ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಪಕ್ಷಗಳು ಒಂದಾಗಬೇಕು ; ಜೈರಾಂ ರಮೇಶ್
ಗೊಡ್ಡಾ (ಜಾರ್ಖಂಡ್) : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದ್ದಾರೆ ಎಂದು ಪಕ್ಷವು ಈಗಲೂ ಭಾವಿಸಿದೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಲ್ಲರೂ ಒಂದಾಗಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ಶನಿವಾರ ಇಲ್ಲಿ ಹೇಳಿದರು.
ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ 40 ಸ್ಥಾನಗಳನ್ನಾದರೂ ಪಡೆಯಲು ಸಾಧ್ಯವೇ ಎಂದು ಮಮತಾ ಶುಕ್ರವಾರ ಅನುಮಾನ ವ್ಯಕ್ತಪಡಿಸಿದ್ದರು.
ಇಲ್ಲಿ ರಾಹುಲ್ ಗಾಂಧಿಯವರ ‘ಭಾರತ ಜೋಡೊ ನ್ಯಾಯಯಾತ್ರೆ’ಯ ನೇಪಥ್ಯದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಮೇಶ್, ‘ಮಮತಾ ಈಗಲೂ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಬಿಜೆಪಿ ವಿರುದ್ಧ ಹೋರಾಡುವುದು ತನ್ನ ಆದ್ಯತೆ ಎಂದು ಅವರು ಹೇಳುತ್ತಾರೆ, ನಮ್ಮ ಆದ್ಯತೆಯೂ ಬಿಜೆಪಿ ವಿರುದ್ಧ ಹೋರಾಟವಾಗಿದೆ. ನಾವೆಲ್ಲರೂ ಒಗ್ಗೂಡುವುದು ಒಳ್ಳೆಯದು ಎಂದು ನಾನು ಭಾವಿಸಿದ್ದೇನೆ ’ಎಂದರು.
‘‘ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಾವು ಒಂದಾಗಿಯೇ ಇದ್ದೆವು. ಆದರೆ ಏನೋ ಸಂಭವಿಸಿದ್ದಂತೆ ಕಾಣುತ್ತದೆ. ಮೊದಲು ಶಿವಸೇನೆ ವಿಭಜನೆಗೊಂಡಿತು. ನಂತರ ನಿತೀಶ್ ಕುಮಾರ್ ‘ಪಲ್ಟಿ’ ಹೊಡೆದರು. ಈಗ ಮಮತಾ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸ್ಥಳೀಯ ಮಟ್ಟದ ಚುನಾವಣೆಯಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು’’ ಎಂದರು.