ಜೀವನಾಂಶದ ತೀರ್ಪು, ಸಮಾನ ನಾಗರಿಕ ಸಂಹಿತೆ, ವಕ್ಫ್ ನಿಯಮಗಳ ರೆಕ್ಕೆ ಕತ್ತರಿಸುವ ಶ್ರಮ ಇತ್ಯಾದಿಗಳ ಕುರಿತು ಪರ್ಸನಲ್ ಲಾ ಬೋರ್ಡ್ ನಿರ್ಧಾರ

Update: 2024-07-16 10:36 GMT

ಹೊಸದಿಲ್ಲಿ: ವಿಚ್ಛೇದಿತ ಮುಸ್ಲಿಮ್ ಹೆಣ್ಣಿಗೆ ಆಕೆಯ ಪತಿಯಾಗಿದ್ದವನು ಜೀವನಾಂಶ ಪಾವತಿಸುತ್ತಿರಬೇಕೆಂದು ಇತ್ತೀಚೆಗೆ ಸುಪ್ರೀಮ್ ಕೋರ್ಟ್ ನ ದ್ವಿಸದಸ್ಯ ಪೀಠವು ನೀಡಿದ ತೀರ್ಪಿಗೆ ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿದೆ. ಈತೀರ್ಪನ್ನು ಮತ್ತು ಉತ್ತರಾಖಂಡ್ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಲ್ಲಿನ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಲಾಗುವುದು ಎಂದು ತಿಳಿಸಿದೆ. ‌

ಕಳೆದ ಭಾನುವಾರ ದೆಹಲಿಯಲ್ಲಿ ನಡೆದ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ವಿಷಯಗಳನ್ನು ಮಾತ್ರವಲ್ಲದೆ ರಾಷ್ಟ್ರೀಯ ಮಹತ್ವದ ಇತರ ಕೆಲವು ವಿಚಾರಗಳನ್ನು ಚರ್ಚೆಗೆತ್ತಿಕೊಂಡು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಭಾನುವಾರ ಸಭೆಯ ಬಳಿಕ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಬೋರ್ಡ್ ನ ನಿರ್ಣಯದ ಪ್ರತಿಗಳನ್ನು ಮಾಧ್ಯಮಗಳಿಗೆ ಒದಗಿಸಿ, ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಬೋರ್ಡ್ ನ ವಕ್ತಾರ ಡಾ. ಎಸ್.ಕ್ಯೂ.ಆರ್ ಇಲ್ಯಾಸ್ ಅವರು ಪ್ರಸ್ತುತ ನಿರ್ಣಯಗಳ ಆಶಯಗಳನ್ನು ವಿವರಿಸಿದರು.

ವಿಚ್ಛೇದನೆಯೊಂದಿಗೆ ವಿವಾಹ ಸಂಬಂಧವು ಮುರಿದು ಬೀಳುತ್ತದೆ. ವಿವಾಹವೇ ಇಲ್ಲವಾದ ಮೇಲೆ ಪುರುಷನು ಮಾಜಿ ಪತ್ನಿಗೆ ಜೀವನಾಂಶ ನೀಡಬೇಕೆನ್ನುವುದಕ್ಕೆ ಯಾವುದೇ ತಾರ್ಕಿಕ ಸಮರ್ಥನೆ ಇಲ್ಲವೆಂದು ಅವರು ಹೇಳಿದರು.

ಮುಸ್ಲಿಂ ಪರ್ಸನಲ್ ಲಾ ಗೆ ಸವಾಲಾಗಿರುವ ಪ್ರಸ್ತುತ ತೀರ್ಪಿನ ವಿರುದ್ಧ ಮತ್ತು ಈ ವರ್ಷ ಅಕ್ಟೊಬರ್ ತಿಂಗಳಿನಿಂದ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಉತ್ತರಾಖಂಡ್ ಸರಕಾರದ ನಿರ್ಧಾರದ ರದ್ದತಿಗಾಗಿ ಎಲ್ಲ ಬಗೆಯ ಕಾನೂನಾತ್ಮಕ, ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರ್ಸನಲ್ ಲಾ ಬೋರ್ಡ್ ನ ಕಾನೂನು ಸಲಹಾ ಸಮಿತಿಯು ಈ ವಿಷಯದಲ್ಲಿ ಉತ್ತರಾಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.

ಮುಸ್ಲಿಮರು ತಮ್ಮ ಕೌಟುಂಬಿಕ ವಿವಾದಗಳ ಇತ್ಯರ್ಥಕ್ಕಾಗಿ ಅವುಗಳನ್ನು ಸುಧೀರ್ಘ ಹಾಗೂ ಸಂಕೀರ್ಣ ಪ್ರಕ್ರಿಯೆಗಳನ್ನೊಳಗೊಂಡ ಕೋರ್ಟು ಕಚೇರಿಗಳ ಬಳಿಗೆ ಒಯ್ಯುವ ಬದಲು, ಶರೀಅತ್ ನ ಆಶಯಗಳ ಪ್ರಕಾರ ಶೀಘ್ರ ಪರಿಹಾರ ಒದಗಿಸುವ 'ದಾರುಲ್ ಖಝಾ' ಗಳಿಗೆ ಒಯ್ಯಬೇಕು ಎಂದು ಡಾ. ಎಸ್.ಕ್ಯೂ.ಆರ್. ಇಲ್ಯಾಸ್ ಕರೆ ನೀಡಿದರು.

ಮೋದಿಯವರ 'ಒಂದು ದೇಶ ಒಂದು ಕಾನೂನು' ಎಂಬ ನಿಲುವು ಭಾರತದಂತಹ ಬಹು ಸಂಸ್ಕೃತಿಯ ವೈವಿಧ್ಯಪೂರ್ಣ ದೇಶಕ್ಕೆ ಖಂಡಿತ ಹೇಳಿಸಿದ್ದಲ್ಲ ಎಂದು ಅವರು ಹೇಳಿದರು.

ವಕ್ಫ್ ಸೊತ್ತುಗಳ ಸ್ಥಿತಿ ಚಿಂತಾಜನಕ

ಮುಸ್ಲಿಮರ ವಕ್ಫ್ ಸೊತ್ತುಗಳ ಸಂರಕ್ಷಣೆಗಾಗಿ ಇರುವ ನಿಯಮಗಳಲ್ಲಿ ಸರಕಾರವು ಹಸ್ತಕ್ಷೇಪ ನಡೆಸುತ್ತಿದ್ದು ಅವುಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ತನ್ನ ನಿರ್ಣಯದಲ್ಲಿ ತಿಳಿಸಿರುವ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್, ಆ ಕುರಿತು ಕಳವಳ ಪ್ರಕಟಿಸಿದೆ.

ವಕ್ಫ್ ಸೊತ್ತುಗಳ ಸಮರ್ಪಕ ನಿರ್ವಹಣೆಗಾಗಿ ಸರಕಾರವು ರಾಜ್ಯ ವಕ್ಫ್ ಬೋರ್ಡ್ ಗಳನ್ನು, ಟ್ರಿಬ್ಯುನಲ್ ಗಳನ್ನು ಮತ್ತು ಸಂಬಂಧಿತ ಸಂಸ್ಥೆಗಳನ್ನು ಪೂರ್ಣರೂಪದಲ್ಲಿ ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿದೆ.

ವಕ್ಫ್ ಸೊತ್ತುಗಳ ನಿರ್ವನಿಗೆ ಸಂಬಂಧಿಸಿದಂತೆ ವಕ್ಫ್ ನಿಯಮಗಳಲ್ಲಿ 2013 ಕ್ಕೆ ಮುಂಚೆ ಮಾಡಲಾಗಿರುವ ತಿದ್ದುಪಡಿಗಳನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು. ಅಕ್ರಮವಾಗಿ ಆಕ್ರಮಿಸಲಾಗಿರುವ ವಕ್ಫ್ ಸೊತ್ತುಗಳನ್ನು ಮರಳಿ ಪಡೆಯುವುದಕ್ಕೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಸೂಕ್ತ ಅಧಿಕಾರ ನೀಡಬೇಕು. 'ಒಮ್ಮೆ ವಕ್ಫ್ ಆಗಿದ್ದರೆ ಶಾಶ್ವತ ವಕ್ಫ್' ಎಂಬುದು ವಕ್ಫ್ ಕುರಿತಂತೆ ಸರ್ವಾನುಮತದ ಧೋರಣೆಯಾಗಿದ್ದು ಎಲ್ಲರೂ ಅದನ್ನು ಗೌರವಿಸಬೇಕು ಎಂದು ಬೋರ್ಡ್ ತನ್ನ ನಿರ್ಣಯದಲ್ಲಿ ಒತ್ತಾಯಿಸಿದೆ.

ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ ಮತ್ತು ಧಾರ್ಮಿಕ ಸ್ಥಳಗಳು

ದೇಶದಲ್ಲಿ ಹಲವೆಡೆ, ವಿಶೇಷವಾಗಿ ದೆಹಲಿಯಲ್ಲಿ ಹಲವು ಐತಿಹಾಸಿಕ ಮಸೀದಿಗಳಿಗೆ ಎದುರಾಗಿರುವ ಬೆದರಿಕೆ ಮತ್ತು ಅಪಾಯದ ಕುರಿತು ಪರ್ಸನಲ್ ಲಾ ಬೋರ್ಡ್ ಕಳವಳ ಪ್ರಕಟಿಸಿದೆ. ಬಾಬರಿ ಮಸೀದಿ ಕುರಿತಾದ ತನ್ನ ತೀರ್ಪಿನಲ್ಲಿ 'ಪೂಜಾಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ'ಯ ಮಹತ್ವವನ್ನು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿನ ವರ್ಷಗಳಲ್ಲಿ ಆ ಕುರಿತು ಸಡಿಲ ಧೋರಣೆ ತಾಳಿರುವಂತೆ ತೋರುತ್ತಿದೆ. ಮಥುರಾ ಮತ್ತು ಕಾಶಿಯ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಪಕ್ಷವು ತನ್ನ ನಿಲುವನ್ನು ಮುಂದಿಡುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಅವಕಾಶ ನೀಡುತ್ತಿಲ್ಲ ಎಂದು ದೂರಿರುವ ಬೋರ್ಡ್, ನ್ಯಾಯಾಲಯಗಳು ಈ ತರದ ಹೊಸ ವಿವಾದಗಳಿಗೆ ತಡೆ ಹಾಕಿ, ಕಾನೂನಿನ ಪಾರಮ್ಯವನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದೆ.

ಗುಂಪು ಹತ್ಯೆ ಪ್ರಕರಣಗಳು

ಗುಂಪು ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿದ ಇಲ್ಯಾಸ್ ಅವರು ಇತ್ತೀಚಿನ ಲೋಕ ಸಭಾ ಚುನಾವಣೆ ಘೋಷಣೆಯಾದ ಬಳಿಕ ಒಂದೇ ತಿಂಗಳಲ್ಲಿ ಗುಂಪು ಹತ್ಯೆಯ 12 ಪ್ರಕರಣಗಳು ದಾಖಲಾಗಿದ್ದು ಇದು ತೀರಾ ಕಳವಳಕಾರಿ ಬೆಳವಣಿಗೆಯಾಗಿದೆ, ಸರ್ಕಾರ ಇವುಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬೋರ್ಡ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರೊ. ಮೋನಿಸಾ ಬುಶ್ರಾ ಅಬಿದೀ, ಆತಿಯ ಸಿದ್ದಿಕಿ, ಮೌಲಾನಾ ಅಹ್ಮದ್ ಫೈಸಲ್ ರಹ್ಮಾನಿ ಮತ್ತು ಖ್ಯಾತ ನ್ಯಾಯವಾದಿ ಕಮಾಲ್ ಫಾರೂಕಿ ಅವರು ಈ ವೇಳೆ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ್ದಲ್ಲದೆ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News