ಲೋಕಸಭಾ ಚುನಾವಣೆ: ಏಳನೇ ಹಂತದಲ್ಲೂ ಕಡಿಮೆ ಮತದಾನ

Update: 2024-06-02 16:55 GMT

Photo: PTI 

ಹೊಸದಿಲ್ಲಿ: ಪ್ರಸಕ್ತ ಲೋಕಸಭಾ ಚುನಾವಣೆಗೆ ಶನಿವಾರ ತೆರೆ ಬಿದ್ದಿದ್ದು, ಏಳನೇ ಹಂತದ ಚುನಾವಣೆ ನಡೆದ 57 ಕ್ಷೇತ್ರಗಳಲ್ಲಿ ಕೂಡಾ ಕಳೆದ ಬಾರಿಗಿಂತ ಕಡಿಮೆ ಮತದಾನಾಗಿದೆ. ಈ ಹಂತದಲ್ಲಿ ಶೇಕಡ 62ರಷ್ಟು ಮತದಾನವಾಗಿದ್ದು, ಆರು ಹಂತಗಳಲ್ಲಿ ಕಂಡು ಬಂದ ಇಳಿಕೆ ಪ್ರವೃತ್ತಿ ಕೊನೆಯ ಹಂತದಲ್ಲೂ ಮುಂದುವರಿದಿದೆ.

ಎಲ್ಲ ಮತದಾನ ಮಾಹಿತಿಯನ್ನು ಚುನಾವಣಾ ಆಯೋಗ ವೋಟರ್ ಟರ್ನೌಟ್ ಆ್ಯಪ್ನಲ್ಲಿ ಪರಿಷ್ಕರಿಸುತ್ತಿದ್ದು, ಅಂಚೆ ಮತದಾನವನ್ನು ಮಾತ್ರ ಫಲಿತಾಂಶದ ದಿನ ಎಣಿಕೆ ಮಾಡಲಾಗುತ್ತದೆ. ಅಖಿಲ ಭಾರತ ಮಟ್ಟದ ಶೇಕಡಾವಾರು ಮತ ಚಲಾವಣೆ ಪ್ರಮಾಣ, ಏಳನೇ ಹಂತದ ಚುನಾವಣೆಯ 17ಸಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಬಳಿಕ ಅಂತಿಮವಾಗಲಿದೆ. ಮೊದಲ ಆರು ಹಂತಗಳಲ್ಲಿ ಚುನಾವಣೆ ನಡೆದ 485 ಕ್ಷೇತ್ರಗಳಲ್ಲಿ ಶೇಕಡ 66ರಷ್ಟು ಮತದಾನವಾಗಿತ್ತು. 2019ರ ಚುನಾವಣೆಯಲ್ಲಿ ಶೇಕಡ 67.4ರಷ್ಟು ಮತದಾನವಾಗಿತ್ತು.

ಎಲ್ಲ ಹವಾಮಾನ ಮತ್ತು ಲಾಜಿಸ್ಟಿಕ್ ಸವಾಲುಗಳ ನಡುವೆಯೂ 2024ರ ಚುನಾವಣೆ ಭರ್ಜರಿ ಯಶಸ್ಸು ಗಳಿಸಲು ಕಾರಣವಾದ ಎಲ್ಲರನ್ನೂ ಚುನಾವಣಾ ಆಯೋಗ ಅಭಿನಂದಿಸಿದೆ. ಮತದಾರರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಚುನಾವಣಾ ಸಿಬ್ಬಂದಿ ಮತ್ತು ಭಧ್ರತಾ ಸಿಬ್ಬಂದಿಯ ಸಂಘಟಿತ ಪ್ರಯತ್ನಗಳು ದೇಶದ ಪ್ರಜಾಪ್ರಭುತ್ವವನ್ನು ಬಲಗೊಳಿಸಿವೆ ಎಂದು ಆಯೋಗ ಹೇಳಿದೆ.

ಶನಿವಾರ ಮತದಾನ ನಡೆದ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಅಂದರೆ ಶೇಕಡ 73.4ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದ ವರದಿಗಳೂ ಬಂದಿದ್ದು, ಜಯನಗರ ಮೀಸಲು ಕ್ಷೇತ್ರದಲ್ಲಿ ಗುಂಪೊಂದು 2 ವಿವಿಪ್ಯಾಟ್ ಯಂತ್ರಗಳ ಜತೆಗೆ ಚುನಾವಣಾ ಮತಯಂತ್ರಗಳನ್ನು ಲೂಟಿ ಮಾಡಿ, ಕೆರೆಗೆ ಎಸೆದಿದೆ.

ಬಿಹಾರದಲ್ಲಿ ಕನಿಷ್ಠ ಅಂದರೆ ಶೇಕಡ 51.9ರಷ್ಟು ಮತದಾನವಾಗಿದೆ. ಚಂಡೀಗಢದಲ್ಲಿ 67.9, ಹಿಮಾಚಲ ಪ್ರದೇಶದಲ್ಲಿ 69.8, ಜಾರ್ಖಂಡ್ ಮತ್ತು ಒಡಿಶಾದಲ್ಲಿ ತಲಾ ಶೇಕಡ 70.7, ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಕ್ರಮವಾಗಿ 59.5 ಹಾಗೂ 55.6ರಷ್ಟು ಮತದಾನ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News