ಜಮ್ಮು- ಕಾಶ್ಮೀರ ವಿಧಾನಸಭಾ ಚುನಾವಣಾ ಕಣಕ್ಕೆ ಅಫ್ಜಲ್ ಗುರು ಸಹೋದರ

Update: 2024-09-11 04:22 GMT

PC: x.com/khardaar00

ಶ್ರೀನಗರ: ಸಂಸತ್ ಭವನದ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಗುರು ಸಹೋದರ ಐಜಾಝ್ ಅಹ್ಮದ್ ಗುರು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಸೋಪೋರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸುತ್ತಿದ್ದಾರೆ.

"ಮಗನನ್ನು ಬಂಧಿಸಿರುವುದು ನಾನು ಚುನಾವಣಾ ಕಣಕ್ಕೆ ಧುಮುಕಲು ಪ್ರಮುಖ ಕಾರಣ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಗುರು ಪುತ್ರ ಶೋಯಬ್ ಐಜಾಝ್ ಗುರು ಎಂಬಾತನನ್ನು 2023ರ ಡಿಸೆಂಬರ್ ನಲ್ಲಿ ಬಾರಾಮುಲ್ಲಾ ಪೊಲೀಸರು ಮಾದಕವಸ್ತು ಕಳ್ಳಸಾಗಾಣಿಕೆ ಆರೋಪದಲ್ಲಿ ಬಂಧಿಸಿದ್ದರು. ಪ್ರಸ್ತುತ ಆತ ಜಮ್ಮುವಿನ ಕೋತ್ ಭಲ್ವಾಲ್ ಜೈಲಿನಲ್ಲಿದ್ದಾನೆ.

ಈ ಪ್ರಕರಣದಲ್ಲಿ ಮಗನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎನ್ನುವುದು ಐಜಾಝ್ ಅವರ ಆರೋಪ. ಪ್ರಶ್ನಾರ್ಹ ಪರಿಸ್ಥಿತಿಗಳಲ್ಲಿ ಬಂಧನಕ್ಕೆ ಒಳಪಟ್ಟವರ ಪರ ಹೋರಾಡುವುದು ತಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಈ ಹಿಂದಿನ ಎಲ್ಲ ನಾಯಕರು ಸೋಪೊರ್ ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಯುವಕರ ಪುನರ್ವಸತಿಯಂತಹ ಸ್ಥಳೀಯ ಹಾಗೂ ಸುಧೀರ್ಘ ಕಾಲದಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ. ಗುರುವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಸಹೋದರ ಅಫ್ಜಲ್ ಗುರು ಹೆಸರನ್ನು ಎಲ್ಲೂ ಬಳಸಿಕೊಳ್ಳುವುದಿಲ್ಲ. ಆತನ ಹೆಸರಲ್ಲಿ ಮತ ಕೇಳುವುದಿಲ್ಲ. ನನ್ನ ಸಿದ್ಧಾಂತ ಸಂಪೂರ್ಣ ಭಿನ್ನ. ರಾಜಕೀಯ ಮುಖಂಡರಿಂದ ದ್ರೋಹಕ್ಕೆ ಒಳಗಾದ ಕಾಶ್ಮೀರದ ಜನರ ಮೇಲೆ ಅದರಲ್ಲೂ ಮುಖ್ಯವಾಗಿ ಸೋಪೊರ್ ಜನರ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News