ಸಿಯಾಚಿನ್ ಪ್ರಾಂತ್ಯದಲ್ಲಿ ಮೃತಪಟ್ಟ ಅಗ್ನಿವೀರ್ ಯೋಧ; ಭಾರತೀಯ ಸೇನೆಯಿಂದ ಗೌರವ ಸಲ್ಲಿಕೆ
Update: 2023-10-22 13:40 GMT
ಜಮ್ಮು ಮತ್ತು ಕಾಶ‍್ಮೀರ: ಸಿಯಾಚಿನ್ ನೀರ್ಗಲ್ಲ ಬಳಿಯ ಕಡಿದಾದ ಕಣಿವೆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಗ್ನಿವೀರ್ ಯೋಧರೊಬ್ಬರು ಮೃತಪಟ್ಟಿದ್ದಾರೆ ಎಂದು ರವಿವಾರ ಸೇನೆಯ ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್ ತಿಳಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೃತ ಅಗ್ನಿವೀರ್ ಯೋಧನನ್ನು ಮಹಾರಾಷ್ಟ್ರ ನಿವಾಸಿಯಾದ ಆಪರೇಟರ್ ಗವಾಟೆ ಅಕ್ಷಯ್ ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಲಕ್ಷ್ಮಣ್ ಅವರ ಸಾವಿಗೆ ನಿಖರ ಕಾರಣಗಳೇನು ಎಂದು ಈವರೆಗೆ ತಿಳಿದು ಬಂದಿಲ್ಲ.
“ಅಗ್ನಿವೀರ್ (ಆಪರೇಟರ್) ಯೋಧ ಗವಾಟೆ ಅಕ್ಷಯ್ ಲಕ್ಷ್ಮಣ್ ಕಾರ್ಯಾಚರಣೆಯ ಸಂದರ್ಭದಲ್ಲಿ ತನ್ನ ಜೀವ ತ್ಯಾಗ ಮಾಡಿರುವ ಪ್ರಪ್ರಥಮ ಅಗ್ನಿವೀರ್ ಯೋಧನಾಗಿದ್ದಾರೆ. ಅವರನ್ನು ವಿಶ್ವದ ಅತ್ಯಂತ ಎತ್ತರದ ಕದನ ಸ್ಥಳವಾದ ಸಿಯಾಚಿನ್ ನೀರ್ಗಲ್ಲಿನ ಬಳಿ ಸೇವೆಗೆ ನಿಯೋಜಿಸಲಾಗಿತ್ತು” ಎಂದು ಹೆಸರೇಳಲಿಚ್ಛಿಸದ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.