ ಕಳೆದರೂ ಹಣ ಪಾವತಿಸದ ಉ.ಕೊರಿಯಾ!
ಪ್ಯಾಂಗ್ಯಾಂಗ್: ವಿಶ್ವದ ಹಲವಾರು ದೇಶಗಳು ಉತ್ತರ ಕೊರಿಯಾದೊಂದಿಗೆ ಸಂಕೀರ್ಣ ಸಂಬಂಧ ಹೊಂದಿರುವಾಗ , ಆ ದೇಶದ ಸರ್ಕಾರದ ವಿರುದ್ಧ ಸ್ವೀಡನ್ ನ ಒಂದೇ ಒಂದು ದೂರು ಅನಿರೀಕ್ಷಿತವೆನಿಸಿದೆ. 49 ವರ್ಷಗಳಿಂದ ಪಾವತಿಯಾಗದ ಸಾಲವು ಬಡ್ಡಿಯೊಂದಿಗೆ ಇಂದಿಗೂ ಬೆಳೆದು ನಿಂತಿದೆ!
1974ರಲ್ಲಿ ಸ್ವೀಡನ್ ಕಂಪನಿಗಳಿಗೆ 73 ದಶಲಕ್ಷ ಡಾಲರ್ ಮೌಲ್ಯದ 1,000 ವೋಲ್ವೊ 144 ಮಾದರಿಯ ಕಾರುಗಳು ಹಾಗೂ ಇನ್ನಿತರ ತಾಂತ್ರಿಕ ಸಾಧನಗಳಿಗಾಗಿ ಉತ್ತರ ಕೊರಿಯಾವು ಆದೇಶ ನೀಡಿತ್ತು. ಆದರೆ, ಉತ್ತರ ಕೊರಿಯಾವು ಈ ಆದೇಶಕ್ಕೆ ಈವರೆಗೆ ಪಾವತಿಯನ್ನೇ ಮಾಡಿಲ್ಲ. ಕಳೆದ ಐದು ದಶಕಗಳಿಂದ ಪಾವತಿ ಬಾಕಿಯಾಗಿಯೇ ಉಳಿದಿದೆ. ಇದರಿಂದಾಗಿ ಉತ್ತರ ಕೊರಿಯಾವು ಪಾವತಿಸಬೇಕಾದ ಒಟ್ಟು ಮೊತ್ತವು ಅಂದಾಜು 330 ದಶಲಕ್ಷ ಡಾಲರ್ ಗೆ ಏರಿಕೆಯಾಗಿದೆ.
Newsweek ಸುದ್ದಿ ಸಂಸ್ಥೆಯ ಪ್ರಕಾರ, ವಿದೇಶಿ ಬಂಡವಾಳ ಹಾಗೂ ತಂತ್ರಜ್ಞಾನಕ್ಕೆ ಪ್ರವೇಶ ಪಡೆಯಲು ಉತ್ತರ ಕೊರಿಯಾವು ಪಾಶ್ಚಿಮಾತ್ಯ ಕೈಗಾರೀಕರಣಗೊಂಡ ದೇಶಗಳಿಂದ ಸಾಧನಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತ್ತು. ತನಗೆ ಸಾಲ ನೀಡಿದವರಿಗೆ ಭವಿಷ್ಯದ ಉತ್ಪಾದನೆ ಅಥವಾ ಗಣಿ ಉತ್ಪನ್ನಗಳ ಮೂಲಕ ಮರುಪಾವತಿ ಮಾಡುವುದಾಗಿ ಉತ್ತರ ಕೊರಿಯಾ ಭರವಸೆ ನೀಡಿತ್ತು. ಆದರೆ, ಶೀಘ್ರದಲ್ಲೇ ಉತ್ತರ ಕೊರಿಯಾ ಸರ್ಕಾರಕ್ಕೆ ತನ್ನ ಸಾಲಗಳನ್ನು ಮಾನ್ಯ ಮಾಡುವ ಯಾವುದೇ ಇರಾದೆ ಇಲ್ಲ ಎಂಬುದು ಸ್ಪಷ್ಟವಾಗಿತ್ತು ಎಂದು ಹೇಳಲಾಗಿದೆ.
ವೋಲ್ವೊ ಕಾರು ಖರೀದಿಗೆ ಉತ್ತರ ಕೊರಿಯಾವು ಇದುವರೆಗೆ ಪಾವತಿ ಮಾಡದಿರುವ ಸಂಗತಿಯನ್ನು ಆ ಕಾರುಗಳ ಭಾವಚಿತ್ರಗಳೊಂದಿಗೆ ಸುದ್ದಿ ಸಂಸ್ಥೆಯು ಬೆಳಕಿಗೆ ತಂದಿದ್ದು, ಈ ವಿಚಿತ್ರ ವಹಿವಾಟಿನ ಬಗ್ಗೆ ಜನರಲ್ಲಿ ಕೌತುಕ ಸೃಷ್ಟಿಯಾಗಿದೆ.
2016ರಲ್ಲಿ ಸ್ವೀಡನ್ ರಾಜತಾಂತ್ರಿಕರೊಬ್ಬರು ಮಾಡಿದ್ದ ಟ್ವೀಟ್ ಹೀಗಿದೆ: “ಈಗಲೂ ಬಲಿಷ್ಠವಾಗಿ ಮುಂದುವರಿದಿದೆ. 1974ರಲ್ಲಿ ಖರೀದಿಸಲಾದ ವೋಲ್ವೊ ಕಾರಿಗೆ ಇಂದಿಗೂ ಡಿಪಿಆರ್ಕೆಯಿಂದ ಬಾಕಿಯಿದೆ. ಚಾಂಗ್ಜಿನ್ ನಲ್ಲಿ ಟ್ಯಾಕ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.”
ಉತ್ತರ ಕೊರಿಯಾವು ಈ ಕಾರುಗಳನ್ನು ಈಗಲೂ ಬಳಕೆ ಮಾಡುತ್ತಿದ್ದು, ಬಹುತೇಕ ವಿಶೇಷ ಸಂದರ್ಭಗಳಲ್ಲಿ ಬಳಕೆ ಮಾಡುತ್ತಿದೆ. NPR ಸುದ್ದಿ ಸಂಸ್ಥೆಯ ಪ್ರಕಾರ, 1989ರಲ್ಲಿ ಅಮೆರಿಕಾ ಪತ್ರಕರ್ತ ಅರ್ಬನ್ ಲೆಹ್ನರ್ ಉತ್ತರ ಕೊರಿಯಾಗೆ ಎರಡು ವಾರಗಳ ಪ್ರವಾಸ ಕೈಗೊಂಡಿದ್ದರು. ಉತ್ತರ ಕೊರಿಯಾಗೆ ಭೇಟಿ ನೀಡುವ ಪತ್ರಕರ್ತರು ಸಾಮಾನ್ಯವಾಗಿ ವೋಲ್ವೊ 144 ಮಾದರಿಯ ಕಾರಿನಲ್ಲೇ ಪ್ರಯಾಣಿಸುತ್ತಿದ್ದರು ಹಾಗೂ ರಸ್ತೆಗಳು ಎಷ್ಟು ಖಾಲಿ ಇರುತ್ತಿದ್ದವು ಎಂದರೆ, ಚಾಲಕರು ಕಾರನ್ನು ಚಲಾಯಿಸಲು ಯಾವಾಗಲೂ ಸಾಕಷ್ಟು ರಸ್ತೆ ಲಭ್ಯವಿರುತ್ತಿತ್ತು ಎಂದು ಅವರು ಸ್ಮರಿಸಿಕೊಂಡಿದ್ದಾರೆ.