ಅಜಿತ್ ಪವಾರ್ ನಮ್ಮ ನಾಯಕ, ಎನ್ ಸಿಪಿಯಲ್ಲಿ ಯಾವುದೇ ಒಡಕು ಇಲ್ಲ: ಶರದ್ ಪವಾರ್
ಮುಂಬೈ: ತನ್ನ ಸೋದರಳಿಯ ಅಜಿತ್ ಪವಾರ್ ಇನ್ನೂ ತಮ್ಮ ಪಕ್ಷದ ನಾಯಕರಾಗಿದ್ದಾರೆ ಹಾಗೂ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರು ಶುಕ್ರವಾರ ಹೇಳಿದ್ದಾರೆ.
“ಅಜಿತ್ ಪವಾರ್ ನಮ್ಮ ನಾಯಕ. ಅದರಲ್ಲಿ ಯಾವುದೇ ತಕರಾರು ಇಲ್ಲ. ವಿಭಜನೆಯ ಅರ್ಥವೇನು? ಪಕ್ಷದಲ್ಲಿ ಯಾವಾಗ ಒಡಕಾಗುತ್ತದೆ? ರಾಷ್ಟ್ರಮಟ್ಟದಲ್ಲಿ ಪಕ್ಷದಿಂದ ದೊಡ್ಡ ಗುಂಪು ಹೊರಹೋದರೆ ಅದು ಒಡಕು. ಕೆಲವರು ಭಿನ್ನ ನಿಲುವು ತಳೆದಿದ್ದರೆ ಅದು ಪ್ರಜಾಪ್ರಭುತ್ವದಲ್ಲಿ ಅವರ ಹಕ್ಕು. ಅವರು ಭಿನ್ನ ನಿಲುವು ತಳೆದಿದ್ದರೆ ಪಕ್ಷ ಇಬ್ಭಾಗವಾಗಿದೆ ಎಂದರ್ಥವಲ್ಲ. ಇದು ಅವರ ನಿರ್ಧಾರ'' ಎಂದು ಪವಾರ್ ಬಾರಾಮತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗುರುವಾರ ಶರದ್ ಪವಾರ್ ಅವರ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಕೂಡ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ಹೇಳಿದ್ದರು ಮತ್ತು ಕೆಲವು ಎನ್ ಸಿಪಿ ಶಾಸಕರು ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರಲು ಬಿಜೆಪಿಯೇ ಕಾರಣ ಎಂದು ದೂಷಿಸಿದ್ದರು.
“ಪಕ್ಷ ಒಡೆದಿಲ್ಲ, ಕೆಲವರು ಬಿಜೆಪಿ ಜೊತೆ ಹೋಗುವ ವಿಭಿನ್ನ ನಿಲುವು ತಳೆದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದೇವೆ'' ಎಂದು ಸುಳೆ ಹೇಳಿದರು.